ಹಿಂದುಳಿದ ಆಯೋಗ ರಚನೆಗೆ ಕಾಂಗ್ರೆಸ್​ ಅಡ್ಡಿ

ಕಲಬುರಗಿ: ಹಿಂದುಳಿದ ವರ್ಗದವರಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯಗಳ ಅನುಷ್ಠಾನಕ್ಕೆ ರಚಿಸಿದ ಆಯೋಗಕ್ಕೆ ಲೋಕಸಭೆ ಸಮ್ಮತಿ ಸೂಚಿಸಿದ್ದರೂ ರಾಜ್ಯಸಭೆಯಲ್ಲಿ ಬಹುಮತ ಹೊಂದಿದ್ದ ಕಾಂಗ್ರೆಸ್ ಮಸೂದೆ ಅಂಗೀಕಾರಕ್ಕೆ ಒಪ್ಪಿಗೆ ಸೂಚಿಸಲಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ವೀರಶೈವ ಕಲ್ಯಾಣ ಮಂಟಪ ಬಳಿ ಶನಿವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಪೂರಕವಾಗಿರುವ ಆಯೋಗ ರಚನೆ ಮಸೂದೆ ಅಂಗೀಕರಿಸುವಂತೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಸದಸ್ಯರ ಮನವೊಲಿಕೆ ಮಾಡಬಹುದಿತ್ತು. ಆದರೆ ಅವರು ಮನಸ್ಸು ಮಾಡಲಿಲ್ಲ. ಹೀಗಾಗಿ ಅವರಿಗೆ ಹಿಂದುಳಿದವರ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಹರಿಹಾಯ್ದರು.
ಖರ್ಗೆ ಅವರಿಗೆ ಹಿಂದುಳಿದ ವರ್ಗದ ಕಲ್ಯಾಣ ಬೇಕಿಲ್ಲ. ಆದರೆ ಬಿಜೆಪಿ ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ಸದಾ ಸಿದ್ಧವಿದೆ ಎಂದ ಅವರು, ಹಿಂದುಳಿದ ವರ್ಗಗಳ ವಿರೋಧಿ ಖರ್ಗೆಗೆ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಕೋರಿದರು.
ಸುದೀರ್ಘ ಐದು ದಶಕ ಅಧಿಕಾರ ಅನುಭವಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲಬುರಗಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿಯಲು ಖರ್ಗೆ ಅವರೇ ಪ್ರಮುಖ ಕಾರಣ ಎಂದು ಆರೋಪಿಸಿದ ಈಶ್ವರಪ್ಪ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದರೆ ಈ ಭಾಗ ಮುಂದುವರಿದ ಪ್ರದೇಶವಾಗುತ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಖರ್ಗೆ, ಧರ್ಮಸಿಂಗ್ ಸಚಿವರಾಗಿದ್ದಾರೆ. ಆದರೂ ಈ ಭಾಗ ಹಿಂದುಳಿದಿದ್ದೇಕೆೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ ಎಂದರು.
ನಮ್ಮ ಸೈನಿಕರ ರುಂಡ ಕತ್ತರಿಸಿದಾಗ ವಿಶ್ವಸಂಸ್ಥೆ ಮೊರೆ ಹೋಗಿತ್ತು ಕಾಂಗ್ರೆಸ್. ಆದರೆ ಸೈನಿಕರನ್ನು ಕಳೆದುಕೊಂಡ 12 ದಿನದಲ್ಲೇ ಅವರ ನೆಲದೊಳಗೆ ನುಗ್ಗಿ ಉಗ್ರರನ್ನು ಹತ್ಯೆಗೈದಿದ್ದು ಮೋದಿ ಸರ್ಕಾರ. ನಮ್ಮದು ಕೋಮುವಾದಿ ಪಕ್ಷವಲ್ಲ, ರಾಷ್ಟ್ರವಾದಿ ಪಕ್ಷ. ಬಿಜೆಪಿ ಮುಸ್ಲಿಂ ವಿರೋಧಿ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುವ ದೇಶ ದ್ರೋಹಿಗಳ ವಿರೋಧಿಯಾಗಿದೆ ಎಂದು ತಿರುಗೇಟು ನೀಡಿದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ ತಮ್ಮ ಬೆಂಬಲಿಗರೊಂದಿಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸಮ್ಮುಖ ಬಿಜೆಪಿಗೆ ಸೇರ್ಪಡೆಯಾದರು.

Leave a Reply

Your email address will not be published. Required fields are marked *