ಕಾಂಗ್ರೆಸ್​ನಿಂದ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ: ಅಮಿತ್​ ಷಾ

ನವದೆಹಲಿ: ನಮಗೆ ರಾಮ ಮಂದಿರ ಆದಷ್ಟು ಬೇಗ ನಿರ್ಮಾಣವಾಗಬೇಕು. ಆದರೆ, ಕಾಂಗ್ರೆಸ್​ನಿಂದ ತಡವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಆರೋಪಿಸಿದ್ದಾರೆ.

ರಾಮಲೀಲಾ ಮೈದಾನದಲ್ಲಿ ಎರಡು ದಿನ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಶುಕ್ರವಾರ ದೇಶದ ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಅವರು, ಅಯೋಧ್ಯೆ ವಿಚಾರದಲ್ಲಿ ಕಾಂಗ್ರೆಸ್​ ತಡ ಮಾಡುತ್ತಿದೆ ಎಂದರು.

ಮುಂಬರುವ ಲೋಕಸಭೆ ಚುನಾವಣೆ ಸಿದ್ಧಾಂತಗಳ ಸಮರವಾಗಲಿದೆ ಎಂದು ವ್ಯಾಖ್ಯಾನಿಸಿದ ಷಾ, ಎರಡು ದಿವಸದ ಈ ಕಾರ್ಯಕಾರಿಣಿಯಲ್ಲಿ ಪಕ್ಷದ ಸಹಸ್ರಾರು ಕಾರ್ಯಕರ್ತರಿಗೆ ಸಾರ್ವತ್ರಿಕ ಚುನಾವಣೆಯ ಅಂತಿಮ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಮೇಲ್ವರ್ಗದ ಆರ್ಥಿಕ ದುರ್ಬಲರಿಗೂ ಸರ್ಕಾರಿ ಉದ್ಯೋಗಲ್ಲಿ ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರ ಅನೇಕ ವರ್ಷಗಳಿಂದ ಯುವಕರ ಬೇಡಿಕೆ ಎಂದ ಷಾ, ಮುಂಬರುವ ಲೋಕಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಮತ್ತು ನಾಯಕರೇ ಇಲ್ಲದ ಮೈತ್ರಿ ಒಕ್ಕೂಟದ ನಡುವೆ ನಡೆಯಲಿರುವ ಸಮರ. ಈ ಸಮರದಲ್ಲಿ ಬಿಜೆಪಿಗೆ ಗೆಲುವು ಖಚಿತ ಎಂದರು. (ಏಜೆನ್ಸೀಸ್)