ಗಣಿನಾಡಲ್ಲಿ ಮತ್ತೆ ಶಿವ-ರಾಮ ಯುದ್ಧ!

| ಅಶೋಕ ನೀಮಕರ್ ಬಳ್ಳಾರಿ

ಗಣಿನಾಡು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಪರೋಕ್ಷವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನಡುವೆಯೇ ಹಣಾಹಣಿ ನಡೆಯುವುದು ಸ್ಪಷ್ಟ. ಕಾಂಗ್ರೆಸ್​ನಿಂದ ಹಾಲಿ ಸಂಸದ ವಿ.ಎಸ್.ಉಗ್ರಪ್ಪ ಸ್ಪರ್ಧೆ ಖಚಿತವಾಗಿದ್ದರೆ, ಅಭ್ಯರ್ಥಿ ಶೋಧದಲ್ಲಿ ಬಿಜೆಪಿ ತೊಡಗಿದೆ. ಬಳ್ಳಾರಿ ಕ್ಷೇತ್ರ ಸತತ 14 ಬಾರಿ ಕೈ ವಶವಾಗಿತ್ತು. 2004ರ ಚುನಾವಣೆಯಲ್ಲಿ ಕಮಲ ಅರಳಿಸುವಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಯಶಸ್ವಿಯಾಗಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಬಳಿಕ 2009 ಹಾಗೂ 2014ರಲ್ಲಿ ನಡೆದ ಚುನಾವಣೆಯಲ್ಲಿ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಕೇಸರಿ ಪಡೆ ಗೆದ್ದಿರುವ ಮೂರು ಅವಧಿಗೆ ರೆಡ್ಡಿ ಹಾಗೂ ರಾಮುಲು ಕುಟುಂಬದವರೇ ಕ್ಷೇತ್ರ ಪ್ರತಿನಿಧಿಸಿದ್ದರು.

ಶ್ರೀರಾಮುಲು ರಾಜೀನಾಮೆ ಹಿನ್ನೆಲೆಯಲ್ಲಿ 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ರಾಮುಲು ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಸ್ಪರ್ಧಿಸಿದ್ದರೂ ರೆಡ್ಡಿ-ರಾಮುಲು ಜೋಡಿ ಕರಾಮತ್ತು ನಡೆದಿರಲಿಲ್ಲ. ಡಿ.ಕೆ.ಶಿವಕುಮಾರ್ ಅಬ್ಬರ, ತಂತ್ರಗಾರಿಕೆಗೆ ಬಿಜೆಪಿ ಶರಣಾಗಿತ್ತು. 2015ರಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಉಪಚುನಾವಣೆ ಬಳಿಕ ಡಿಕೆಶಿ ಎರಡನೇ ಬಾರಿಗೆ ಬಳ್ಳಾರಿಯಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಸಚಿವರಾಗಿದ್ದರೂ ಜಿಲ್ಲಾ ಉಸ್ತುವಾರಿಯಾಗಿ ಶಿವಕುಮಾರ್ ಮುಂದುವರಿದಿದ್ದಾರೆ. ಇದರಿಂದಾಗಿ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಬದಲಿಗೆ ರಾಮುಲು ಹಾಗೂ ಡಿಕೆಶಿ ನಡುವೆ ಪರೋಕ್ಷ ಸೆಣಸಾಟ ನಡೆಯುವುದು ಖಚಿತವಾಗಿದೆ.

ಹುಸಿಯಾದ ಆದರ್ಶ ಗ್ರಾಮ

ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ 9.35 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದೆ. 19.5 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಕೆಲವು ಕೈಮಗ್ಗ ಕಾರ್ವಿುಕರಿಗೆ ಮನೆ ಹಾಗೂ ಆಧುನಿಕ ಉಪಕರಣಗಳನ್ನು ವಿತರಿಸಲಾಗಿದೆ. 20 ಲಕ್ಷ ರೂ. ವೆಚ್ಚದಲ್ಲಿ ಹಾಲು ಶಿಥಿಲೀಕರಣ ಕೇಂದ್ರ, ಸ್ವಚ್ಛ ಭಾರತ ಯೋಜನೆಯಲ್ಲಿ ಶೌಚಗೃಹಗಳ ನಿರ್ವಣಕ್ಕೆ 15 ಲಕ್ಷ ರೂ. ಅನುದಾನ ನೀಡಲಾಗಿದೆ. ಆದರೂ, ಗ್ರಾಮದಲ್ಲಿ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಆಗಿಲ್ಲ. ಬಹುತೇಕ ಭರವಸೆಗಳು ಹುಸಿಯಾಗಿವೆ ಎಂಬುದು ಗ್ರಾಮಸ್ಥರ ಆರೋಪ.

