More

  ಗ್ರಾಪಂ ಚುನಾವಣೆ ಗೆಲ್ಲುವತ್ತ ಲಕ್ಷ್ಯ; ಬೆಳಗಾವಿಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ

  ಬೆಂಗಳೂರು/ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೇಲುಗೈ ಸಾಧಿಸುವ ಹಾಗೂ ಹಳ್ಳಿ ಮಟ್ಟದಲ್ಲಿಯೂ ಕಾಂಗ್ರೆಸ್​ವುುಕ್ತ ಮಾಡುವ ರಣತಂತ್ರ ಹೆಣೆಯುವುದು ಬಿಜೆಪಿ ಪ್ರಧಾನ ಲಕ್ಷ್ಯವಾಗಿದ್ದು, ಬೆಳಗಾವಿಯಲ್ಲಿ ಶನಿವಾರ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ. ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಪೂರ್ಣ ಪ್ರಮಾಣದಲ್ಲಿ ರಚನೆಯಾದ ಬಳಿಕ ಮೊದಲ ಸಭೆ ಇದಾಗಿದ್ದರೆ, ಕಮಲ ಪಡೆಯ ಪ್ರಭಾವಿ ನೆಲೆಗಳಲ್ಲಿ ಒಂದಾದ ಕುಂದಾನಗರಿಯಲ್ಲಿ ಇದೇ ಪ್ರಥಮ ಬಾರಿಗೆ ಈ ಸಭೆ ನಡೆಯುತ್ತಿದೆ. ತಳಮಟ್ಟದಲ್ಲಿ ಸಂಘಟನೆಯ ಬೇರುಗಳನ್ನು ಇಳಿಸಿ, ಗ್ರಾಮ ಪಂಚಾಯಿತಿಗಳನ್ನು ಕಾಂಗ್ರೆಸ್​ವುುಕ್ತ ಮಾಡುವುದು ಹಾಗೂ ಶೇ.86 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಬಿಜೆಪಿ ದೃಢಸಂಕಲ್ಪವಾಗಿದೆ.

  ಸಂಘಟನಾ ನೆಲೆ ವಿಸ್ತರಣೆ ಹಾಗೂ ಚುನಾವಣಾ ಕಾರ್ಯತಂತ್ರಗಳ ನೀಲಿನಕ್ಷೆ ಸಿದ್ಧಪಡಿಸಲಿದ್ದು, ಇದಕ್ಕೆ ಪೂರಕವಾಗಿ ಪಂಚರತ್ನ ಕಮಿಟಿ ಕಾರ್ಯ ಪರಾಮರ್ಶೆ, ಗ್ರಾಮ ಸ್ವರಾಜ್ಯ ಸಮಾವೇಶಗಳ ಪರಿಣಾಮಗಳನ್ನು ಅವಲೋಕಿಸಲಿದೆ. ರೂಪಿಸಿದ ವ್ಯೂಹಾತ್ಮಕ ತಂತ್ರಗಾರಿಕೆ ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬೆಳಗಾವಿ ಸಭೆಯು ನಿಷ್ಠುರ-ನಿಖರ ಸಂದೇಶವನ್ನು ಜವಾಬ್ದಾರಿ ಹೊತ್ತವರಿಗೆ ರವಾನಿಸಲಿದೆ. ಪ್ರತಿ ಬೂತ್​ನಲ್ಲಿ ಶೇ.80ಕ್ಕೂ ಹೆಚ್ಚು ಮತದಾರರು ಬಿಜೆಪಿ ಕಡೆಗೆ ವಾಲುವಂತೆ ಮಾಡಿದರೆ, ನಿಗದಿತ ಗುರಿ ತಲುಪಲು ಸಾಧ್ಯವೆಂಬುದು ವರಿಷ್ಠರ ಸಲಹೆಯಾಗಿದೆ. ಈ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ಪ್ರವಾಸದ ಮಾಹಿತಿ ಪಡೆದು, ಹೆಚ್ಚಿನ ಹೊಣೆಗಾರಿಕೆ ಒಪ್ಪಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸಿದ್ಧತೆ, ಸಾಧಿಸಿದ ಪ್ರಗತಿ ಕುರಿತು ಚರ್ಚೆಯಾಗಲಿದೆ.

