ಐಟಿ ದಾಳಿ ಮೂಲಕ ನನ್ನ ಗೆಲುವನ್ನು ತಡೆಯಲು ಬಿಜೆಪಿಗೆ ಸಾಧ್ಯವಿಲ್ಲ: ಕನ್ನಿಮೋಳಿ

ತುತುಕುಡಿ: ಹಿರಿಯ ಡಿಎಂಕೆ ನಾಯಕ ಮತ್ತು ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್​ ಅವರ ಸಹೋದರಿ, ಸಂಸದೆ ಕನ್ನಿಮೋಳಿ ಅವರ ಮನೆಯ ಮೇಲೆ ಆದಾಯ ತೆರಿಗೆ(IT) ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಆದಾಯ ತೆರಿಗೆ ದಾಳಿಗಳ ಮೂಲಕ ಒತ್ತಡವನ್ನು ಹೆಚ್ಚಿಸಿ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ತಡೆಯಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಆದಾಯ ತೆರಿಗೆ ದಾಳಿಯ ಮೂಲಕ ನನ್ನ ಯಶಸ್ಸನ್ನು ಬಿಜೆಪಿ ತಡೆಯಲಾಗುವುದಿಲ್ಲ. ಈ ದಾಳಿಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ, ಉದ್ದೇಶಪೂರ್ವಕ ಯೋಜನೆಯಾಗಿದ್ದು, ಯಾವುದೇ ದಾಖಲೆಯನ್ನು ವಶಪಡಿಸಿಕೊಂಡಿಲ್ಲ ಎಂದು ದಾಳಿ ಬಳಿಕ ತಿಳಿಸಿದ್ದಾರೆ.

ಐಟಿ ಮೂಲದ ಪ್ರಕಾರ, ಇದು ತಪ್ಪು ಸುದ್ದಿ ಮತ್ತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದಿದ್ದಾರೆ.

ಅವರು ನಮ್ಮನ್ನು ಹೆದರಿಸಲು ಬಯಸುತ್ತಿದ್ದಾರೆ. ತುತುಕುಡಿಯಲ್ಲಿ ಚುನಾವಣೆಗಳನ್ನು ನಿಲ್ಲಿಸಲು ಅವರು ಬಂದಿದ್ದಾರೆ. ಆದರೆ ಡಿಎಂಕೆ ಸ್ವಯಂಸೇವಕರು ಈಗ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಏ. 18ರಂದು ನಡೆಯಲಿರುವ ಲೋಕಸಭಾ ಚುನಾವಣೆಗೂ 48 ಗಂಟೆಗಳ ಮುಂಚೆ ತೂತುಕುಡಿ ಲೋಕಸಭಾ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿರುವ ಕನಿಮೋಳಿ ಮನೆ ಮೇಲೆ ಐಟಿ ದಾಳಿಯಾಗಿತ್ತು.

ಈ ಕುರಿತು ಪಕ್ಷದ ಅಧ್ಯಕ್ಷ ಎಂ ಕೆ ಸ್ಟಾಲಿನ್‌ ಪ್ರತಿಕ್ರಿಯಿಸಿ, ಬಿಜೆಪಿಯು ಕೇಂದ್ರದ ತನಿಖಾ ಸಂಸ್ಥೆಗಳನ್ನು ವಿಪಕ್ಷ ನಾಯಕರ ವಿರುದ್ಧ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕನಿಮೋಳಿ ನಿವಾಸದ ಮೇಲೆ ದಾಳಿಯಾಗಿರುವ ಕುರಿತು ಮಾಹಿತಿ ಬಂದಿದೆ. ಬಿಜೆಪಿ ಅಭ್ಯರ್ಥಿ ತಮಿಳ್‌ಸಾಯಿ ಸೌಂದರಾಜನ್‌ ಅವರ ಆವರಣದಲ್ಲಿ ಕೋಟಿ, ಕೋಟಿ ಹಣವಿದೆ. ಅಲ್ಲಿ ಏಕೆ ದಾಳಿ ಮಾಡಿಲ್ಲ? ಯಾರು ಈ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ? ಮೋದಿಯವರು ಆದಾಯ ತೆರಿಗೆ ಇಲಾಖೆ, ಸಿಬಿಐ, ನ್ಯಾಯಾಂಗ ವ್ಯವಸ್ಥೆ ಮತ್ತು ಚುನಾವಣೆ ಆಯೋಗಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದರು. (ಏಜೆನ್ಸೀಸ್)