ಸಾವಿರಾರು ಕೋಟಿ ಅನುದಾನ

ಶ್ರೀರಾಮುಲು ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ವಿಚಾರವಾಗಿ ದೊಡ್ಡ ಪಟ್ಟಿಯೇ ಇದೆ. ಆದರೆ, ಉಪ ಚುನಾವಣೆಯಲ್ಲಿ ಪ್ರತಿಪಕ್ಷಗಳ ಟೀಕೆಗಳಿಗೆ ಸಮರ್ಥ ಉತ್ತರ ನೀಡುವಲ್ಲಿ ರಾಮುಲು ಎಡವಿದ್ದರು. ಅವರು ಸಂಸದರಾಗಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 20 ಕೋಟಿ ರೂ. ಬಿಡುಗಡೆ ಯಾಗಿದ್ದು, 258 ಕಾಮಗಾರಿ ಕೈಗೊಂಡಿದ್ದರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕ್ಷೇತ್ರಕ್ಕೆ 9,000 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ. ರೈಲ್ವೆ, ಸಿಆರ್​ಎಫ್, ರಾಷ್ಟ್ರೀಯ ಹೆದ್ದಾರಿ ನಿರ್ವಣ, ಅಮೃತ್ ಯೋಜನೆ, ಸಮಗ್ರ ವಿದ್ಯುತ್ ಅಭಿವೃದ್ಧಿ ಸೇರಿ ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ನಗರದಲ್ಲಿ ಪಾಸ್​ಪೋರ್ಟ್ ಸೇವಾ ಕೇಂದ್ರ ಆರಂಭವಾಗಿದೆ. ವಿ.ಎಸ್.ಉಗ್ರಪ್ಪ ಸಂಸದರಾದ ಬಳಿಕ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 2.5 ಕೋಟಿ ರೂ. ಬಿಡುಗಡೆಯಾಗಿದ್ದು, ಕುಡಿವ ನೀರಿನ ಕಾಮಗಾರಿಗೆ ಆದ್ಯತೆ ನೀಡಿದ್ದಾರೆ. ಪ.ಜಾತಿ-ಪಂಗಡದವರ ವಿಶೇಷ ಅಭಿವೃದ್ಧಿಗೆ ತಲಾ 2.5 ಕೋಟಿ ರೂ., ಡಿಎಂಎಫ್​ನ 32.5 ಕೋಟಿ ರೂ. ಅನುದಾನದಲ್ಲಿ ಉಗ್ರಪ್ಪ ಕ್ಷೇತ್ರದ ಅಭಿವೃದ್ಧಿ ಕೈಗೊಂಡಿದ್ದಾರೆ.

ಶ್ರೀರಾಮುಲುಗೆ ಅಸ್ತಿತ್ವದ ಪ್ರಶ್ನೆ

ಕಳೆದ ಉಪಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಬೆಂಬಲ ಹಾಗೂ ಜಾತಿ, ಬೆಡಗು ವಿಚಾರ ಗಳೊಂದಿಗೆ ವಿ.ಎಸ್.ಉಗ್ರಪ್ಪ ನಿರಾಯಾಸವಾಗಿ ಆಯ್ಕೆ ಯಾಗಿದ್ದರು. ಹೊರಗಿನ ಅಭ್ಯರ್ಥಿ ಎಂಬ ಆರೋಪ ಎದುರಿಸಿದ್ದ ಉಗ್ರಪ್ಪ ಕೇವಲ ಆರು ತಿಂಗಳಲ್ಲಿ ವರ್ಚಸ್ಸು ಬೆಳೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ, ಶ್ರೀರಾಮುಲುಗೆ ಜಿಲ್ಲೆಯಲ್ಲಿ ಪಕ್ಷ ಹಾಗೂ ವ್ಯಕ್ತಿಗತ ಅಸ್ತಿತ್ವ ಸಾಬೀತುಪಡಿಸುವ ಸವಾಲು ಇದೆ.

