Friday, 16th November 2018  

Vijayavani

Breaking News

ಕಾಂಗ್ರೆಸ್​ಗೆ ಅಸ್ತಿತ್ವ, ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆ!

Sunday, 19.08.2018, 3:04 AM       No Comments

| ಪರಶುರಾಮ ಕೆರಿ

ಹಾವೇರಿ: ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಜಿಲ್ಲೆಯಲ್ಲಿ ಜೆಡಿಎಸ್ ಅಷ್ಟಾಗಿ ಪ್ರಬಲವಾಗಿಲ್ಲದ ಕಾರಣ ಕೆಲ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಿಲ್ಲ.

ಜಿಲ್ಲೆಯ ಪ್ರಬಲ ನಾಯಕರಾಗಿರುವ ಬಿಜೆಪಿ ಶಾಸಕರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ನೆಹರು ಓಲೇಕಾರ, ಮಾಜಿ ಶಾಸಕ ಯು.ಬಿ. ಬಣಕಾರ ಹಾಗೂ ಕಾಂಗ್ರೆಸ್​ನ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ಬಿ.ಸಿ. ಪಾಟೀಲ, ಮಾಜಿ ಶಾಸಕರಾದ ಬಸವರಾಜ ಶಿವಣ್ಣನವರ, ಅಜಿಮಪೀರ್ ಖಾದ್ರಿ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡಿದ್ದಾರೆ. 2013ರ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಒಡೆದಿದ್ದರಿಂದ ಹಾವೇರಿ, ರಾಣೆಬೆನ್ನೂರ ನಗರಸಭೆ, ಹಿರೇಕೆರೂರ ಪಟ್ಟಣ ಪಂಚಾಯಿತಿಗಳಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ಸವಣೂರ ಪುರಸಭೆಯಲ್ಲಿ ಕೈ, ಹಾನಗಲ್ಲ ಪುರಸಭೆಯಲ್ಲಿ ಕೆಜೆಪಿ ಆಡಳಿತ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಬಿಜೆಪಿ ಒಗ್ಗಟ್ಟಾಗಿದ್ದು ಐದು ಕಡೆಯೂ ಕಮಲ ಅರಳಿಸಲು ನಾಯಕರು ಹರಸಾಹಸ ಪಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಕಹಿ ಮರೆತು ಸ್ಥಳೀಯ ಸಂಸ್ಥೆಗಳಲ್ಲಾದರೂ ಅಸ್ತಿತ್ವ ಉಳಿಸಿಕೊಳ್ಳಲು ಕೈ ನಾಯಕರು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಸವಣೂರ ಅಲ್ಪ ಮುನ್ನಡೆ

ಸವಣೂರು ಪುರಸಭೆಯಲ್ಲಿ 27 ವಾರ್ಡ್ ಗಳಿದ್ದು, ಅಲ್ಪಸಂಖ್ಯಾತ ಮತ ಹೆಚ್ಚಿವೆ. ಹೀಗಾಗಿ ಹಿಂದೆಯೂ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ನಂತರ ರಾಜಕೀಯ ತಂತ್ರಗಾರಿಕೆ ಮೂಲಕ ಬಿಜೆಪಿ ಗದ್ದುಗೆಗೇರಿತ್ತು. ಬಸವರಾಜ ಬೊಮ್ಮಾಯಿ ತಂತ್ರಗಾರಿಕೆ ನಿಪುಣರಾಗಿದ್ದು, ಈ ಸಾರಿ ಕಮಲ ಅರಳಿಸಲು ಬೆವರು ಹರಿಸುತ್ತಿದ್ದಾರೆ. ಕಾಂಗ್ರೆಸ್​ನ ಮಾಜಿ ಶಾಸಕ ಅಜಿಮಪೀರ್ ಖಾದ್ರಿ ಈಗ ಅಷ್ಟಾಗಿ ಆಸಕ್ತಿ ತೋರಿಲ್ಲ. ಇದು ಬಿಜೆಪಿಗೆ ವರವಾಗುವ ಸಾಧ್ಯತೆ ಇದೆ.

