Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಗಿಡ ಬೆಳ್ಸಿದ್ದು ನಾನು, ಫಸಲು ಕಿತ್ಕೊಂಡಿದ್ದು ಬಿಜೆಪಿ,

Friday, 15.06.2018, 6:15 PM       No Comments

ಶಿವಮೊಗ್ಗ: ಗಿಡ ಬೆಳೆಸಿದ್ದು (ನೋಂದಣಿ ಮಾಡಿಸಿದ್ದು) ನಾನು. ಆದರೆ ಫಸಲು(ಜಯ) ಕಿತ್ತುಕೊಂಡಿದ್ದು ಬಿಜೆಪಿಯವರು. ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎಂದೂ ಕಾಣದ ಹಣಬಲ ಮತ್ತು ಅಪಪ್ರಚಾರವೇ ತನ್ನ ಸೋಲಿಗೆ ಕಾರಣ ಎಂದು ಕಾಂಗ್ರೆಸ್​ನ ಪರಾಜಿತ ಅಭ್ಯರ್ಥಿ ಎಸ್.ಪಿ.ದಿನೇಶ್ ಆರೋಪಿಸಿದರು.

ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಹವಾದ ನಡುವೆ ಕ್ಷೇತ್ರದ 16 ಸಾವಿರಕ್ಕೂ ಅಧಿಕ ಮತದಾರರು ತಮ್ಮನ್ನು ಬೆಂಬಲಿಸಿದ್ದು, ಅವರೆಲ್ಲರಿಗೂ ಕೃತಜ್ಞನೆ ಸಲ್ಲಿಸುತ್ತೇನೆ. ಚುನಾವಣೆಗಾಗಿ ಕಳೆದೊಂದು ವರ್ಷದಿಂದ ನಿರಂತರವಾಗಿ ಕೆಲಸ ಮಾಡಿದ್ದೆ. ಆದರೆ ಸೋಲು ಅನಿರೀಕ್ಷಿತವಾಗಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

30 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದ ಚುನಾವಣೆಯಲ್ಲಿ 27 ಬಿಜೆಪಿ ಶಾಸಕರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನೀತಿ ಸಂಹಿತೆ ಜಾರಿಯಲ್ಲಿದ್ದರೂ ಎಲ್ಲ ಶಾಸಕರನ್ನು ಮನೆಗೆ ಕರೆದು ಸಭೆ ನಡೆಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕಟ್ಟಪ್ಪಣೆ ಹೊರಡಿಸಿ ಮತ ಸೆಳೆದಿದ್ದಾರೆ. ಇದು ಕೂಡ ತನ್ನ ಸೋಲಿಗೆ ಪ್ರಮುಖ ಕಾರಣ ಎಂದರು.

ಕಾಂಗ್ರೆಸ್ ಪಕ್ಷದಿಂದ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ನೋಂದಣಿ ಮಾಡಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಪ್ರಮುಖ ಕಾರ್ಯಕರ್ತರು ಮತದಾರರಿಗೆ ಮಂಕುಬೂದಿ ಎರಚಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬೋಜೇಗೌಡರೊಂದಿಗೆ ಶಾಮೀಲಾಗಿದ್ದಾರೆಂಬ ಸುಳ್ಳಿನ ಸರಮಾಲೆಗಳನ್ನು ಹೇಳುವ ಮೂಲಕ ಅಪಪ್ರಚಾರ ಮಾಡಿ ಗೆದ್ದಿದ್ದಾರೆಯೇ ವಿನಃ ಮತದಾರರ ಹೃದಯ ಗೆಲ್ಲಲು ಸಾಧ್ಯವಾಗಿಲ್ಲ ಎಂದರು.

ವೈಯಕ್ತಿಕ ಅಭಿನಂದನೆ: ಚುನಾವಣೆಯಲ್ಲಿ ಸೋಲು-ಗೆಲುವು ನಿಶ್ಚಿತ. ಆದರೂ ಆಯನೂರು ಮಂಜುನಾಥ್ ಅವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಫಲಿತಾಂಶ ಹೊರಬಿದ್ದು ನಾಲ್ಕೈದು ದಿನಗಳಾಗಿದ್ದು, ಚುನಾವಣೆ ಪೂರ್ವ ಕೊಟ್ಟ ಭರವಸೆಯಂತೆ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಹಾಗೂ ನೂತನ ಪಿಂಚಣಿ ಯೋಜನೆ ಕುರಿತು ಚಕಾರ ಎತ್ತುತ್ತಿಲ್ಲ. ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ವ್ಯಕ್ತಿಯನ್ನು ಪದವೀಧರರು ಆಯ್ಕೆ ಮಾಡಿದ್ದಾರೆ. ಈ ನಡುವೆ ತಮ್ಮ ಬಗ್ಗೆ ಅಪಪ್ರಚಾರ ಮಾಡುವ ಭರದಲ್ಲಿ ತಮ್ಮದೇ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗೆ ದೋಖಾ ಮಾಡಿದ್ದಾರೆ ಎಂದು ದೂರಿದ ಅವರು, ಪದವೀಧರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ 8 ಅಭ್ಯರ್ಥಿಗಳಲ್ಲಿ ಅಲ್ಪಸಂಖ್ಯಾತ ವಿಭಾಗದಿಂದ ಒಬ್ಬರನ್ನು ನಿಲ್ಲಿಸಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತ ಛಿದ್ರಗೊಳಿಸಲು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಮತದಾನದ ದಿನದಂದು ಎಲ್ಲ 14 ಟೇಬಲ್​ಗಳಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿ ಪರ ಬಿಜೆಪಿ ಮುಖಂಡರೇ ಏಜೆಂಟರಾಗಿರುವುದು ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ ಎಂದು ದೂರಿದರು.

ಕುಟುಂಬ ರಾಜಕಾರಣ ಶುರು: ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಶುರುವಾಗಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ನಂತರ ಇದೀಗ ಆಯನೂರು ಮಂಜುನಾಥ್ ಕೂಡ ತಮ್ಮ ಪುತ್ರನನ್ನು ರಾಜಕೀಯಕ್ಕೆ ತರಲು ಸಜ್ಜಾಗಿದ್ದಾರೆ. ಹಣಬಲದ ಮುಂದೆ ನನ್ನ ಮತ್ತು ಕಾಂಗ್ರೆಸ್ ಪಕ್ಷದ ಬಲ ಕುಗ್ಗಿದೆ. ಸೋಲಿನಿಂದ ಧೃತಿಗೆಡುವುದಿಲ್ಲ. ಬದಲಾಗಿ ಸಾರ್ವಜನಿಕ ಸೇವೆಯಲ್ಲಿ ಮುಂದುವರಿಯುತ್ತೇನೆ ಎಂದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ, ಮಧುಸೂದನ್, ರವಿಕುಮಾರ್, ವಿಶ್ವನಾಥ್ ಕಾಶಿ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *

Back To Top