ಹಸ್ತ ಪಡೆ ಪ್ರಾಬಲ್ಯ

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಳ್ಳಾರಿ ಗ್ರಾಮೀಣ, ಕಂಪ್ಲಿ, ಹೊಸಪೇಟೆ, ಸಂಡೂರು, ಹಗರಿಬೊಮ್ಮನಹಳ್ಳಿ ಹಾಗೂ ಹಡಗಲಿಗಳಲ್ಲಿ ಕಾಂಗ್ರೆಸ್, ಬಳ್ಳಾರಿ ನಗರ ಮತ್ತು ಕೂಡ್ಲಿಗಿಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಸಂಡೂರಿನ ಇ.ತುಕಾರಾಮ್ ಹಾಗೂ ಹಡಗಲಿಯ ಪಿ.ಟಿ.ಪರಮೇಶ್ವರ ನಾಯ್ಕ ಸಚಿವರಾಗಿದ್ದಾರೆ. ಈಚೆಗೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ಬಿಜೆಪಿಯ ಜೆ.ಶಾಂತಾ ವಿರುದ್ಧ 2.43 ಲಕ್ಷ ಮತಗಳ ಅಂತರದಿಂದ ವಿ.ಎಸ್.ಉಗ್ರಪ್ಪ ಐತಿಹಾಸಿಕ ಗೆಲುವು ದಾಖಲಿಸಿದ್ದರು. ಸಂಪುಟ ವಿಸ್ತರಣೆ ಬಳಿಕ ಜಿಲ್ಲೆಯ ಕೈ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಾತಾವರಣ ಕಂಡುಬರುತ್ತಿದೆ. ಸಚಿವ ಸ್ಥಾನ ವಂಚಿತ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹೆಸರು ಸದಾ ಅತೃಪ್ತರ ಪಾಳಯದಲ್ಲಿ ಕೇಳಿಬರುತ್ತಿದೆ. ಹೊಸಪೇಟೆ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕನ ನಡುವೆ ಗಲಾಟೆ ನಡೆದು ಜೆ.ಎನ್.ಗಣೇಶ್ ಜೈಲು ಪಾಲಾಗಿದ್ದಾರೆ. ಈ ಬೆಳವಣಿಗೆಗಳು ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಅಷ್ಟಕ್ಕಷ್ಟೇ ಎನ್ನುವಂತೆ ಇರುವುದರಿಂದ ಕಾಂಗ್ರೆಸ್​ಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿಲ್ಲ.

ಬಿಜೆಪಿಯಲ್ಲಿ ಅಭ್ಯರ್ಥಿ ತಲಾಶ್

ಉಪಚುನಾವಣೆ ಸೋಲಿನಿಂದ ಹತಾಶೆಯಲ್ಲಿರುವ ಬಿಜೆಪಿಯಲ್ಲಿ ಅಭ್ಯರ್ಥಿಗಾಗಿ ಹುಡುಕಾಡುವ ಪರಿಸ್ಥಿತಿ ನಿರ್ವಣವಾಗಿದೆ. ಶ್ರೀರಾಮುಲು ಸ್ಪರ್ಧಿಸುವ ಸಾಧ್ಯತೆಗಳ ಜತೆಗೆ ಅವರ ಸಹೋದರಿ ಜೆ.ಶಾಂತಾ, ಅಳಿಯ ಹಾಗೂ ಮಾಜಿ ಶಾಸಕ ಟಿ.ಎಚ್.ಸುರೇಶ್​ಬಾಬು ಹೆಸರೂ ಕೇಳಿಬರುತ್ತಿವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಶಾಸಕ ಬಿ.ನಾಗೇಂದ್ರ ಸಹೋದರ ಬಿ.ವೆಂಕಟೇಶ್ ಪ್ರಸಾದ್, ಶಾಸಕ ರಮೇಶ್ ಜಾರಕಿಹೊಳಿ ಸಂಬಂಧಿ ದೇವೇಂದ್ರಪ್ಪ ಹೆಸರು ಬಿಜೆಪಿ ಪಾಳಯದಲ್ಲಿ ಪ್ರಬಲವಾಗಿ ಕೇಳಿಬರುತ್ತಿವೆ. ಇವರಿಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗುವ ಸಾಧ್ಯತೆಗಳೇ ಹೆಚ್ಚು. ಬಿ.ನಾಗೇಂದ್ರ ಪಕ್ಷಕ್ಕೆ ಸೇರ್ಪಡೆಯಾದರೆ ಮಾತ್ರ ಅವರ ಸಹೋದರ ಬಿ.ವೆಂಕಟೇಶ್​ಪ್ರಸಾದ್​ರನ್ನು ಬಿಜೆಪಿ ಟಿಕೆಟ್​ಗೆ ಪರಿಗಣಿಸಲಿದ್ದಾರೆ ಎಂಬ ಮಾತುಗಳಿವೆ.