ಹಿರೇಕೆರೂರು ಹಾಲಿ-ಮಾಜಿ ಪ್ರತಿಷ್ಠೆ

ಹಿರೇಕೆರೂರು ಪಪಂನಲ್ಲಿ 20 ವಾರ್ಡ್​ಗಳಿವೆ. ಚುನಾವಣೆಯನ್ನು ಮಾಜಿ ಶಾಸಕ ಯು.ಬಿ.ಬಣಕಾರ ಹಾಗೂ ಶಾಸಕ ಬಿ.ಸಿ.ಪಾಟೀಲ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕೆಜೆಪಿ ನೇತೃತ್ವ ವಹಿಸಿಕೊಂಡು ಅತಿಹೆಚ್ಚು ಸ್ಥಾನಗಳನ್ನು ಪಡೆದಿದ್ದ ಬಣಕಾರ, ಈ ಬಾರಿ ಪಪಂ ವಶಕ್ಕೆ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕಾಂಗ್ರೆಸ್​ನಿಂದ ಜಿಲ್ಲೆಯ ಏಕೈಕ ಶಾಸಕರಾಗಿರುವ ಬಿ.ಸಿ.ಪಾಟೀಲ ಈ ಚುನಾವಣೆಯಲ್ಲಿ ಮೇಲುಗೈ ಸಾಧಿಸಿ ಸಚಿವ ಸ್ಥಾನದ ಬೇಡಿಕೆ ಈಡೇರಿಸಿಕೊಳ್ಳಲು ಸಾಕಷ್ಟು ಶ್ರಮಿಸುತ್ತಿದ್ದಾರೆ.

ರಾಣೆಬೆನ್ನೂರಲ್ಲಿ ತ್ರಿಕೋನ

ರಾಣೆಬೆನ್ನೂರು ನಗರಸಭೆಯಲ್ಲಿ 35 ವಾರ್ಡ್ ಗಳಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸಚಿವರಾಗಿರುವ ಆರ್.ಶಂಕರ್ ಬೆಂಬಲಿಗರನ್ನು ಎಲ್ಲ ವಾರ್ಡ್ ಗಳಲ್ಲಿಯೂ ಕಣಕ್ಕಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಗರೀಗರು ಬಿಜೆಪಿಗೆ ಹೆಚ್ಚು ಮತ ನೀಡಿರುವುದರಿಂದ ಕಮಲ ಪಾಳಯ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಆದರೆ, ಪಕ್ಷಕ್ಕೆ ಸೂಕ್ತ ನಾಯಕರ ಕೊರತೆ ಕಾಡುತ್ತಿದೆ. ಈ ಸಾರಿಯೂ ಇಲ್ಲಿ ಅತಂತ್ರ ಫಲಿತಾಂಶ ಬರುವ ಲಕ್ಷಣ ದಟ್ಟವಾಗಿದೆ.

ಹಾನಗಲ್ಲ ಉದಾಸಿ ಪ್ರಭಾವ

23 ವಾರ್ಡ್​ಗಳಿರುವ ಹಾನಗಲ್ ಪುರಸಭೆಯಲ್ಲಿ ಸಿ.ಎಂ.ಉದಾಸಿ ಪ್ರಭಾವ ಹೊಂದಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕೆಜೆಪಿಯಿಂದಲೇ ಅತಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿ ಆಡಳಿತ ಚುಕ್ಕಾಣಿ ಹಿಡಿದ್ದರು. ಈ ಸಾರಿಯೂ ಅದೇ ಹುಮ್ಮಸ್ಸಿನಲ್ಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ಅಖಾಡಕ್ಕಿಳಿದು ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿರುವ ಕಾಂಗ್ರೆಸ್​ನ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ್ ಜತೆಗೂಡಿ ಹಿಡಿತ ಸಾಧಿಸಲು ನಾನಾ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಕಮಲ ಸ್ವಲ್ಪ ಮುನ್ನಡೆಯಲಿದೆ.

ಹಾವೇರಿಯಲ್ಲಿ ಸಾಮರ್ಥ್ಯ ಒರೆಗೆ

ಹಾವೇರಿ ನಗರಸಭೆಯಲ್ಲಿ 31 ವಾರ್ಡ್​ಗಳಿವೆ. ಬಿಜೆಪಿ ಶಾಸಕ ಓಲೇಕಾರ ಸ್ವಸಾಮರ್ಥ್ಯ ಒರೆಗೆ ಹಚ್ಚಿ ನಗರಸಭೆ ವಶಕ್ಕೆ ಪಣ ತೊಟ್ಟಿದ್ದಾರೆ. ಕಾಂಗ್ರೆಸ್​ನ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ ಅಖಾಡಕ್ಕಿಳಿದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಮತಗಳು ಬಂದಿದ್ದು ಪ್ಲಸ್ ಪಾಯಿಂಟ್. ಬಂಡಾಯ ಅಭ್ಯರ್ಥಿಗಳ ಕಾಟ ಹೆಚ್ಚಿದ್ದು, ಮತ್ತೆ ಅತಂತ್ರ ಫಲಿತಾಂಶ ಬಂದರೂ ಅಚ್ಚರಿಯಿಲ್ಲ.

136 ವಾರ್ಡ್

ಹಾವೇರಿ, ರಾಣೆಬೆನ್ನೂರ ನಗರಸಭೆಗಳು, ಹಾನಗಲ್ಲ, ಸವಣೂರು ಪುರಸಭೆಗಳು ಹಾಗೂ ಹಿರೇಕೆರೂರ ಪಟ್ಟಣ ಪಂಚಾಯಿತಿಗಳ 136 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದೆ.

Leave a Reply

Your email address will not be published. Required fields are marked *

Back To Top