ಮತ್ತೆ ಮುನ್ನೆಲೆಗೆ ಬಂದ ಸಂಪುಟ ರಚನೆ ಕಸರತ್ತು

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದ್ದು, ಸಚಿವರಾಗಲು ಶಾಸಕರ ಕಸರತ್ತು ಶುರುವಾಗಿದೆ. ಸದ್ಯ ನೆರೆಪೀಡಿತ ಪ್ರದೇಶಗಳ ವೀಕ್ಷಣೆಯಲ್ಲಿರುವ ಸಿಎಂ ಬುಧವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ಬುಧವಾರ, ಗುರುವಾರ ಇಡೀ ದಿನ ಬೆಂಗಳೂರಲ್ಲಿರುವ ಸಿಎಂ, ಪಕ್ಷದ ಮುಖಂಡರು- ಆಪ್ತರ ಜತೆ ರ್ಚಚಿಸಿ, ಸಂಭಾವ್ಯ ಸಚಿವರ ಪಟ್ಟಿ ಮತ್ತೆ ಪರಿಶೀಲಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಚಿವಾಕಾಂಕ್ಷಿಗಳು ತಮ್ಮ ಮುಖಂಡರ ಮೂಲಕ ಲಾಬಿ ಮುಂದುವರಿಸಿದ್ದು, 2 ದಿನ ಬೆಂಗಳೂರಿನಲ್ಲಿ ಸಿಎಂ ಮುಂದೆ ಪರೇಡ್ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಆಪ್ತ ಮುಖಂಡರು, ಜಾತಿ ಸಂಘಟನೆ ಮೂಲಕ ಸಿಎಂ ಮೇಲೆ ಒತ್ತಡ ಹೇರುವ ತಂತ್ರ ರೂಪಿಸಿರುವ ಆಕಾಂಕ್ಷಿಗಳು ಅದನ್ನು ತೀವ್ರ ಗೊಳಿಸುವ ನಿರೀಕ್ಷೆ ಇದೆ.

19ರೊಳಗೆ ವಿಸ್ತರಣೆ: ಸ್ವಾತಂತ್ರೊ್ಯೕತ್ಸವದಲ್ಲಿ ಪಾಲ್ಗೊಳ್ಳುವ ಸಿಎಂ ಅಂದೇ ರಾತ್ರಿ ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂಬ ಮಾಹಿತಿ ಇದೆ. ಶುಕ್ರವಾರ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾಗುವ ಸಿಎಂ, ಸಂಭಾವ್ಯ ಸಚಿವರ ಪಟ್ಟಿ ಅಂತಿಮಗೊಳಿಸಲಿದ್ದು, ಅಂದೇ ರಾತ್ರಿ ಅಥವಾ ಮರುದಿನ ಬೆಂಗಳೂರಿಗೆ ಮರಳಲಿದ್ದಾರೆ. ಆ.18 ಅಥವಾ 19ರಂದು ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅನರ್ಹರಿಗಿಲ್ಲ ಸ್ಥಾನ: ಶಾಸಕ ಸ್ಥಾನದಿಂದ ಅನರ್ಹರಾದವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನ ನೀಡಬೇಕೆಂದಿದ್ದ ಯಡಿಯೂರಪ್ಪ ಅವರಿಗೆ ಮಂಗಳವಾರದ ಸುಪ್ರೀಂಕೋರ್ಟ್ ವಿಚಾರಣೆ ತಣ್ಣೀರೆರಚಿದೆ. ಆ.19ರೊಳಗೆ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂಕೋರ್ಟ್ ಒಪ್ಪದ್ದರಿಂದ ಅನರ್ಹರನ್ನು ಹೊರಗಿಟ್ಟು ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬವಾದರೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುವುದಲ್ಲದೆ ಸ್ವ-ಪಕ್ಷದ ಶಾಸಕರ ಅಸಮಾಧಾನಕ್ಕೂ ಕಾರಣವಾಗಬಹುದು ಎಂಬ ಭೀತಿ ಸಿಎಂಗೆ ಕಾಡುತ್ತಿದೆ.

ಸಂಭಾವ್ಯ ಸಚಿವರು

ಅನರ್ಹರ ವಿಚಾರಣೆ ಅಂತಿಮ ಗೊಳ್ಳದ ಕಾರಣ ಮೊದಲ ಹಂತದಲ್ಲಿ ಶೇ.50 ಸಚಿವ ಸಂಪುಟ ಭರ್ತಿ ಮಾಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಿರಿಯರಾದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಜೆ.ಸಿ. ಮಾಧುಸ್ವಾಮಿ, ಶ್ರೀರಾಮುಲು, ಡಾ.ಅಶ್ವತ್ಥನಾರಾಯಣ, ಎಂ.ಪಿ.ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ, ಕೆ.ಜಿ.ಬೋಪಯ್ಯ, ಕೋಟ ಶ್ರೀನಿವಾಸ ಪೂಜಾರಿ ಹೆಸರು ಪಟ್ಟಿಯಲ್ಲಿವೆ. ವಿ. ಸೋಮಣ್ಣ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಶಿವನಗೌಡ ನಾಯಕ್, ಎಸ್.ಅಂಗಾರ ಹೆಸರೂ ಕೇಳಿಬಂದಿವೆ.

ಅನರ್ಹರ ವಿಚಾರಣೆ ಸದ್ಯಕ್ಕಿಲ್ಲ

ನವದೆಹಲಿ: ಅನರ್ಹಗೊಂಡ ಶಾಸಕರ ಪ್ರಕರಣದ ವಿಚಾರಣೆ ಈಗಲೇ ಕೈಗೆತ್ತಿಕೊಳ್ಳಲಾಗದು, ರಿಜಿಸ್ಟ್ರಿ ಮೂಲಕವೇ ವಿಚಾರಣೆಗೆ ಕೇಸು ನಿಗದಿಯಾಗಲಿದೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ದ್ವಿಸದಸ್ಯ ಪೀಠ ಹೇಳಿದೆ. ಅನರ್ಹರ ಪ್ರಕರಣದ ಅರ್ಜಿ ಸುಪ್ರೀಂಕೋರ್ಟ್ ರಿಜಿಸ್ಟ್ರಿ ಮುಂದಿದೆ. ಪ್ರಕರಣದ ಪಟ್ಟಿ ಆಗುತ್ತಿದ್ದಂತೆ ವಿಚಾರಣೆ ನಡೆಸಲಾಗುವುದು. ನಿಮ್ಮ ಅರ್ಜಿಯ ತುರ್ತು ವಿಚಾರಣೆ ಅಗತ್ಯದ ಬಗ್ಗೆ ರಿಜಿಸ್ಟ್ರಾರ್​ಗೂ ಮಾಹಿತಿ ನೀಡಿ ಎಂದು ಪೀಠ ಹೇಳಿದೆ. ತಮ್ಮನ್ನು ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತೀರ್ಮಾನ ಪ್ರಶ್ನಿಸಿ ಅನರ್ಹರು ಸುಪ್ರೀಂ ಮೆಟ್ಟಿಲೇರಿದ್ದರು. ಆ ಅರ್ಜಿ ಇನ್ನೂ ವಿಚಾರಣೆಗೆ ನಿಗದಿಯಾಗಿಲ್ಲ. ತುರ್ತು ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂಬ ಅನರ್ಹರ ಪರ ವಕೀಲರ ಮನವಿಗೆ ನ್ಯಾಯಪೀಠ ಈ ಸಲಹೆ ನೀಡಿತು.

Leave a Reply

Your email address will not be published. Required fields are marked *