  ಗ್ರಾಪಂ ಚುನಾವಣೆ ಗೆಲ್ಲುವತ್ತ ಲಕ್ಷ್ಯ; ಬೆಳಗಾವಿಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ
  ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಗುರುವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇತರರಿದ್ದರು.

  ನಿಗಮ-ಮಂಡಳಿಗಳಿಗೆ ನೇಮಕ ಸಂದರ್ಭದಲ್ಲಿ ಸೇವಾ ಹಿರಿತನ, ಪಕ್ಷದ ನಿಷ್ಠರ ಕಡೆಗಣನೆಯ ಅಸಮಾಧಾನ ಈ ಸಭೆಯಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್​ಗೆ ಬರೆದ ಪತ್ರದಲ್ಲಿ ಶಾಸಕ ವಿ.ಸುನೀಲ್​ಕುಮಾರ್ ಉಲ್ಲೇಖಿಸಿದ ಅಂಶಗಳನ್ನು ಪ್ರಸ್ತಾಪಿಸಿ, ವಿಷಯ ನಿಗಮ-ಮಂಡಳಿಯತ್ತ ಕೊಂಡೊಯ್ಯಲು ಕೆಲವು ಹಿರಿಯರು ಸಜ್ಜಾಗಿದ್ದಾರೆ. ಪಕ್ಷದ ಶಿಸ್ತಿನ ಚೌಕಟ್ಟು ಮೀರಿ ಕೆಲವು ಸಚಿವ-ಶಾಸಕರು ನೀಡುತ್ತಿರುವ ಹೇಳಿಕೆಗಳು, ಮನೆಯೊಂದು ಮೂರು ಬಾಗಿಲು ಎಂಬಂತೆ ಕೆಲವು ಮುಖಂಡರ ವರ್ತನೆ ವಿರುದ್ಧ ಧ್ವನಿ ಮೊಳಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

  ಅನೇಕ ಸಚಿವರ ಜತೆ ಬೆಳಗಾವಿಗೆ ಬಂದಿದ್ದೇನೆ. ಮುಖ್ಯವಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಗೆ ಆಗಮಿಸಿದ್ದು, ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷದ ವಿಚಾರವಾಗಿ ಮಾರ್ಗದರ್ಶನ ಮಾಡಲಿದ್ದಾರೆ. ಅದುವೇ ನಮಗೆಲ್ಲ ವಿಶೇಷ.

  | ಯಡಿಯೂರಪ್ಪ ಮುಖ್ಯಮಂತ್ರಿ

  ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಇಲ್ಲ ಸಲ್ಲದ ಗಾಳಿ ಸುದ್ದಿ ಹರಿಬಿಡಲಾಗು ತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಸೋತಿದ್ದು, ಆ ಪಕ್ಷದ ನಾಯಕರಿಗೆ ಮಾಡಲು ಕೆಲಸ ಇಲ್ಲದ ಕಾರಣ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ.

  | ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ

  ಕೋರ್ ಕಮಿಟಿಯಲ್ಲಿ 3 ವಿಷಯ ಚರ್ಚೆ

  ಗ್ರಾಪಂ ಚುನಾವಣೆ ಗೆಲ್ಲುವತ್ತ ಲಕ್ಷ್ಯ; ಬೆಳಗಾವಿಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ

  ಬೆಳಗಾವಿ: ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಸಾಧನೆ, ಪಕ್ಷ ಸಂಘಟನೆ ಮತ್ತು ಗ್ರಾಮ ಪಂಚಾಯತಿ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ್ ಲಿಂಬಾವಳಿ ತಿಳಿಸಿದರು. ನಗರದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಬಿಜೆಪಿ ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದರು. ಕರ್ನಾಟಕದ 310 ಮಂಡಳಗಳಲ್ಲಿ 270 ಕಡೆ ತರಬೇತಿ ಶಿಬಿರ ನಡೆಸಲಾಗಿದೆ. ಉಳಿದ ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಶಿಬಿರ ನಡೆಸಲು ಕೋರ್ ಕಮಿಟಿ ಒಪ್ಪಿಗೆ ನೀಡಿದೆ ಎಂದು ತಿಳಿಸಿದೆ. ಶನಿವಾರ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ಇದೆ. ಇಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆ ಆಗುತ್ತೆ. ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಲಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಹಾಗೂ ಲವ್ ಜಿಹಾದ್ ಕುರಿತು ಪ್ರಮುಖವಾಗಿ ಚರ್ಚೆ ಮಾಡಲಾಗುತ್ತದೆ. ಈ ಬಗ್ಗೆ ಮಂಗಳೂರು ಕಾರ್ಯಕಾರಿಣಿಯಲ್ಲೂ ಚರ್ಚೆ ನಡೆದಿತ್ತು ಎಂದು ಅರವಿಂದ್ ಲಿಂಬಾವಳಿ ತಿಳಿಸಿದರು.

  ಗೆಲುವಿನ ಕಾರ್ಯತಂತ್ರ ತಿಳಿಸಲಾಗದು

  ಗ್ರಾಪಂ ಚುನಾವಣೆ ಗೆಲ್ಲುವತ್ತ ಲಕ್ಷ್ಯ; ಬೆಳಗಾವಿಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ

  ಬೆಳಗಾವಿ: ಉಪ ಚುನಾವಣೆಗಳ ಗೆಲುವಿನ ಕಾರ್ಯತಂತ್ರ ಬಹಿರಂಗಪಡಿಸಿದರೆ ವಿರೋಧ ಪಕ್ಷದ ನಾಯಕರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬಿ.ಎಸ್.ಯಡಿಯೂರಪ್ಪ, ನಳಿನಕುಮಾರ್ ಕಟೀಲ್ ನೇತೃತ್ವದಲ್ಲಿ ಬೆಳಗಾವಿ ಲೋಕಸಭಾ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಶ್ರದ್ಧೆಯಿಂದ ಮಾಡುವುದು ನನ್ನ ಕರ್ತವ್ಯ ಎಂದು ಸುದ್ದಿಗಾರರಿಗೆ ತಿಳಿಸಿದರು. ದುಡ್ಡು ಖರ್ಚು ಮಾಡೋದೆ ವಿಜಯೇಂದ್ರ ಸ್ಟ್ರಾಟಜಿ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿ, ಈ ಹೇಳಿಕೆ ನೀಡಿ ಕ್ಷೇತ್ರದ ಮತದಾರರನ್ನು ಅವಮಾನ ಮಾಡುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದರೆ ಕಾಂಗ್ರೆಸ್​ಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕುಟುಕಿದರು.

  ರಾಜ್ಯ ಬಿಜೆಪಿ ಉಸ್ತುವಾರಿ ಮೊದಲ ಬಾರಿ ಆಗಮನ: ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಉತ್ತರ ಪ್ರದೇಶದ ಸಂಸದ ಅರುಣ್ ಸಿಂಗ್ ನೇಮಕವಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿರುವ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಮತ್ತು ಬಸವ ಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಜರುಗ ಲಿರುವ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

  ಪಶ್ಚಿಮಘಟ್ಟ ಕಾರ್ಯಪಡೆಗೆ ರವಿ ಕುಶಾಲಪ್ಪ ಅಧ್ಯಕ್ಷ: ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರನ್ನಾಗಿ ಕೊಡಗಿನ ರವಿ ಕುಶಾಲಪ್ಪ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೊಡಗು ಬಿಜೆಪಿಯಲ್ಲಿ ಸಕ್ರಿಯರಾಗಿರುವ ರವಿ ಅವರು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷ ವಹಿಸಿದ ವಿವಿಧ ಜವಾಬ್ದಾರಿ ನಿಭಾಯಿಸಿದ್ದರು.

  ಹಣಮಂತ ಕೊಟಬಾಗಿ ನೇಮಕ: ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಬೆಳಗಾವಿ ಜಿಲ್ಲೆ ಕಿತ್ತೂರಿನ ಹಣಮಂತ ಕೊಟಬಾಗಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts