17 ಸಚಿವರ ಪ್ರಮಾಣ: ಬಿಎಸ್​ವೈ ಟೀಮ್ ರೆಡಿ, ಹಿರಿ, ಕಿರಿಯರ ಸಮ್ಮಿಶ್ರಣ, ಜೊಲ್ಲೆ, ಸವದಿ, ಚವ್ಹಾಣ್, ಡಾ.ಅಶ್ವತ್ಥಗೆ ಒಲಿದ ಅದೃಷ್ಟ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು 25 ದಿನಗಳ ಬಳಿಕ ಸಂಪುಟ ವಿಸ್ತರಣೆ ಕುತೂಹಲಕ್ಕೆ ಮಂಗಳವಾರ ತೆರೆಬೀಳಲಿದೆ. ಇಂದು ಬೆಳಗ್ಗೆ 10.30ರಿಂದ 11.30ರೊಳಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಂಪುಟದ 17 ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸೋಮವಾರ ಸಂಜೆಯವರೆಗೂ ಕುತೂಹಲವಾಗಿಯೇ ಉಳಿದಿದ್ದ ನೂತನ ಸಚಿವರ ಪಟ್ಟಿಯನ್ನು ತಡರಾತ್ರಿ ಅಂತಿಮಗೊಳಿಸಿ ಬಿಜೆಪಿ ವರಿಷ್ಠರು ಸಿಎಂ ಯಡಿಯೂರಪ್ಪ ಅವರಿಗೆ ರವಾನಿಸಿದ್ದಾರೆ.

ಒಂದೆರಡು ಅಚ್ಚರಿಯ ಹೆಸರುಗಳೊಂದಿಗೆೆ ಸಿದ್ಧಗೊಂಡಿರುವ ಪಟ್ಟಿಯಲ್ಲಿ ನಿರೀಕ್ಷೆಯಂತೆ ಹಲವು ಹಿರಿಯ ನಾಯಕರು ಸ್ಥಾನಪಡೆದಿದ್ದಾರೆ. ಹಳೆಯ ತಪ್ಪುಗಳು ಮರುಕಳಿಸಬಾರದೆಂಬ ಮುನ್ನೆಚ್ಚರಿಕೆ, ಪಕ್ಷದ ವರ್ಚಸ್ಸಿಗೂ ಧಕ್ಕೆ ಆಗಬಾರದೆಂಬ ದೂರಾಲೋಚನೆಯಿಂದ ಎಚ್ಚರಿಕೆಯ ಹೆಜ್ಜೆ ಇಟ್ಟು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಜು.26ರಂದು ಮುಖ್ಯಮಂತ್ರಿಯಾಗಿ ಬಿಎಸ್​ವೈ ಪ್ರಮಾಣವಚನ ಸ್ವೀಕರಿಸಿದರೂ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿರಲಿಲ್ಲ. ಬಳಿಕ ಕಳೆದ ಶನಿವಾರವಷ್ಟೇ ಪಕ್ಷದ ವರಿಷ್ಠರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ನೀಡುವ ಜತೆಗೆ ಯಾರು ಸಂಪುಟದಲ್ಲಿರಬೇಕೆಂಬುದನ್ನು ತಾವೇ ತೀರ್ವನಿಸುವ ಸಂದೇಶ ನೀಡಿದ್ದರು.

ಜಾತಿ, ಪ್ರದೇಶದ ಆಧಾರದಲ್ಲಿಯೇ ಮಂತ್ರಿ ಸ್ಥಾನದ ಆಯ್ಕೆ ನಡೆದಿದೆ. ಅತೃಪ್ತ ಶಾಸಕರನ್ನು ಎರಡನೇ ಹಂತದಲ್ಲಿ ಸೇರಿಸಿಕೊಳ್ಳುವ ಉದ್ದೇಶದಿಂದಲೂ ಕೆಲ ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲಾಗಿದೆ.

ಸಂತೋಷ ಪ್ರಮುಖ ಪಾತ್ರ: ಸಚಿವರ ಪಟ್ಟಿ ಸಿದ್ಧತೆಯಲ್ಲಿ ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರಮುಖ ಪಾತ್ರ ವಹಿಸಿದ್ದಾರೆ. ಯಡಿಯೂರಪ್ಪ ಅಮಿತ್ ಷಾ ಅವರನ್ನು ಭೇಟಿಯಾಗುವ ಒಂದು ದಿನ ಮುನ್ನ ಸಂತೋಷ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಅಂತಿಮ ಪಟ್ಟಿ ಕಳುಹಿಸುವ ಮುನ್ನ ಷಾ ಅವರು ಬಿ.ಎಲ್.ಸಂತೋಷ್ ಅವರೊಂದಿಗೂ ಚರ್ಚೆ ನಡೆಸಿದ್ದಾಗಿ ತಿಳಿದುಬಂದಿದೆ.

