ಕಾಂಗ್ರೆಸ್​ನಿಂದ ದೇಶದ ಸೈನಿಕರ ಸ್ಥೈರ್ಯ ಕುಗ್ಗಿಸುವ ಯತ್ನ

ಕೊಪ್ಪ: ದೇಶದ ರಕ್ಷಣೆ, ಭದ್ರತೆ ಮತ್ತು ಸಮಗ್ರತೆಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

ಕೊಪ್ಪದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಸೈನಿಕರ ಸಾಧನೆಯನ್ನು ಅನುಮಾನಿಸುತ್ತ, ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕ್ಷೇತ್ರದ ಶಾಸಕರು ಶತ್ರುರಾಷ್ಟ್ರದ ಪ್ರಧಾನಿಯನ್ನು ಸಜ್ಜನ ಎನ್ನುತ್ತಾರೆ. ಮೋದಿ ಸೋಲಿಸುವ ಉದ್ದೇಶಕ್ಕೆ ವಿರೋಧ ಪಕ್ಷಗಳೆಲ್ಲಾ ಒಂದಾಗಿವೆ ಎಂದು ದೂರಿದರು.

ದೇಶದ್ರೋಹಿಗಳು, ಭ್ರಷ್ಟಾಚಾರಿಗಳನ್ನು ಮಟ್ಟಹಾಕಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ತಮ್ಮ ಬೂತ್​ನಲ್ಲಿ ಸೈನಿಕರಂತೆ ಹೋರಾಡಿ ಬಿಜೆಪಿಗೆ ಹೆಚ್ಚಿನ ಮತ ಬೀಳುವಂತೆ ನೋಡಿಕೊಳ್ಳಬೇಕು ಎಂದರು.

ಕ್ಷೇತ್ರ ಚುನಾವಣಾ ಉಸ್ತುವಾರಿ ಎಸ್.ಎನ್.ರಾಮಸ್ವಾಮಿ ಮಾತನಾಡಿ, ಬಿಜೆಪಿ ವಿರೋಧಿಗಳು ಜಿಎಸ್​ಟಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಜಿಎಸ್​ಟಿ ಜಾರಿಯಿಂದ 76ಕ್ಕೂ ಹೆಚ್ಚು ವಸ್ತುಗಳ ಬೆಲೆ ಶೇ.40ರಷ್ಟು ಕಡಿಮೆಯಾಗಿದೆ. ಮೋದಿ ಅವರ ಗೀವ್ ಅಪ್ ಕರೆಗೆ ಕೋಟ್ಯಂತರ ಮಂದಿ ತಮ್ಮ ಗ್ಯಾಸ್ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. ಇದರಿಂದ 9 ಕೋಟಿಗೂ ಹೆಚ್ಚು ಬಡವರ ಮನೆಗೆ ಉಚಿತ ಗ್ಯಾಸ್ ಸಂಪರ್ಕ ನೀಡಲು ಅನುಕೂಲವಾಗಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮೇಲಿನಪೇಟೆಯಿಂದ ಬಸ್ ನಿಲ್ದಾಣದವರೆಗೆ ರೋಡ್ ಶೋ ಮೂಲಕ ಮತಯಾಚಿಸಿದರು.

ಗೋಬ್ಯಾಕ್ ಅಭಿಯಾನ ಸರಿಯಾಗಿದೆ!: ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಬಂದಿಲ್ಲ ಎಂದು ಬೊಬ್ಬೆ ಹಾಕಿಕೊಂಡು ಗೋ ಬ್ಯಾಕ್ ಶೋಭಾ ಅಭಿಯಾನ ಮಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಶೋಭಾ ಕ್ಷೇತ್ರದ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ. ಅವಶ್ಯಕತೆ ಇದ್ದಾಗ ಕ್ಷೇತ್ರಕ್ಕೆ ಬಂದಿದ್ದಾರೆ. ಗೋಬ್ಯಾಕ್ ಅಭಿಯಾನ ಸರಿಯಾಗಿದೆ. ಗೋಬ್ಯಾಕ್ ಅಂದರೆ ಶೋಭಾ ಮತ್ತೆ ವಾಪಸ್ ಪಾರ್ಲಿಮೆಂಟ್​ಗೆ ಹೋಗಲಿ ಎಂಬರ್ಥದಲ್ಲಿ ಹೇಳಿರಬಹುದು. ನಿಶ್ಚಿತವಾಗಿ ಶೋಭಾ ಮತ್ತೊಮ್ಮೆ ಸಂಸದರಾಗುತ್ತಾರೆ. ಇದರಿಂದ ನಮ್ಮ ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಹೇಳಿದರು