ಉಡುಪಿ ಬಿಜೆಪಿ ಗೆಲುವಿನ ದಂಡಯಾತ್ರೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ದಾಖಲೆಯ ಜಯ ದಾಖಲಿಸಿದೆ. ಎರಡನೇ ಅವಧಿಗೆ ಶೋಭಾ ಕರಂದ್ಲಾಜೆ 7,18,916 ಮತ ಪಡೆದು 3,49,599 ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಮೈತ್ರಿ ಪಕ್ಷಗಳ ಅಭ್ಯರ್ಥಿ- ಪ್ರತಿಸ್ಪರ್ಧಿ ಪ್ರಮೋದ್ ಮಧ್ವರಾಜ್ ಭಾರಿ ಅಂತರದ ಪರಾಜಯ ಅನುಭವಿಸಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿಯಿಂದ, ಕೆ.ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆಗ ಶೋಭಾ 5,81,168 ಹಾಗೂ ಹೆಗ್ಡೆ 3,99,525 ಮತ ಗಳಿಸಿದ್ದರು. ಗೆಲುವಿನ ಅಂತರ 1,81,643 ಆಗಿತ್ತು. ಈ ಬಾರಿ ಅದು ಮತ್ತಷ್ಟು ವೃದ್ಧಿಯಾಗಿದ್ದು, ಕಳೆದ ಬಾರಿಗಿಂತ 1,67,956 ಹೆಚ್ಚು ಮತ ಬಿಜೆಪಿ ಅಭ್ಯರ್ಥಿಗೆ ಲಭಿಸಿದೆ. 3,49,599 ಮತಗಳ ಅಂತರ ಶೋಭಾ ಅವರದ್ದಾಗಿದೆ. ಇಷ್ಟು ಮತಗಳ ಅಂತರ ಈ ಕ್ಷೇತ್ರದಲ್ಲಿ ದಾಖಲೆ.

ಮತ ಎಣಿಕೆ: ಏ.18ರಂದು ಮತದಾನ ನಡೆದ 35 ದಿನಗಳ ಬಳಿಕ ಗುರುವಾರ ಅಜ್ಜರಕಾಡು ಸೇಂಟ್ ಸಿಸಿಲಿ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಬೆಳಗ್ಗೆ ಕ್ಲಪ್ತ ಸಮಯಕ್ಕೆ ಮತಎಣಿಕೆ ಆರಂಭವಾಗಿದ್ದರೂ, ಮೊದಲ ಹಂತದ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಬವಾಗಿದ್ದು, ಗೊಂದಲಕ್ಕೆ ಕಾರಣವಾಗಿತ್ತು.
ಬೆಳಗ್ಗೆ 7.30ಕ್ಕೆ ಕ್ಷೇತ್ರ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸಮ್ಮುಖದಲ್ಲಿ ಮತಯಂತ್ರ ಪೆಟ್ಟಿಗೆಯಿದ್ದ ಸ್ಟ್ರಾಂಗ್ ರೂಮ್ ಬೀಗ ತೆರೆಯಲಾಯಿತು. 8 ಗಂಟೆ ನಂತರ ಅಂಚೆ ಮತ ಎಣಿಕೆ ಆರಂಭ, ಇವಿಎಂ ಮತಪೆಟ್ಟಿಗೆ ಎಣಿಕೆ ಆರಂಭದ ನಡುವೆ ವಿಳಂಬವಾಗಿದೆ. ಬೆಳಗ್ಗೆ 9.30 ಗಂಟೆ ಕಳೆದರೂ ಆಯೋಗದ ಅಧಿಕೃತ ವೆಬ್‌ಸೈಟ್ ಅಥವಾ ಮೈಕ್ ಮೂಲಕ ಫಲಿತಾಂಶ ಪ್ರಕಟಿಸದಿರುವುದು ಗೊಂದಲ ಸೃಷ್ಟಿಸಿತು. ಮಾಧ್ಯಮದವರು ಅಸಮಾಧಾನ ವ್ಯಕ್ತಪಡಿಸಿ, ಮತಯಂತ್ರ ಎಣಿಕೆ ಕೇಂದ್ರದ ಪ್ರವೇಶದ್ವಾರದ ಬಳಿ ಅಧಿಕಾರಿಗಳು, ಪೊಲೀಸರೊಂದಿಗೆ ಚರ್ಚೆ ನಡೆಸಿದರು. ಸ್ಟ್ರಾಂಗ್ ರೂಮ್ ತೆರೆಯುವ ಪ್ರಕ್ರಿಯೆ, ಅಂಚೆ ಮತ ಎಣಿಕೆಯಲ್ಲಿ ನಿಧಾನವಾದ್ದರಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಬೆಳಗ್ಗೆ 10.45ಕ್ಕೆ ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸ್ವತಃ ಮೈಕ್ ಮೂಲಕ ಮೊದಲ ಸುತ್ತಿನ ಫಲಿತಾಂಶ ಪ್ರಕಟಿಸಿದರು.

