ಕೋರ್​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್​: ಶೋಭಾಗೆ ಸ್ಥಾನ ನೀಡಲು ಸಚಿವ ಹೆಗಡೆ ಜತೆ ಬಿಎಸ್​ವೈ ಪೈಪೋಟಿ

ಬೆಂಗಳೂರು: ಕೇಂದ್ರದಲ್ಲಿ ಸಚಿವರಾಗಿದ್ದ ಅನಂತ​ಕುಮಾರ್​ ಅವರ ನಿಧನದಿಂದ ತೆರವಾಗಿರುವ ರಾಜ್ಯ ಕೋರ್​ ಕಮಿಟಿಯ ಸದಸ್ಯ ಸ್ಥಾನ ತುಂಬುವ ವಿಚಾರವಾಗಿ ಬಿಜೆಪಿಯಲ್ಲಿ ಹಗ್ಗಜಗ್ಗಾಟ ಏರ್ಪಟ್ಟಿದೆ.

ತಮ್ಮ ಆಪ್ತರಾದ ಶೋಭಾ ಕರಂದ್ಲಾಜೆ ಅಥವಾ ಶ್ರೀರಾಮುಲು ಅವರಿಗೆ ಕೋರ್​ ಕಮಿಟಿಯಲ್ಲಿ ಸ್ಥಾನ ನೀಡಲು ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಸಮಿತಿ ಸೇರಲು ಕೇಂದ್ರ ಸಚಿವ ಅನಂತ್​ಕುಮಾರ್​ ಹೆಗಡೆ ಶತಪ್ರಯತ್ನ ನಡೆಸುತ್ತಿದ್ದರೆ.

ಶೋಭಾ ಕರಂದ್ಲಾಜೆ ಅವರನ್ನು ಕೋರ್​ ಕಮಿಟಿಗೆ ಸೇರಿಸಿಕೊಳ್ಳಲು ಪಕ್ಷದಲ್ಲಿ ವಿರೋಧವಿದೆ ಎನ್ನಲಾಗಿದೆ. ಹಾಗೊಂದು ವೇಳೆ ವಿರೋಧ ತೀವ್ರಗೊಂಡರೆ ಶೋಭಾ ಬದಲಿಗೆ ಶ್ರೀರಾಮುಲು ಅವರಿಗೆ ಸ್ಥಾನ ಕಲ್ಪಿಸುವುದು ಯಡಿಯೂರಪ್ಪ ಅವರ ಉದ್ದೇಶ. ಈ ಮೂಲಕ ವಾಲ್ಮೀಕಿ ಸಮುದಾಯಕ್ಕೆ ಮತ್ತಷ್ಟು ಪ್ರಾಮುಖ್ಯತೆ ನೀಡುವುದು ಈ ಉದ್ದೇಶದ ಹಿಂದನ ತಂತ್ರ ಎನ್ನಲಾಗಿದೆ. ಆದರೆ, ಶತಾಯಗತಾಯ ಕೋರ್​ ಕಮಿಟಿಗೆ ಸೇರುವ ಹಟಕ್ಕೆ ಬಿದ್ದಿರುವ ಸಚಿವ ಅನಂತ್​ಕುಮಾರ್​ ಹೆಗಡೆ, ಕೇಂದ್ರದ ನಾಯಕರ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಹೆಗಡೆ ಅವರಿಗೆ ಸ್ಥಾನ ನೀಡುವ ವಿಚಾರವಾಗಿಯೂ ಬಿಜೆಪಿಯಲ್ಲಿ ವಿರೋಧಗಳಿವೆ ಎನ್ನಲಾಗಿದೆ.

11 ಸದಸ್ಯರಿರುವ ರಾಜ್ಯ ಬಿಜೆಪಿ ಕೋರ್​ ಕಮಿಟಿಯಲ್ಲಿ ಸದ್ಯ ಅನಂತ್​ಕುಮಾರ್​ ಅವರ ನಿಧನದಿಂದ ಒಂದು ಸ್ಥಾನ ತೆರವಾಗಿದೆ.