ಸಮ್ಮಿಶ್ರ ನಿಲುವು, ಬಿಜೆಪಿಗೆ ಒಲವು

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶದ ಪ್ರತಿಫಲನದಂತೆ ತೋರುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸಮ್ಮಿಶ್ರ ಸರ್ಕಾರಕ್ಕೆ ಪರೋಕ್ಷವಾಗಿ ಬಲ ತಂದುಕೊಟ್ಟಿದೆ. ಜತೆಗೆ ನಗರ ವ್ಯಾಪ್ತಿಯಲ್ಲಿ ಬಿಜೆಪಿ ಬಲವರ್ಧನೆಯ ಸೂಚನೆಯನ್ನೂ ನೀಡಿದೆ.

21 ಜಿಲ್ಲೆಗಳ 105 ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಭವಿಷ್ಯದ ದೃಷ್ಟಿಯಿಂದ ಮೈತ್ರಿ ಅನಿವಾರ್ಯ ಎಂಬ ಸಂದೇಶ ನೀಡುವ ಜತೆಗೆ ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಯಾವ ರೀತಿ ಅನುಕೂಲವಾಗಬಹುದು ಎಂಬ ದಿಕ್ಸೂಚಿಯನ್ನೂ ಈ ಫಲಿತಾಂಶ ನೀಡಿದೆ. ಪ್ರಾಥಮಿಕ ಲೆಕ್ಕಾಚಾರದ ಪ್ರಕಾರ 105 ಸ್ಥಳೀಯ ಸಂಸ್ಥೆಗಳ ಪೈಕಿ ಸುಮಾರು 68 ಕಡೆಗಳಲ್ಲಿ ‘ಕಾಂಗ್ರೆಸ್’, ‘ಜೆಡಿಎಸ್’ ಮತ್ತು ‘ಕಾಂಗ್ರೆಸ್-ಜೆಡಿಎಸ್’ ಸಮ್ಮಿಶ್ರ ಆಡಳಿತ ನಡೆಸುವುದು ಸ್ಪಷ್ಟವಾಗಿದೆ.

ತಾನು ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದಿರುವುದಾಗಿ ಕಾಂಗ್ರೆಸ್ ಹೇಳಿಕೊಂಡಿದ್ದರೆ, ನಾವು ನಿರೀಕ್ಷಿಸಿದಷ್ಟು ಸ್ಥಾನ ಬಂದಿಲ್ಲ ಎಂದು ಬಿಜೆಪಿ ಹೇಳಿದೆ. ಜೆಡಿಎಸ್ ಮಾತ್ರ ಆರಕ್ಕೇರದ ಮೂರಕ್ಕಿಳಿಯದ ಫಲಿತಾಂಶದೊಂದಿಗೆ ಸಮಾಧಾನಪಟ್ಟುಕೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳ 2662 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, 982ರಲ್ಲಿ ಕಾಂಗ್ರೆಸ್, 929ರಲ್ಲಿ ಬಿಜೆಪಿ ಹಾಗೂ 375ರಲ್ಲಿ ಜೆಡಿಎಸ್ ಗೆಲುವು ಸಾಧಿಸಿವೆ.

ಮೂರು ಮಹಾನಗರ ಪಾಲಿಕೆಗಳ 135 ಸ್ಥಾನಗಳ ಪೈಕಿ 54ರಲ್ಲಿ ಬಿಜೆಪಿ, 36ರಲ್ಲಿ ಕಾಂಗ್ರೆಸ್ ಮತ್ತು 30ರಲ್ಲಿ ಜೆಡಿಎಸ್ ಗೆದ್ದಿವೆ.

ಲಾಭ, ನಷ್ಟದ ಲೆಕ್ಕ: 2013ರಲ್ಲಿ ಬಿಜೆಪಿ ಸರ್ಕಾರದ ಅಂತಿಮ ವೇಳೆಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ದೊಡ್ಡ ಗೆಲುವು ಸಿಕ್ಕಿತ್ತು. ಆಗ 4976 ಸ್ಥಾನಗಳ ಪೈಕಿ ಕಾಂಗ್ರೆಸ್ 1960 ಸ್ಥಾನ ಗಳಿಸಿತ್ತು. ಬಿಜೆಪಿ 905 ಸ್ಥಾನ ಗಳಿಸಿತ್ತು. ಈ ಬಾರಿ ಬಿಜೆಪಿ ಸ್ವಲ್ಪ ಮುನ್ನಡೆ ಕಾಯ್ದುಕೊಂಡಿರುವುದು ಸ್ಪಷ್ಟವಾಗಿದೆ. ಕಳೆದ ಚುನಾವಣೆಯಲ್ಲಿ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರ ದಕ್ಕಿಸಿಕೊಂಡು, ವಿಧಾನಸಭೆ ಚುನಾವಣೆಯಲ್ಲೂ ಗೆಲ್ಲುವ ಸುಳಿವು ನೀಡಿತ್ತು. ಆದರೆ ಈ ಬಾರಿ ಕಾಂಗ್ರೆಸ್​ಗೆ ನಿರೀಕ್ಷಿತ ಯಶ ಸಿಕ್ಕಿಲ್ಲ.

ಸರ್ಕಾರಕ್ಕೆ ಸಮಾಧಾನ

ಮೈತ್ರಿ ಸರ್ಕಾರದ ಬಿರುಕು ಹೆಚ್ಚಾಗಬಹುದೆಂಬ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್​ನ ಅತೃಪ್ತರು ಮತ್ತು ಪ್ರತಿಪಕ್ಷಕ್ಕೆ ಫಲಿತಾಂಶ ಕಹಿಯಾಗಿ ಪರಿಣಮಿಸಿದೆ. ಮೈತ್ರಿ ಪಾಲುದಾರ ಪಕ್ಷಗಳ ಫಲಿತಾಂಶದಲ್ಲಿ ಯಾರಿಗೂ ಹೆಚ್ಚು ನಷ್ಟವಾಗದೇ, ಹೆಚ್ಚು ಲಾಭವೂ ಆಗದಿರುವುದು ನಾಯಕರಿಗೆ ಸಮಾಧಾನ ತಂದಿದೆ. ಹೀಗಾಗಿ ಸರ್ಕಾರದ ಆಯಸ್ಸು ಇನ್ನಷ್ಟು ದೀರ್ಘವಾಗಲಿದೆ ಎಂಬ ಮಾತು ರಾಜಕೀಯ ಚಿಂತಕರ ಚಾವಡಿಯಲ್ಲಿ ಹರಿದಾಡುತ್ತಿದೆ.

ಮೈತ್ರಿ ಲಾಭ ಜೆಡಿಎಸ್​ಗೆ ಹೆಚ್ಚು

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಕಡ್ಡಾಯ ಮೈತ್ರಿ ಸೂತ್ರ ಅಳವಡಿಸಿಕೊಂಡಿವೆ. ಚುನಾವಣೆಗೆ ಮುನ್ನ ನಡೆದಿದ್ದ ಸಮನ್ವಯ ಸಮಿತಿಯಲ್ಲಿ ಸಭೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಲಾಗಿತ್ತಾದರೂ, ಇತ್ತೀಚೆಗೆ ನಡೆದ ಸಭೆಯಲ್ಲಿ ಚುನಾವಣೋತ್ತರ ಮೈತ್ರಿ ಬಗ್ಗೆ ಒಮ್ಮತದ ತೀರ್ಮಾನವಾಗಿತ್ತು. ‘ಚುನಾವಣೆಯಲ್ಲಿ ನಮ್ಮದು ಫ್ರೆಂಡ್ಲಿ ಫೈಟ್ ಆಗಿತ್ತು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರೆ, ‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಅತಂತ್ರ ಸ್ಥಿತಿ ಇರುವೆಡೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಒಟ್ಟಾರೆ ಕಾಂಗ್ರೆಸ್-ಜೆಡಿಎಸ್ ನಡುವಿನ ‘ಕಡ್ಡಾಯ’ ಮೈತ್ರಿಯಿಂದಾಗಿ ಸಾಕಷ್ಟು ಕಡೆ ಜೆಡಿಎಸ್​ಗೆ ಅನಾಯಾಸವಾಗಿ ಅಧಿಕಾರ ದಕ್ಕುತ್ತಿದೆ. ಪಕ್ಷೇತರರು ಈಗ ಮಹತ್ವ ಕಳೆದುಕೊಂಡಿದ್ದಾರೆ.

ಅತಂತ್ರವಾಗಿರುವ ಕಡೆ ಏನು ಕತೆ?

ಪಕ್ಷೇತರರು ಮಾತ್ರ ಗೆಲುವು ಸಾಧಿಸಿರುವ ನಾಲ್ಕು ಸ್ಥಳೀಯ ಸಂಸ್ಥೆ ಮತ್ತು ಒಂದೆರಡು ಕ್ಷೇತ್ರ ಹೊರತುಪಡಿಸಿ ಉಳಿದ ಕಡೆ ಕಾಂಗ್ರೆಸ್-ಜೆಡಿಎಸ್ ಆಡಳಿತ ಬಹುತೇಕ ಖಚಿತವಾಗಿದೆ.

ಮೈತ್ರಿ ಸರ್ಕಾರಕ್ಕೆ ನಾಡಿನ ಜನ ಸಂಪೂರ್ಣ ಸಹಮತ ನೀಡಿದ್ದಾರೆ. ಬಿಜೆಪಿ ನಾಯಕರು ಸರ್ಕಾರ ಇದೆಯಾ ಎಂದು ಕೇಳ್ತಿದ್ರು ಅದಕ್ಕೆ ಈಗ ಉತ್ತರ ಸಿಕ್ಕಿದೆ. ನಗರ ಪ್ರದೇಶದಲ್ಲಿ ಬಿಜೆಪಿ ಪರ ಒಲವು ಕಡಿಮೆಯಾಗಿದೆ. ನೂರು ದಿನಗಳ ಆಡಳಿತವನ್ನು ನಗರದ ಜನ ಒಪ್ಪಿದ್ದಾರೆ.

| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

 

ಸಮ್ಮಿಶ್ರ ಸರ್ಕಾರದ ಹಣ ಬಲದ ಮುಂದೆ ನಮ್ಮ ಪಕ್ಷಕ್ಕೆ ನಿರೀಕ್ಷಿತ ಸ್ಥಾನಗಳು ಸಿಕ್ಕಿಲ್ಲ. ಆದರೂ ಎರಡೂ ಪಕ್ಷಗಳಿಗೆ ಸರಿ ಸಮಾನವಾಗಿ ನಿಂತಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್​ನ ಭದ್ರಕೋಟೆಯಲ್ಲಿಯೂ ನಮ್ಮ ಬಲ ವೃದ್ಧಿಯಾಗಿದೆ.

| ಬಿ.ಎಸ್.ಯಡಿಯೂರಪ್ಪ, ಬಿಜೆಪಿ ನಾಯಕ


ವಿಜಯೋತ್ಸವದಲ್ಲಿ ಆಸಿಡ್ ದಾಳಿ

ತುಮಕೂರು ಮಹಾನಗರ ಪಾಲಿಕೆ ಕೆ.ಆರ್.ಬಡಾವಣೆಯ 16ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಉಲ್ಲಾಖಾನ್ ಗೆಲುವಿನ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದ ವೇಳೆ ದುಷ್ಕರ್ವಿುಯೊಬ್ಬ ಆಸಿಡ್ ಮಾದರಿಯ ರಾಸಾಯನಿಕವನ್ನು ಎರಚಿದ್ದು, 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗುಂಪಿನಲ್ಲಿದ್ದ ವ್ಯಕ್ತಿಯೇ ದಾಳಿ ನಡೆಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ದಾಳಿ ನಡೆಸಿದವರ ಪತ್ತೆಗೆ ತಂಡ ರಚಿಸಲಾಗಿದೆ. ಟಾಯ್ಲೆಟ್ ಕ್ಲೀನರ್ ರೀತಿಯ ರಾಸಾಯನಿಕ ಎರಚಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆಸಿಡ್ ದಾಳಿ ಎಂದು ಹೇಳಲು ಸಾಧ್ಯವಿಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.