14 ಜನರಿಗೆ ಐದು ಗಂಟೆ ನ್ಯಾಯಾಂಗ ಬಂಧನ

ಚಿಕ್ಕಮಗಳೂರು: ಸಾರ್ವಜನಿಕರಿಗೆ ಮರಳು ವಿತರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯದ ಬಿಜೆಪಿಯ 13 ಹಾಗೂ ಕಾಂಗ್ರೆಸ್​ನ ಒಬ್ಬ ಕಾಯಕರ್ತನನ್ನು ಬೆಂಗಳೂರಿನ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ಶನಿವಾರ ಬೆಳಗ್ಗೆ 11ರಿಂದ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು.

ಶಾಸಕ ಸಿ.ಟಿ.ರವಿ ಸಹ ಕೋರ್ಟ್​ಗೆ ಹಾಜರಾಗಿದ್ದು, ಅವರು ಮೊದಲೇ ಜಾಮೀನು ಪಡೆದ ಕಾರಣ ಅವರಿಗೆ ಪೊಲೀಸ್ ಕಸ್ಟಡಿ ತಪ್ಪಿತು. ಈಗಾಗಲೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ರೇಖಾ ಹುಲಿಯಪ್ಪ ಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ. ತಮ್ಮಯ್ಯ, ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ಸೇರಿ ಒಟ್ಟು 14 ಜನರನ್ನು ಸಂಜೆ 4ರ ವರಗೆ ನ್ಯಾಯಾಂಗ ಬಂಧನಲ್ಲಿರಿಸಿ ನಂತರ ಜಾಮೀನು ಮಂಜೂರು ಮಾಡಲಾಯಿತು.

ಆರೋಪಿಗಳು ಜಾಮೀನು ಪಡೆಯದಿರುವುದನ್ನು ಗಮನಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಉದಾರ್ ತೀವ್ರ ಸಿಟ್ಟು ವ್ಯಕ್ತಪಡಿಸಿ ಬಂಧನಕ್ಕೆ ಆದೇಶಿಸಿದರು. ನಂತರ ಸಂಜೆ 4ಕ್ಕೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರು. ಒಟ್ಟು 32 ಜನರ ವಿರುದ್ಧ ನಗರ ಠಾಣೆಯಲ್ಲಿ ಅಂದಿನ ಎಸ್ಪಿ ಚೇತನ್ ದೂರು ದಾಖಲಿಸಿದ್ದರು.

ನ್ಯಾಯಾಲಯಕ್ಕೆ ಹಾಜರಾಗದ ಇನ್ನೂ 17 ಆರೋಪಿಗಳಿಗೆ ಜಾಮೀನು ರಹಿತ ವಾರಂಟ್ ನೀಡಿದೆ. ಪ್ರಕರಣದ 32 ಆರೋಪಿಗಳು ಏ. 20ರಂದು ಮತ್ತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ವಾರೆಂಟ್ ಹೊರಡಿಸಿರುವ ಆರೋಪಿಗಳು ಅಷ್ಟರೊಳಗೆ ಜಾಮೀನು ಪಡೆಯಬೇಕಿದೆ.

ರೇಖಾ ಹುಲಿಯಪ್ಪ ಗೌಡಗೆ ಮುಜುಗರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರಕ್ಕೆ ಟಿಕೆಟ್ ಕೊಡಲಿಲ್ಲವೆಂದು ಸಿಟ್ಟಿಗೆದ್ದು ಬಿಜೆಪಿಯಿಂದ ಜಿಗಿದು ಕಾಂಗ್ರೆಸ್ ಸೇರಿದ್ದ ರೇಖಾ ಹುಲಿಯಪ್ಪ ಗೌಡ ಶನಿವಾರ ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮುಜುಗರ ಅನುಭವಿಸುವಂತೆ ಆಯಿತು. ಬಿಜೆಪಿಯಲ್ಲಿದ್ದ ರೇಖಾ, 2014ರಲ್ಲಿ ಪಕ್ಷದಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆಗ ಪ್ರಕರಣ ದಾಖಲಾಗಿತ್ತು. ಸಿ.ಟಿ.ರವಿ ಬಿಟ್ಟರೆ ಯಾರೂ ಜಾಮೀನು ಪಡೆದಿರಲಿಲ್ಲ. ಹೀಗಾಗಿ ಬಿಜೆಪಿಯವರ ಜತೆ ರೇಖಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.