ಆಕಾಂಕ್ಷಿಗಳಲ್ಲಿ ಹೆಚ್ಚಿದ ಆತಂಕ: ಇರುವ 105 ಶಾಸಕರಲ್ಲಿ ಮಂತ್ರಿ ಭಾಗ್ಯ ಯಾರಿಗೆ ಒಲಿಯಲಿದೆ ಎಂಬುದು ಸೋಮವಾರ ತಡರಾತ್ರಿಯವರೆಗೂ ನಿಗೂಢವಾಗಿತ್ತು. ಈ ಮೊದಲು ಸಂಪುಟಕ್ಕೆ ತೆಗೆದುಕೊಳ್ಳುವವರ ಹೆಸರುಗಳನ್ನು ರಾಜ್ಯದ ಕೋರ್ ಕಮಿಟಿಯಲ್ಲಿ ರ್ಚಚಿಸಿ ನಿರ್ಧರಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಅಧ್ಯಕ್ಷರು ಪಟ್ಟಿ ಕಳುಹಿಸುತ್ತೇವೆ, ಸಿದ್ಧತೆ ಮಾಡಿಕೊಳ್ಳಿ ಎಂದು ಆದೇಶ ಕೊಟ್ಟಿದ್ದ ಹಿನ್ನೆಲೆಯಲ್ಲಿ ಲಾಬಿ ನಡೆಸಿದರೆ ತಿರುಗುಬಾಣವಾಗಬಹುದೆಂಬ ಭೀತಿಯಿಂದಾಗಿ ಯಾರೊಬ್ಬರೂ ತುಟಿ ಬಿಚ್ಚುತ್ತಿರಲಿಲ್ಲ. ಸೋಮವಾರ ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿ ಸಚಿವಾಕಾಂಕ್ಷಿಗಳು ಬಹುತೇಕ ಕಾಣಲೇ ಇಲ್ಲ. ಆದರೆ ಕೆಲವರು ದೂರವಾಣಿ ಮೂಲಕ ಸಿಎಂರನ್ನು ಸಂರ್ಪಸಿದರೆ, ವಿವಿಧ ಸಂಘ-ಸಂಸ್ಥೆಗಳು, ಆಪ್ತರ ಮೂಲಕವೂ ಲಾಬಿ ನಡೆದಿತ್ತು. ಆದರೆ ಬಿಎಸ್​ವೈ ವರಿಷ್ಠರತ್ತ ಬೊಟ್ಟು ಮಾಡಿದ್ದು, ನನ್ನ ಪಾತ್ರವೇನೂ ಇಲ್ಲ ಎಂದು ಸಮಾಧಾನ ಪಡಿಸಿದ್ದರು.

ತಿಂಗಳೊಳಗೆ ಮತ್ತೆ ವಿಸ್ತರಣೆ?: ಮೊದಲ ಹಂತದಲ್ಲಿ ಮಂಗಳವಾರ 17 ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅನರ್ಹರ ಪ್ರಕರಣ ಇನ್ನು 15 ದಿನಗಳೊಳಗೆ ಇತ್ಯರ್ಥವಾಗುವ ವಿಶ್ವಾಸವಿದೆ. ಒಂದೊಮ್ಮೆ ಸ್ಪೀಕರ್ ತೀರ್ಪಿಗೆ ತಡೆ ಸಿಕ್ಕರೆ ಅನರ್ಹರ ಪೈಕಿ ಬಹುತೇಕರು ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ಈ ಕಾರಣಕ್ಕೆ ತಿಂಗಳೊಳಗೆ ಮತ್ತೆ ಸಂಪುಟ ವಿಸ್ತರಣೆ ನಡೆದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಶೀಘ್ರವೇ 17 ಅನರ್ಹ ಶಾಸಕರು ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿಯೂ ಇದೆ.

ಸಚಿವರ ಎದುರು ಬೃಹತ್ ಸವಾಲು: ಸಚಿವ ಸ್ಥಾನ ಅವಕಾಶ ಪಡೆದವರು ಮೊದಲಿಗೆ ಚಟುವಟಿಕೆಯನ್ನು ನೆರೆ ಪೀಡಿತ ಜಿಲ್ಲೆಯಿಂದಲೇ ಆರಂಭಿಸುವ ಸಂದರ್ಭ ಇದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿರ್ವಹಣೆ ಹಾಗೂ ಪುನರ್ ವಸತಿ, ಪುನರ್ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವ ಉದ್ದೇಶದಿಂದ ಹೊಸ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ.

ಸಂಭಾವ್ಯರು

1. ಗೋವಿಂದ ಕಾರಜೋಳ
2. ಡಾ. ಅಶ್ವತ್ಥ ನಾರಾಯಣ್​ ಸಿ.ಎನ್
3. ಲಕ್ಷ್ಮಣ ಸವದಿ
4. ಕೆ.ಎಸ್​ ಈಶ್ವರಪ್ಪ
5. ಆರ್. ಅಶೋಕ್
6. ಜಗದೀಶ್​ ಶೆಟ್ಟರ್​
7. ಬಿ. ಶ್ರೀರಾಮುಲು
8. ಸುರೇಶ್​ ಕುಮಾರ್
9. ವಿ. ಸೋಮಣ್ಣ
10. ಸಿ.ಟಿ ರವಿ
11. ಬಸವರಾಜ್​ ಬೊಮ್ಮಾಯಿ
12. ಕೋಟಾ ಶ್ರೀನಿವಾಸ ಪೂಜಾರಿ
13. ಜೆ.ಸಿ ಮಾಧುಸ್ವಾಮಿ
14. ಸಿ.ಸಿ ಪಾಟೀಲ್​
15. ಎಚ್​. ನಾಗೇಶ್
16. ಪ್ರಭು ಚೌಹಾಣ್​
17. ಶಶಿಕಲಾ ಜೊಲ್ಲೆ

ಬಿಜೆಪಿ ರಾಜ್ಯಾಧ್ಯಕ್ಷ ಯಾರು?

ಪಕ್ಷದ ಅಧ್ಯಕ್ಷರಾಗುತ್ತಾರೆ ಎಂದೇ ನಿರೀಕ್ಷೆ ಇದ್ದ ಸಿ.ಟಿ. ರವಿ ಸಚಿವರಾಗುತ್ತಿದ್ದಾರೆ. ಆದ್ದರಿಂದ ಪಕ್ಷದ ಅಧ್ಯಕ್ಷರು ಯಾರು ಎಂಬ ಕುತೂಹಲ ಮುಂದುವರಿಯಲಿದೆ. ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ ಪೈಕಿ ಒಬ್ಬರು ಅಧ್ಯಕ್ಷರಾಗಬಹುದೆಂದು ಹೇಳಲಾಗುತ್ತಿದೆ. ಆದರೆ ರವಿ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಪ್ರಯತ್ನ ನಡೆಸುವ ಉದ್ದೇಶ ಹೊಂದಿದ್ದಾರೆನ್ನಲಾಗಿದೆ.

ಸವದಿಗೆ ಅವಕಾಶ!

ಲಕ್ಷ್ಮಣ ಸವದಿ ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಅಥಣಿಯಲ್ಲಿ ಉಪಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಸಲುವಾಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಆ ಕ್ಷೇತ್ರದ ಅತೃಪ್ತ ಶಾಸಕ ಮಹೇಶ್ ಕುಮಠಳ್ಳಿ ಉಪ ಚುನಾವಣೆ ಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ.

1. ಕೇಂದ್ರ ಸಂಪುಟ ಮಾನದಂಡವನ್ನೇ ಮಾದರಿ ಯಾಗಿಟ್ಟುಕೊಂಡು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾತಿದೆ

2. ಜಾತಿ, ಪ್ರದೇಶವಾರು ಜತೆಗೆ ಸಂಘದೊಂದಿಗೆ ಒಡನಾಟ, ಪಕ್ಷ ನಿಷ್ಠೆ ಗಮನಿಸಿ ಆಯ್ಕೆ

3. ಹಿರಿತನದ ಜತೆಗೆ ದೂರದೃಷ್ಟಿ ಇಟ್ಟುಕೊಂಡು ಹೊಸ ನಾಯಕತ್ವ ಬೆಳೆಸುವ ಆಲೋಚನೆಯಂತೆ ಸಚಿವ ಸ್ಥಾನಕ್ಕೆ ಕೆಲವರ ಆಯ್ಕೆ

4. ಅಸಮಾಧಾನವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ವರಿಷ್ಠರು ಸಚಿವರ ಆಯ್ಕೆ ಜವಾಬ್ದಾರಿ ಹೊತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *