ಮೋದಿ ಸರ್ಕಾರ ರೈತ ವಿರೋಧಿ

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಸಂಸದ ಪಿ.ಸಿ.ಗದ್ದಿಗೌಡರ ಅವರನ್ನು ಮೂರು ಬಾರಿ ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿಕೊಟ್ಟಿದ್ದೀರಿ. ಒಂದು ದಿನವೂ ಮತಕ್ಷೇತ್ರದ ಸಮಸ್ಯೆಗಳನ್ನು ಸಂಸತ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಮಹದಾಯಿಗಾಗಿ ನರಗುಂದ ರೈತರು ಕೈಗೊಂಡಿರುವ ಹೋರಾಟಕ್ಕೆ ಬೆಂಬಲ ಕೂಡ ನೀಡಿಲ್ಲ. ನಿಮ್ಮ ನೋವು, ನಲಿವಿಗೆ ಭಾಗಿಯಾದವರನ್ನು ಆಯ್ಕೆ ಮಾಡಿ ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಮನವಿ ಮಾಡಿದರು.

ಮತಕ್ಷೇತ್ರ ವ್ಯಾಪ್ತಿಯ ನರಗುಂದ ನಗರದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸಂಸದರು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಮೋದಿ ನೋಡಿ ವೋಟ್ ಹಾಕಿ ಎಂದು ಐದು ವರ್ಷಗಳ ನಂತರ ಮತ ಕೇಳಲು ಬರುತ್ತಿದ್ದಾರೆ. ಮತದಾರರು ಮೂರ್ಖರಲ್ಲ. ಮೋದಿಯವರನ್ನು ನೋಡಿ ವೋಟ್ ಹಾಕಿದರೆ ಜಿಲ್ಲೆಯ ಅಭಿವೃದ್ಧಿ ಆಗಲಿಲ್ಲ. ನೋಟ್ ಬ್ಯಾನ್ ಮಾಡಿ ಬಡವರು, ಸಾಮಾನ್ಯ ಜನರ ಬದುಕಿನ ಮೇಲೆ ಬರೆ ಎಳೆದವರನ್ನು ಮತ್ತೆ ಆಯ್ಕೆ ಮಾಡುವುದು ಎಷ್ಟು ಸೂಕ್ತ. ಜನರು ಎಚ್ಚರಿಕೆಯಿಂದ ಮತದಾನ ಮಾಡಬೇಕು. ನಾನು ನಿಮ್ಮ ಮನೆಮಗಳು ನನಗೊಂದು ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ಸಂಸದರು ಜನಸಾಮಾನ್ಯರ ಪರ ದನಿಯಾಗಲಿಲ್ಲ. ಜಿಲ್ಲೆಗೆ ವಿಶೇಷ ಅನುದಾನ ತರಲಿಲ್ಲ ಎಂದ ಅವರು, ಬಿಜೆಪಿ ನಾಯಕ ಕೆ.ಎಸ್. ಈಶ್ವರರಪ್ಪ ಅವರಿಗೆ ತಮ್ಮ ಅಭ್ಯರ್ಥಿ ಬಗ್ಗೆ ವಿಶ್ವಾಸವಿಲ್ಲ. ಹೀಗಾಗಿ ಮೋದಿ ನೋಡಿ ವೋಟ್ ಹಾಕಿ ಎಂದು ಹೇಳುತ್ತಾರೆ. ನಾನು ಜಿಪಂ ಅಧ್ಯಕ್ಷತೆಯಾಗಿದ್ದಾಗ ಮಾಡಿದ ಕಾರ್ಯನೋಡಿ ಆಶೀರ್ವಾದ ಮಾಡಿ ಎಂದು ಕೇಳುತ್ತಿದ್ದೇನೆ ಎಂದು ಟಾಂಗ್ ನೀಡಿದರು.

ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಬಿ.ಆರ್. ಯಾವಗಲ್, ನವೀನ ಶೆಟ್ಟಿ, ಪವನ ಯಾವಗಲ್, ವಿಠ್ಠಲ ಸಿಂಧೆ, ರಾಜು ಕಲಾಲ ಇತರರು ಇದ್ದರು.

ನರಗುಂದ ಮತಕ್ಷೇತ್ರವನ್ನು ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ನಿರ್ಲಕ್ಷೃ ಮಾಡಿದ್ದಾರೆ. ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಚುನಾವಣೆ ಬಂದಾಗ ಮತ ಕೇಳಲು ಬಂದವರು ಮತ್ತೆ ಈ ಕಡೆ ಗಮನ ಹರಿಸುವುದಿಲ್ಲ. ಮಹದಾಯಿ ವಿಚಾರದಲ್ಲಿ ತಮ್ಮ ಪ್ರಧಾನಿಗೆ ಇಲ್ಲಿನ ಸಮಸ್ಯೆ ತಿಳಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಹೋರಾಟಕ್ಕೂ ಸ್ಪಂದನೆ ನೀಡಲಿಲ್ಲ. ಈ ಸಾರಿ ವೀಣಾ ಕಾಶಪ್ಪನವರ ಮತ ನೀಡಿ.
– ಬಿ.ಅರ್.ಯಾವಗಲ್ ಮಾಜಿ ಶಾಸಕ ನರಗುಂದ