ರಾಹುಲ್‌ ಗಾಂಧಿ ಹಸ್ತಕ್ಷೇಪದಿಂದಲೇ ರಾಜೀನಾಮೆ ನೀಡಿ ಹೊರಬಂದೆ: ಎಸ್‌ ಎಂ ಕೃಷ್ಣ

ಮಂಡ್ಯ: ಭಾರತದ ನಿರ್ಣಾಯಕ ಘಟ್ಟ ಮುಟ್ಟುತ್ತಿದ್ದೇವೆ. 2014ರಲ್ಲಿ ದೇಶದಲ್ಲಿ ದೊಡ್ಡ ಕ್ರಾಂತಿ ನಡೆಯಿತು. ಆ ಕ್ರಾಂತಿಯೇ ಪ್ರಧಾನಿ ನರೇಂದ್ರ ಮೋದಿ. ಮೋದಿ 5 ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದ್ದಾರೆ.

ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬೆಂಗಳೂರು ಉತ್ತರದಿಂದ ದೇವೇಗೌಡರ ವಿರುದ್ಧ ಸ್ಪರ್ಧಿಸುವುದಿಲ್ಲ. ಯಡಿಯೂರಪ್ಪ ವಿರುದ್ಧದ ಸಿಎಂ ಆಡಿಯೋ ಬಾಂಬ್ ವಿಚಾರವಾಗಿ ಈಗಾಗಲೇ ಯಡಿಯೂರಪ್ಪ ಉತ್ತರ ಕೊಟ್ಟಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ನನಗಿಲ್ಲ. ಸಮ್ಮಿಶ್ರ ಸರ್ಕಾರ ಉಳಿಯುವ ಬಗ್ಗೆ ಸರ್ಕಾರ ಮಾಡಿರುವವರೇ ಉತ್ತರ ಕೊಡಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ.

ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಐದು ವರ್ಷ ಅಧಿಕಾರದಲ್ಲಿರಲಿ. ಯಡಿಯೂರಪ್ಪ ಸಹ ಸರ್ಕಾರ ಇರಲಿ. ನಾವು ಪ್ರತಿಪಕ್ಷದಲ್ಲಿರುತ್ತೇವೆ ಎಂದಿದ್ದಾರೆ. ಸರ್ಕಾರ ಬೀಳಿಸಲು ಯಡಿಯೂರಪ್ಪ ಸೇರಿ ಬಿಜೆಪಿಯ ಯಾರೂ ಸಹ ಯತ್ನ ಮಾಡಿಲ್ಲ. ಸಮ್ಮಿಶ್ರ ಸರ್ಕಾರದ ಆಂತರಿಕ ಭಿನ್ನಮತಗಳಿಂದ ಗೊಂದಲ ಉಂಟಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕೆಲವು ಭಾಗದಲ್ಲಿ ನಾನು ಪ್ರಚಾರಕ್ಕೆ ಹೋಗುತ್ತೇನೆ. ನಾನು ಬಿಜೆಪಿಯಿಂದ ಯಾವ ಅಧಿಕಾರವನ್ನು‌ ಅಪೇಕ್ಷೆ ಮಾಡಿಲ್ಲ. ಮೋದಿ ಪ್ರಧಾನಿ ಆಗಬೇಕೆಂಬುದು ನನ್ನ ಆಸೆ ಎಂದರು.

2009ರಿಂದ 2014ರ ವರೆಗೆ ಇದ್ದ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಅಧಿಕಾರದಲ್ಲಿದ್ದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆಗಲೇ ಹಗರಣಗಳು ಹೆಚ್ಚಾದವು. ಕಾಮನ್‌ವೆಲ್ತ್‌, 2ಜಿ, ಕಲ್ಲಿದ್ದಲು ಹಗರಣಗಳು ನಡೆದವು. ಮೋದಿ ಕೊಟ್ಟ ಶ್ರೇಷ್ಠ ಕೊಡುಗೆ ಸ್ಕ್ಯಾಂ ಫ್ರೀ ಸರ್ಕಾರ. ಹಗರಣ ಮುಕ್ತ ಸರ್ಕಾರ ಕೊಟ್ಟು ಕ್ರಾಂತಿ ಮಾಡಿದರು. 80 ವರ್ಷ ಆದರೂ ಮಂತ್ರಿ ಆಗಬಾರದು ಎಂದು ಫರ್ಮಾನು ಹೊರಡಿಸಿದರು. ಆ ವಿಷಯ ತಿಳಿಯುತ್ತಿದ್ದಂತೆ ರಾಜೀನಾಮೆ ಕೊಟ್ಟು ಹೊರಬಂದೆ. ಮನಮೋಹನ್ ಸಿಂಗ್‌ಗೆ ಗೊತ್ತಿಲ್ಲದಂತೆ ಹಲವು ವಿಚಾರಗಳು ನಡೆಯುತ್ತಿದ್ದವು. ಪ್ರಧಾನಿ ಜಾರಿಗೆ ತರಲು ನಿರ್ಧರಿಸಿದ್ದ ಮಸೂದೆಯನ್ನು ರಾಹುಲ್ ಹರಿದು ಹಾಕಿದರು. ಎಲ್ಲೋ ಕುಳಿತಿದ್ದ ರಾಹುಲ್ ಆಡಳಿತದಲ್ಲಿ ಹಸ್ತಕ್ಷೇಪ ಹೆಚ್ಚಿತ್ತು. ಮೋದಿ ಆಡಳಿತ ಮತ್ತೊಮ್ಮೆ ದೇಶಕ್ಕೆ ಬೇಕು. ಮಂಡ್ಯದಲ್ಲೂ ಈ ಸಲ ಖಾತೆ ತೆರೆಯಬೇಕು ಎಂದು ತಿಳಿಸಿದರು.

ಈಗ ಬಂದು ಮುದುಡಿ ಹೋಗುವ ಪಕ್ಷ ಬಿಜೆಪಿಯಲ್ಲ. ಯುವ ಜನಾಂಗಕ್ಕೆ ಸ್ಫೂರ್ತಿ ತರುವುದು ಬಿಜೆಪಿ ಧ್ಯೇಯ. ಧರ್ಮರಾಯನ ಆಡಳಿತ ನೀಡಿದ ವಾಜಪೇಯಿ ಅಂಥವರು ಇದ್ದ ಬಿಜೆಪಿ ಪಕ್ಷಕ್ಕೆ ಬಂದಿರುವುದು ನನ್ನ ಭಾಗ್ಯ. ಮೋದಿ ಸೋಲಿಸಲು 20ಕ್ಕೂ ಹೆಚ್ಚು ಪಕ್ಷಗಳು ಒಂದಾಗಿವೆ. ಆ ಪಕ್ಷಗಳಲ್ಲಿ ನಾಯಕತ್ವ ಯಾರದ್ದು ಎನ್ನುವುದೇ ಗೊತ್ತಿಲ್ಲ. ಅದಕ್ಕಾಗಿಯೇ ಚುನಾವಣೆ ಬಳಿಕ ಹೇಳುತ್ತೀವಿ ಎನ್ನುತ್ತಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್)