ನಾನು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ

ಕಡೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನೊಬ್ಬ ಪ್ರಬಲ ಆಕಾಂಕ್ಷಿ ಎಂದು ಬಿಜೆಪಿ ಮುಖಂಡ ಬೀರೂರು ಎನ್. ದೇವರಾಜ್ ಹೇಳಿದರು.

ಬೀರೂರು ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಮತ್ತು ಕಡೂರು ಕ್ಷೇತ್ರದಿಂದ 2 ಬಾರಿ ಚುನಾವಣೆಗೆ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋಲುಂಡರೂ ಜನಸೇವೆ ಮತ್ತು ರಾಜಕಾರಣದಿಂದ ಹಿಂದೆ ಸರಿಯದೆ ನಿರಂತರವಾಗಿ ಕ್ಷೇತ್ರದ ಒಡನಾಡಿಯಾಗಿ ಕೆಲಸ ಮಾಡಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 30 ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿರುವ ನಾನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಡೆ-ನುಡಿ ಮೆಚ್ಚಿ ಅಂದು ರಾಜಕಾರಣ ಪ್ರವೇಶಿಸಿದ್ದೆ. ಅವರನ್ನೇ ರಾಜಕೀಯ ಗುರುವನ್ನಾಗಿ ಸ್ವೀಕರಿಸಿದ್ದೆ. ಇದೀಗ ಹಾಸನ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಹೆಸರನ್ನು ಪಕ್ಷದ ಕೆಲ ಪ್ರಭಾವಿ ಮುಖಂಡರು ಶಿಫಾರಸು ಮಾಡಿದ್ದು, ಒಕ್ಕಲಿಗ ಮತ್ತು ವೀರಶೈವ ಮತಗಳನ್ನು ಸೆಳೆಯಬಲ್ಲೆ. ಹಾಸನ ಜಿಲ್ಲೆಯ ಬಹುತೇಕ ಒಕ್ಕಲಿಗರು ಬೀರೂರು ಭಾಗಕ್ಕೆ ಸಂಬಂಧ ಬೆಳೆಸಿರುವುದು ಲಾಭವಾಗಲಿದೆ. ತಮ್ಮ ಪತ್ನಿ ಶಾಂತಾ ಅವರ ಬಹುತೇಕ ಸಂಬಂಧಿಕರು ಹಾಸನ ಭಾಗದಲ್ಲಿರುವುದು ವರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜಕೀಯ ಗುರು ಬಿಜೆಪಿಯಲ್ಲೇ ಇರುವುದರಿಂದ ನಮಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಕಡೂರು ಕ್ಷೇತ್ರದ ಟಿಕೆಟ್ ತಮಗೆ ಎಂದು ಬಿಜೆಪಿ ವಲಯದಲ್ಲಿ ಕೇಳಿಬಂದಿತ್ತಾದರೂ ಕಡೇ ಗಳಿಗೆಯಲ್ಲಿ ಬೆಳ್ಳಿಪ್ರಕಾಶ್ ಪಾಲಾಯಿತು. ಈ ಬಾರಿ ಲೋಕಸಭೆ ಚುನಾವಣೆಗೆ ತಮ್ಮ ಹೆಸರನ್ನು ಪಕ್ಷದ ಮುಖಂಡರೇ ಸೇರಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.