ಜಿಲ್ಲಾದ್ಯಂತ ಬಿಜೆಪಿ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಹಾವೇರಿ

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು, ಮುಖಂಡರು, ನರೇಂದ್ರ ಮೋದಿ ಅಭಿಮಾನಿಗಳು, ವಿವಿಧ ಸಂಘಟನೆಗಳಿಂದ ವಿಜಯೋತ್ಸವ ಆಚರಿಸಲಾಯಿತು.

ನಗರದಲ್ಲಿ ಆಗತಾನೆ ಹಸೆಮಣೆ ಏರಿದ ನವ ದಂಪತಿ, ಮದುವೆ ಮಂಟಪದಲ್ಲಿ ವಿಜಯೋತ್ಸವ ಆಚರಿಸಿ ಗಮನ ಸೆಳೆದರು.

ತಾಲೂಕಿನ ಕುಣಿಮೆಳ್ಳಿಹಳ್ಳಿಯ ನಿವಾಸಿ ವೀರೇಶ ಹಿರೇಮಠ ಹಾಗೂ ನಗರದ ನಯನಾ ಕಾಲವಾಡಮಠ ಅವರ ಮದುವೆ ನಗರದ ಶಿವಶಕ್ತಿ ಪ್ಯಾಲೇಸ್​ನಲ್ಲಿ ಗುರುವಾರ ನಿಶ್ಚಯಿಸಲಾಗಿತ್ತು. ಅದರಂತೆ ಬೆಳಗ್ಗೆ ತಾಳಿ ಕಟ್ಟುವ ಕಾರ್ಯ ಮುಗಿದ ಬಳಿಕ ಬಿಜೆಪಿ ಗೆಲುವು ಖಚಿತವಾಗುತ್ತಿದ್ದಂತೆ ಮದುವೆ ಮಂಟಪದಿಂದ ಹೊರ ಬಂದ ನವ ದಂಪತಿ ರಸ್ತೆ ಬದಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ 3ನೇ ಬಾರಿಗೆ ಆಯ್ಕೆಯಾದ ಸಂಸದ ಶಿವಕುಮಾರ ಉದಾಸಿ ಅವರಿಗೆ ಶುಭ ಕೋರಿದರು. ನಂತರ ಮದುವೆ ಮಂಟಪದಲ್ಲಿ ಮೋದಿ ಹಾಡಿಗೆ ಕುಣಿದು ಕುಪ್ಪಳಿಸಿದರು. ಮೋದಿ ಪರ ಘೊಷಣೆ ಕೂಗಿದರು.

ಅಭೂತಪೂರ್ವ ಜಯ: ಹಾವೇರಿ, ಗದಗ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಂಸದ ಶಿವಕುಮಾರ ಉದಾಸಿ ಗೆಲುವು ಸಾಧಿಸುತ್ತಿದ್ದಂತೆ ಹಿರೇಕೆರೂರ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಗುರುವಾರ ಬಿಜೆಪಿಯ ವಿವಿಧ ಘಟಕಗಳಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.

ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಾರ್ಯವೈಖರಿ ಮೆಚ್ಚಿರುವ ಮತದಾರರು ಲೋಕಸಭೆ ಚುನಾವಣೆ ಯಲ್ಲಿ ಮತ್ತೆ ಅಭೂತ ಪೂರ್ವ ಜಯ ತಂದುಕೊಟ್ಟಿದ್ದಾರೆ ಎಂದು ಹೇಳಿದರು.

ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಸ್.ಆರ್. ಅಂಗಡಿ, ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ತಾ.ಪಂ. ಸದಸ್ಯ ಮಹೇಶ ಗುಬ್ಬಿ, ಪ.ಪಂ. ಸದಸ್ಯ ಮಹೇಂದ್ರ ಬಡಳ್ಳಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಿಂಗಪ್ಪ ಚಳಗೇರಿ, ಪ್ರಕಾಶ ಹಿತ್ಲಳ್ಳಿ, ಬಿ.ಟಿ. ಚಿಂದಿ, ಈರಣ್ಣ ಚಿಟ್ಟೂರು, ರವಿ ಸಿದ್ದಪ್ಪಗೌಡ್ರ, ರವಿ ಚಿಂದಿ, ಸಿದ್ದನಗೌಡ ನರೇಗೌಡ್ರ, ಜಗದೀಶ ದೊಡ್ಡಗೌಡ್ರ, ಇತರರು ಇದ್ದರು.