ಯಾರಿಗೆ ಎಷ್ಟು ಮತ?
1. ಶೋಭಾ ಕರಂದ್ಲಾಜೆ (ಬಿಜೆಪಿ): 7,18,916
2. ಪ್ರಮೋದ್ ಮಧ್ವರಾಜ್ (ಜೆಡಿಎಸ್): 3,69,317
3. ಟಿ.ಪರಮೇಶ್ವರ್ (ಬಿಎಸ್‌ಪಿ): 15,947
4. ಅಮೃತ್ ಶೆಣೈ (ಪಕ್ಷೇತರ) :7981
5. ಪಿ.ಗೌತಮ್ ಪ್ರಭು (ಶಿವಸೇನೆ): 7431
6. ಅಬ್ದುಲ್ ರೆಹಮಾನ್ ( ಪಕ್ಷೇತರ): 6017
7. ಎಂ.ಕೆ ದಯಾನಂದ (ಪ್ರೌಟಿಸ್ಟ್ ಸರ್ವ ಸಮಾಜ್): 3539
8. ಕೆ.ಸಿ ಪ್ರಕಾಶ್ (ಪಕ್ಷೇತರ) : 3543
9. ಮಗ್ಗಲಮಕ್ಕಿ ಕೆ.ಗಣೇಶ್ (ಪಕ್ಷೇತರ) : 3526
10. ಸುರೇಶ್ ಕುಂದರ್ (ಯುಪಿಪಿ): 3488
11. ಕಾಮ್ರೆಡ್ ವಿಜಯ್‌ಕುಮಾರ್(ಸಿಪಿಐಎಂ ಲೆನಿನಿಸ್ಟ್ ರೆಡ್ ಸ್ಟಾರ್): 2216
12. ಶೇಖರ್ ಹಾವಂಜೆ (ಆರ್‌ಪಿಐ): 1581

ನೋಟಾ ಮತಗಳು: 7510
ಚಲಾವಣೆಯಾದ ಒಟ್ಟು ಮತಗಳು: 11,48,768

ಮತ ಎಣಿಕೆ ಕೇಂದ್ರಕ್ಕೆ ಶೋಭಾ ಆಗಮನ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬೆಳಗ್ಗೆ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ, ಶ್ರೀಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಮಾಡಿ ಕಡಿಯಾಳಿ ಬಿಜೆಪಿ ಕಚೇರಿಗೆ ತೆರಳಿ ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ಫಲಿತಾಂಶ ವೀಕ್ಷಿಸಿದರು. 1 ಲಕ್ಷ ಮತಗಳ ಲೀಡ್ ಖಚಿತವಾಗುತ್ತಿದ್ದಂತೆ ನಾಯಕರಾದ ಭಾರತಿ ಶೆಟ್ಟಿ, ಸುರೇಶ್ ನಾಯಕ್ ಕುಯ್ಲಡಿ, ಕುತ್ಯಾರು ನವೀನ್ ಶೆಟ್ಟಿ ಅವರೊಡನೆ ಮತಯಂತ್ರ ಕೇಂದ್ರಕ್ಕೆ ಆಗಮಿಸಿದರು.

ಮತ ಎಣಿಕೆ ಕೇಂದ್ರದತ್ತ ಸುಳಿಯದ ಪ್ರಮೋದ್: ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ ಎಣಿಕೆ ಕೇಂದ್ರದತ್ತ ಸುಳಿಯಲೇ ಇಲ್ಲ. ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಳಗ್ಗೆ 7.30ರ ಸುಮಾರಿಗೆ ಭೇಟಿ ನೀಡಿದರು. ಮತ ಎಣಿಕೆ ಕೇಂದ್ರದ ಏಜೆಂಟ್‌ಗಳ ಜತೆಗೆ ಮಾತುಕತೆ ನಡೆಸಿ ಮನೆಗೆ ಹಿಂದಿರುಗಿ ಮನೆಯಲ್ಲಿ ನಡೆಯುತ್ತಿರುವ ಪೂಜೆಯಲ್ಲಿ ಪಾಲ್ಗೊಂಡರು. ಚುನಾವಣೆ ಸೋಲಿನ ಬಗ್ಗೆ ಟ್ವೀಟರ್‌ನಲ್ಲಷ್ಟೇ ಪ್ರತಿಕ್ರಿಯೆ ನೀಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆಯಿಂದಲೇ ಸೋಲಾಗಿದೆ. ಬಿಜೆಪಿಯ ಪರವಾಗಿ ಪ್ರಬಲ ಅಲೆ ಇದ್ದಾಗ ಇಲ್ಲಿ ನಾವೆಲ್ಲರೂ ಅಸಹಾಯಕರು. ಮತದಾರರೇ ಪ್ರಭುಗಳು, ಅವರು ನೀಡಿರುವ ತೀರ್ಪನ್ನು ನಾನು ಯಾವುದೇ ಹಿಂಜರಿಕೆ ಇಲ್ಲದೆ ವಿನಮ್ರವಾಗಿ ಸ್ವೀಕರಿಸುತ್ತೇನೆ.
– ಪ್ರಮೋದ್ ಮಧ್ವರಾಜ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ

Leave a Reply

Your email address will not be published. Required fields are marked *