ಮೈತ್ರಿ ಅಭ್ಯರ್ಥಿ ಸಮರ್ಥ ಎದುರಾಳಿಯೇ ಅಲ್ಲ

ಚಿಕ್ಕಮಗಳೂರು: ಜಿಲ್ಲಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿರುವ ಬಿಜೆಪಿಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವು ನಿಶ್ಚಿತ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿಯೇ ಇಲ್ಲದ ಕಾಂಗ್ರೆಸ್ ಹಾಗೂ ನೆಲೆಗಟ್ಟಿಲ್ಲದ ಜೆಡಿಸ್​ನ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಶೋಭಾ ಕರಂದ್ಲಾಜೆ ಅವರಿಗೆ ಸಮರ್ಥ ಎದುರಾಳಿಯೇ ಅಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಡು ಬಡವರು, ಕೃಷಿಕರ ಪರ ಯೋಜನೆ ಜಾರಿಗೆ ತರುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಬೇಕಾದ ಕಠಿಣ ಕ್ರಮ ಕೈಗೊಂಡು ರಾಷ್ಟ್ರ ರಕ್ಷಣೆ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.

ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್​ಕುಮಾರ್ ಮಾತನಾಡಿ, ಜಿಪಂನಲ್ಲಿ ಐದು ವರ್ಷ ಬಿಜೆಪಿ ಆಡಳಿತ ನಡೆಸಿದೆ. ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಯಡಿ ಆರು ಸಾವಿರ ಕೋಟಿ ರೂ. ಅನುದಾನ ಬಂದಿದೆ. ಕೇಂದ್ರ ಸರ್ಕಾರವೇ 200 ಕೋಟಿ ರೂ. ಭರಿಸುವ 15,613 ಮನೆ ಮಂಜೂರು ಮಾಡಿದೆ. ಬಸವ, ಅಂಬೇಡ್ಕರ್ ಯೋಜನೆಯಡಿ 59,987 ಮನೆ ನಿರ್ವಣಕ್ಕೆ ಕೇಂದ್ರ ಶೇ.30ರಷ್ಟು ಅನುದಾನ ನೀಡಿದೆ ಎಂದು ಹೇಳಿದರು.

ಜಿಲ್ಲೆಯ 25,626 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಬಡವರ ಆರೋಗ್ಯ ಚಿಕಿತ್ಸೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 13.4 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಅಮೃತ್ ಯೋಜನೆಯಡಿ ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರಿಗಾಗಿ 136 ಕೋಟಿ ರೂ. ಬಿಡುಗಡೆ ಮಾಡಿದ್ದು, ಕೆಲಸ ಪ್ರಗತಿಯಲ್ಲಿದೆ ಎಂದರು.

ಜಿಪಂ ಸದಸ್ಯೆ ಕವಿತಾ ಲಿಂಗರಾಜ್ ಮಾತನಾಡಿ, ಪಂಡಿತ್ ದೀನ್​ದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆಯಡಿ ಜಿಲ್ಲೆಯ ಬಡವರ ಮನೆಗಳಿಗೆ 220 ಕೋಟಿ ರೂ. ಮಂಜೂರು, ನರೇಗಾದಡಿ ಮಾಡಿದ ವಿವಿಧ ಕಾಮಗಾರಿಗೆ 3,103 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.