ರಾರಾಜಿಸಿದ ಕೇಸರಿ ರಂಗು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ಭರ್ಜರಿ ಜಯ ದೊರೆಯುತ್ತಿದ್ದಂತೆ ಗುರುವಾರ ಅಕ್ಕಿಆಲೂರು ಸೇರಿ ಸುತ್ತಲಿನ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಅಕ್ಕಿಆಲೂರು ಹಾಗೂ ಸುತ್ತಲಿನ 16 ಗ್ರಾಮ ಪಂಚಾಯಿತಿಗಳ 56ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಪಟ್ಟಣದಲ್ಲಿ ಹಿಂದು ಯುವಸೇನೆ, ಹಿಂದು ಜಾಗರಣ ವೇದಿಕೆ ಸೇರಿ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಪರಸ್ಪರ ಕೇಸರಿ ಬಣ್ಣ ಎರಚಿ ಭಗವಾ ಧ್ವಜದೊಡನೆ ಮೆರವಣಿಗೆ ನಡೆಸಿದರು.

ವಿವಿಧ ಬಡಾವಣೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿದ ನೂರಾರು ಕಾರ್ಯಕರ್ತರು ಬಿಜೆಪಿ ಪರ ಘೊಷಣೆ ಕೂಗಿದರು. ಇದಕ್ಕೂ ಮೊದಲು ವಿವಿಧ ದೇವಸ್ಥಾನಗಳಲ್ಲಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಸುತ್ತಲಿನ ಕಲ್ಲಾಪುರ, ಕುಸನೂರು, ಶ್ಯಾಡಗುಪ್ಪಿ, ಸುರಳೇಶ್ವರ, ಬಾಳಂಬೀಡ ಸೇರಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಸಾಮಾನ್ಯವಾಗಿತ್ತು.

ಪ್ರಕಾಶ ದುರ್ಗದ, ಉದಯ ವಿರುಪಣ್ಣನವರ, ಮಹೇಶ ಸಾಲವಟಗಿ, ಸಿದ್ದಲಿಂಗೇಶ ತುಪ್ಪದ, ಗಿರೀಶ ಕರಿದ್ಯಾವಣ್ಣನವರ, ಗಜೇಂದ್ರ ಕುಂದಾಪುರ, ಭರಮಪ್ಪ ಹರಿಜನ, ಮಲ್ಲೇಶಪ್ಪ ಕರ್ಜಗಿ, ವೀರೇಶ ನೆಲವಿಗಿ, ಪ್ರವೀಣ ಗೌಳಿ, ಪ್ರವೀಣ ಕಲಾಲ, ಯಲ್ಲಪ್ಪ ಕೊರಚರ, ಮಂಜುನಾಥ ಪಾವಲಿ, ಮಂಜುನಾಥ ಜಳಕಿ, ಪ್ರಸಾದ ಪಾವಲಿ, ಸುಹಾಸ್ ಕಾಕಡೆ, ಸಾಗರ ಕೋರಿ, ನಿಖಿಲ್ ವಿರುಪಣ್ಣನವರ, ಮಾರುತಿ ವಡ್ಡರ, ಅರುಣ ಮುಚ್ಚಂಡಿ, ಅಭಿಷೇಕ ವಿರುಪಣ್ಣನವರ, ಇತರರು ಉಪಸ್ಥಿತರಿದ್ದರು.

ಕಾರ್ಯಕರ್ತರಿಂದ ಬೈಕ್ ರ್ಯಾಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಹಾಗೂ ಧಾರವಾಡ ಕ್ಷೇತ್ರದಿಂದ ನಿರಂತರ ನಾಲ್ಕನೇ ಬಾರಿಗೆ ಸಂಸದರಾಗಿ ಪ್ರಲ್ಹಾದ ಜೋಶಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗುರುವಾರ ಸವಣೂರ ಪಟ್ಟಣ ಹಾಗೂ ತಾಲೂಕಿನಾದ್ಯಂತ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಕ್ಷದ ಧ್ವಜ ಹಿಡಿದು ಜಯಕಾರ ಕೂಗುವ ಮೂಲಕ ಸಂಭ್ರಮಪಟ್ಟರು.

ನಂತರ, ಪಟ್ಟಣದ ಪ್ರಮುಖ ಬೀದಿಯಲ್ಲಿ ಬೈಕ್ ರ‍್ಯಾಲಿ ನಡೆಸಿದ ಕಾರ್ಯಕರ್ತರು ಎಪಿಎಂಸಿ ಎದುರು, ಡಾ. ಅಂಬೇಡ್ಕರ್ ವೃತ್ತ, ಭರಮಲಿಂಗೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಶ ಸಾಲಿಮಠ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಮುಂದೆ ಯಾವುದೇ ಘಟಬಂಧನ ಹಾಗೂ ವಿರೋಧ ಪಕ್ಷಗಳ ನಾಯಕರ ಮಾತು ನಡೆಯಲಿಲ್ಲ. ರಾಜ್ಯದಲ್ಲಿ ಸಹ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಮೋದಿಜಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ರಾಜ್ಯದಲ್ಲಿ ಬಿಎಸ್​ವೈ ಮುಖ್ಯಮಂತ್ರಿಯಾಗಿ ಹಾಗೂ ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧಾರವಾಡ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ವೈ. ಪಾಟೀಲ, ತಾಲೂಕಾಧ್ಯಕ್ಷ ಗಾಳೆಪ್ಪ ದೊಡ್ಡಪೂಜಾರ, ಪುರಸಭೆ ಸದಸ್ಯ ಮಹೇಶ ಮುದಗಲ್, ತಾ.ಪಂ. ಮಾಜಿ ಅಧ್ಯಕ್ಷ ಎಂ.ಕೆ. ಬಿಜ್ಜೂರ, ರುದ್ರಗೌಡ ಪಾಟೀಲ, ಮುಖಂಡರಾದ ಸುಭಾಸ ಗಡೆಪ್ಪನವರ, ನಿಂಗಪ್ಪ ಬಂಕಾಪೂರ, ಗಿರೀಶ ಮಟಿಗಾರ, ಪ್ರವೀಣ ಚರಂತಿಮಠ, ಪ್ರವೀಣ ಬಾಲೇಹೊಸೂರ, ಬಸವರಾಜ ಮಠಪತಿ, ನೂರಾರು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

ಭಾರತ ಆಗಲಿದೆ ಶಕ್ತಿಶಾಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತಗಳಿಂದ ಜಯಶಾಲಿಯಾದ ಹಿನ್ನೆಲೆಯಲ್ಲಿ ರಟ್ಟಿಹಳ್ಳಿ ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರಗೌಡ ಚೆನ್ನಗೌಡ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ 5 ವರ್ಷಗಳ ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಅನೇಕ ಜನಪರ ಯೋಜನೆಗಳನ್ನು ದೇಶದ ಜನತೆ ಬೆಂಬಲಿಸಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾರತವನ್ನು ಅತ್ಯಂತ ಅಭಿವೃದ್ಧಿ ಮತ್ತು ಶಕ್ತಿಯುತ ರಾಷ್ಟ್ರವನ್ನಾಗಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಗ್ರಾ.ಪಂ. ಸದಸ್ಯ ಗೋಪಾಲ ಮಡಿವಾಳರ, ರಾಜು ಪವಾರ, ರಾಜು ವೆರ್ಣೆಕರ, ಕೆ.ವೈ. ಬಾಜೀರಾಯರ್, ವೀರಣ್ಣಗೌಡ್ರ ಮಕರಿ, ಕುಮಾರ ಪಾಟೀಲ, ಶ್ರೀನಿವಾಸ ಭೈರಪ್ಪನವರ, ಪಾಂಡು ಸಿಂಧೆ, ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *