ಸಚಿವ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ಫಿಕ್ಸ್​: ನೂತನ ಸರ್ಕಾರದ ಸಚಿವರ ಸಂಭಾವ್ಯ ಪಟ್ಟಿ ಹೀಗಿದೆ…

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಪತನವಾಗಿ ಬಿ.ಎಸ್​.ಯಡಿಯೂರಪ್ಪ ಅವರು ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 15 ದಿವಸ ಕಳೆದರೂ ರಚನೆಯಾಗದೆ ವಿಳಂಬವಾಗಿದ್ದ ಸಚಿವ ಸಂಪುಟಕ್ಕೆ ಕೊನೆಗೂ ಕಾಲ ಕೂಡಿಬಂದಿದ್ದು, ಸಚಿವರ ಸಂಭಾವ್ಯ ಪಟ್ಟಿಯೂ ಹೊರಬಿದ್ದಿದೆ.

ಆಗಸ್ಟ್ 16ರಂದು ಸಿಎಂ ಬಿಎಸ್​ವೈ ದೆಹಲಿಗೆ ತೆರಳಿ ತಮ್ಮ ಹೈಕಮಾಂಡ್​ ಅನ್ನು ಭೇಟಿ ಮಾಡಿ ಸಚಿವ ಸಂಪುಟದ ಬಗ್ಗೆ ಚರ್ಚಿಸಿ ಸಚಿವರ ಪಟ್ಟಿಯನ್ನು ಫೈನಲ್​ ಮಾಡಲಿದ್ದಾರೆ. ಆಗಸ್ಟ್​ 17ರಂದು ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಬಳಿಕ ಆಗಸ್ಟ್​ 18ರಂದು ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂಬ ಮಾತುಗಳು ಬಿಜೆಪಿ ಮೂಲಗಳಿಂದ ಕೇಳಿಬರುತ್ತಿದೆ.

ಸಚಿವರ ಸಂಭಾವ್ಯ ಪಟ್ಟಿ ಹೀಗಿದೆ…
1. ಗೋವಿಂದ ಕಾರಜೋಳ: ಲೋಕೋಪಯೋಗಿ
2. ಈಶ್ವರಪ್ಪ: ಗೃಹ ಇಲಾಖೆ
3. ಆರ್​.ಅಶೋಕ್: ಸಾರಿಗೆ
4. ಜಗದೀಶ ಶೆಟ್ಟರ್: ಕಂದಾಯ
5. ವಿ. ಸೋಮಣ್ಣ: ನಗರಾಭಿವೃದ್ಧಿ
6. ಜೆ.ಸಿ. ಮಾಧುಸ್ವಾಮಿ: ಕಾನೂನು & ಸಂಸದೀಯ ವ್ಯವಹಾರ
7. ಬಿ. ಶ್ರೀರಾಮುಲು: ಸಮಾಜ ಕಲ್ಯಾಣ
8. ಉಮೇಶ್ ಕತ್ತಿ: ಕೃಷಿ
9. ಡಾ.ಅಶ್ವತ್ಥ್ ನಾರಾಯಣ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
10. ಶಶಿಕಲಾ ಜೊಲ್ಲೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
11. ರೇಣುಕಾಚಾರ್ಯ: ಪೌರಾಡಳಿತ ಖಾತೆ
12. ಬಾಲಚಂದ್ರ ಜಾರಕಿಹೊಳಿ: ಕಾರ್ಮಿಕ ಇಲಾಖೆ
13. ಶಿವನಗೌಡ ನಾಯಕ್​: ಸಣ್ಣ ಕೈಗಾರಿಕೆ ಖಾತೆ
14. ಅಂಗಾರ: ಸಣ್ಣ ನೀರಾವರಿ
15. ಬೋಪಯ್ಯ: ಉನ್ನತ ಶಿಕ್ಷಣ
16. ಕೋಟಾ ಶ್ರೀನಿವಾಸ ಪೂಜಾರಿ: ಮುಜರಾಯಿ ಮತ್ತು ಯೋಜನೆ

ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನದಿಂದ ಕಾಂಗ್ರೆಸ್​ ಜೆಡಿಎಸ್​ ಮೈತ್ರಿ ಸರ್ಕಾರ 14 ತಿಂಗಳ ಕಾಲ ಆಡಳಿತ ನಡೆಸಿ ಪತನಗೊಂಡಿತ್ತು. ಇದಾದ ಬೆನ್ನಲ್ಲೇ ನೂತನ ಸರ್ಕಾರದ ಸಿಎಂ ಆಗಿ ಬಿ.ಎಸ್​. ಯಡಿಯೂರಪ್ಪ ಅವರು ಕಳೆದ ತಿಂಗಳು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ನಡುವೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್​ ನಿಧನ ಹಾಗೂ ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಸಚಿವ ಸಂಪುರ ರಚನೆ ವಿಳಂಬವಾಗಿತ್ತು. ಪ್ರವಾಹ ಪರಿಸ್ಥಿತಿಯಲ್ಲಿ ಸಿಎಂ ಬಿಎಸ್​ವೈ ಏಕಾಂಗಿಯಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದರು. ಇದರ ನಡುವೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಕೊನೆಗೂ ಸಂಪುಟ ರಚನೆಗೆ ಕಾಲ ಕೂಡಿಬಂದಿದ್ದು, ರಾಜ್ಯದ ಆಡಳಿತ ವ್ಯವಸ್ಥೆ ವೇಗ ಪಡೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ. (ದಿಗ್ವಿಜಯ ನ್ಯೂಸ್​)

One Reply to “ಸಚಿವ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ಫಿಕ್ಸ್​: ನೂತನ ಸರ್ಕಾರದ ಸಚಿವರ ಸಂಭಾವ್ಯ ಪಟ್ಟಿ ಹೀಗಿದೆ…”

Leave a Reply

Your email address will not be published. Required fields are marked *