ಖರ್ಗೆ ನಿಯಂತ್ರಿಸಲು ಬಿಜೆಪಿ ಕಾರ್ಯತಂತ್ರ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವತ್ತ ಚಿತ್ತ ಹರಿಸಿರುವ ರಾಜ್ಯ ಕಮಲಪಡೆ, ಇದಕ್ಕೆ ಅಡ್ಡಿಯಾಗಿರುವ ಹಿರಿಯ ಕಾಂಗ್ರೆಸ್ ನಾಯಕ, ಪ್ರಭಾವಿ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವ ತಗ್ಗಿಸಲು ಕಾರ್ಯತಂತ್ರ ರೂಪಿಸಿದೆ. ಬುಧವಾರವಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ಬಾಬುರಾವ್ ಚಿಂಚನಸೂರ ಬಳಿಕ ಮತ್ತಷ್ಟು ‘ಖರ್ಗೆ ಸಂತ್ರಸ್ತ’ರನ್ನು ಸೆಳೆಯುವ ಕಾರ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಲನೆ ನೀಡಿದ್ದಾರೆ.

ಖರ್ಗೆ ಪ್ರತಿನಿಧಿಸುವ ಕಲಬುರಗಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲದೆ ಖರ್ಗೆ ಪ್ರಭಾವವಿರುವ ಇಡೀ ಹೈದರಾಬಾದ್ ಕರ್ನಾಟಕ ಭಾಗದತ್ತ ಬಿಜೆಪಿ ದೃಷ್ಟಿ ಹರಿಸಿದೆ. ಹೀಗಾಗಿಯೇ ಬಾಬುರಾವ್ ಚಿಂಚನಸೂರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಆಹಾರ ಸಂಸ್ಕರಣ ಕೈಗಾರಿಕೆ ಸಚಿವ ಸಾಧಿ್ವ ನಿರಂಜನ ಜ್ಯೋತಿ ಖುದ್ದು ಹಾಜರಿದ್ದು ಖರ್ಗೆಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆಂದು ಹೇಳಲಾಗುತ್ತಿದೆ.

ಖರ್ಗೆ ಸಂತ್ರಸ್ತರ ಜಮಾವಣೆ: ಹೈ-ಕದಲ್ಲೇ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಖರ್ಗೆ ವಿರುದ್ಧ ವಿರೋಧಿಗಳ ಗುಂಪು ಸಬಲವಾಗಿ ರೂಪುಗೊಂಡಿವೆ. ಮೊದಲ ಬಾರಿ ಶಾಸಕರಾಗಿದ್ದ ಪುತ್ರ ಪ್ರಿಯಾಂಕ್​ಗೆ ಖರ್ಗೆ ಮಂತ್ರಿಗಿರಿ ಕೊಡಿಸಿದರು ಎಂಬ ಸಿಟ್ಟು ಅನೇಕರಲ್ಲಿತ್ತು. ಇದೀಗ ಮೈತ್ರಿ ಸರ್ಕಾರದಲ್ಲಿ ಅನೇಕ ಹಿರಿಯರಿಗೆ ಮಂತ್ರಿ ಸ್ಥಾನ ಕೈತಪ್ಪಿದ ಬಳಿಕವೂ ಮುನಿಸು ಹೆಚ್ಚಾಗಿದೆ. ಪುತ್ರನನ್ನು ಸಚಿವನನ್ನಾಗಿಸಲು ಲಾಬಿ ಮಾಡಿರುವ ಖರ್ಗೆ ತಮ್ಮ ಕುಟುಂಬಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಅಸಮಾಧಾನ ತೀವ್ರಗೊಂಡಿದೆ. ತಮ್ಮನ್ನು ತುಳಿದರು, ಮೋಸ ಮಾಡಿದರು, ಬೆನ್ನಿಗೆ ಚೂರಿ ಹಾಕಿದರು ಎನ್ನುವ ‘ಖರ್ಗೆ ಸಂತ್ರಸ್ತ’ರ ಸಂಖ್ಯೆ ಹೆಚ್ಚಾಗಿದೆ. ಇವರನ್ನೆಲ್ಲ ಒಟ್ಟಾಗಿಸಿ ಹೈ-ಕ ಭಾಗದಲ್ಲಿ ಪಕ್ಷವನ್ನು ಸದೃಢಗೊಳಿಸಲು ಬಿಜೆಪಿ ನಿರ್ಧರಿಸಿರುವುದಾಗಿ ಮೂಲಗಳು ಹೇಳಿವೆ. ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕುರಿತ ಚರ್ಚೆಗಳೂ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯ ಅಥವಾ ಕೋಲಿ ಸಮುದಾಯದಿಂದ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ವರಿಷ್ಠರ ಸೂಚನೆ

ಖರ್ಗೆ ಅವರನ್ನು ಸೋಲಿಸಲೇ ಬೇಕೆಂಬ ಜಿದ್ದು ರಾಜ್ಯ ಘಟಕದ ಯಾವ ಬಿಜೆಪಿಗರಲ್ಲೂ ಇಲ್ಲ. ಆದರೆ ಕೇಂದ್ರದ ವರಿಷ್ಠರು ಈ ಕುರಿತು ಸ್ಪಷ್ಟ ಸೂಚನೆ ನೀಡಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ 5 ಲೋಕಸಭೆ ಕ್ಷೇತ್ರಗಳಿವೆ. ಖರ್ಗೆ ಪ್ರತಿನಿಧಿಸುವ ಕಲಬುರಗಿ ಲೋಕಸಭೆ ಕ್ಷೇತ್ರ ಹಾಗೂ ಬಿ.ವಿ. ನಾಯಕ್ ಪ್ರತಿನಿಧಿಸುವ ರಾಯಚೂರು ಮಾತ್ರ ಬಿಜೆಪಿ ಕೈನಲ್ಲಿಲ್ಲ. ರಾಯಚೂರು ಕ್ಷೇತ್ರದಲ್ಲಿ ಕಳೆದ ಬಾರಿ ಕೇವಲ 1,499 ಮತಗಳಿಂದ ಬಿಜೆಪಿ ಸೋತಿತ್ತು. ಇವೆರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕಿರುವ ಕಾರಣ ಸ್ಥಳೀಯ ಸ್ನೇಹವನ್ನು ಲೆಕ್ಕಕ್ಕೆ ಇರಿಸಿಕೊಳ್ಳದೆ ಕೇಂದ್ರದ ಅವಶ್ಯಕತೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ರಾಷ್ಟ್ರೀಯ ವರಿಷ್ಠರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.