ಕಮಲ ಹಿಡಿದ ಬಾಬುರಾವ್ ಚಿಂಚನಸೂರ

ಬೆಂಗಳೂರು: ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ಕೋಲಿ ಸಮುದಾಯದವರಾದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಪತ್ನಿ ಅಮರೇಶ್ವರಿ ಜತೆ ಬುಧವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖ ಬಿಜೆಪಿಗೆ ಸೇರ್ಪಡೆಯಾದರು.

ಮಾಲೀಕಯ್ಯ ಗುತ್ತೇದಾರ್ ಹಾಗೂ ಕೇಂದ್ರ ಸಚಿವೆ ಸಾಧಿ್ವ ನಿರಂಜನ ಜ್ಯೋತಿ ಪರಿಶ್ರಮದಿಂದ ಚಿಂಚನಸೂರ ಇಂದು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಅನೇಕ ವರ್ಷಗಳಿಂದ ಅವರನ್ನು ಕರೆತರಲು ಪ್ರಯತ್ನ ನಡೆಸಿದ್ದವು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಇದರಿಂದ ಆನೆಬಲ ಬಂದಂತಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಬಾಬುರಾವ್ ಚಿಂಚನಸೂರ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಿ 72 ವರ್ಷಬಾದರೂ ಕೋಲಿ ಸಮಾಜವನ್ನು ಕಾಂಗ್ರೆಸ್ ಗುರುತಿಸಿರಲಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆಯೇ ನಮ್ಮ ಸಮುದಾಯಕ್ಕೆ ಸೇರಿದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ, ಸಾಧಿ್ವ ನಿರಂಜನ ಜ್ಯೋತಿ ಅವರನ್ನು ಕೇಂದ್ರ ಸಚಿವರಾಗಿ ಕಾಣಲು ಸಾಧ್ಯವಾಗಿದೆ. ಬಿಜೆಪಿ, ಜೆಡಿಎಸ್ ಬದಲಿಗೆ ಕಾಂಗ್ರೆಸ್​ನವರ ಕುತಂತ್ರದಿಂದಲೇ ವಿಧಾನಸಭಾ ಚುನಾವಣೆಯಲ್ಲಿ ಸೋಲಾಗಿದೆ. ಹೈಕ ಭಾಗದಲ್ಲಿ ಶೇ.46 ಇರುವ ಕೋಲಿ ಸಮಾಜದ ಒಗ್ಗಟ್ಟಿನಿಂದ ಬಿಜೆಪಿ ಜಯಭೇರಿ ಬಾರಿಸುವಂತೆ ಮಾಡುತ್ತೇನೆ ಎಂದರು.

ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಮೊದಲ ಬಾರಿ ಶಾಸಕರಾದ ಪುತ್ರನನ್ನು ಸಚಿವರಾಗಿಸಿ ಅವರ ಹಿತವನ್ನಷ್ಟೆ ಖರ್ಗೆ ಕಾಯ್ದುಕೊಂಡರು. ಪಕ್ಷವನ್ನು ತಮ್ಮ ಆಸ್ತಿ ಎಂದು ತಿಳಿದು ನಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಲ್ಲ, ನಾಯಕರು: ಕಾಂಗ್ರೆಸ್​ನ ಅನೇಕ ನಾಯಕರು ಸಂಪರ್ಕದಲ್ಲಿದ್ದು, ಸದ್ಯದಲ್ಲೇ ಸೇರ್ಪಡೆ ಕಾರ್ಯಕ್ರಮಗಳು ಚಾಲನೆಗೊಳ್ಳುತ್ತವೆ. ಅನೇಕ ಪ್ರಭಾವಿ ನಾಯಕರು ಹಾಗೂ ನಿವೃತ್ತ ಅಧಿಕಾರಿಗಳೂ ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು. ಈ ಪಟ್ಟಿಯಲ್ಲಿ ಸಚಿವರೂ ಇದ್ದಾರೆಯೇ ಎಂಬ ಪ್ರಶ್ನೆಗೆ, ‘ಸಚಿವರು-ಶಾಸಕರು ಎಂದು ಹೇಳಿಲ್ಲ. ನಾಯಕರು’ ಎಂದು ಸ್ಪಷ್ಟನೆ ನೀಡಿದರು.

ರಾಜ್ಯದಲ್ಲೂ ಹೆಚ್ಚಿನ ಸಂಖೆ್ಯೆಯಲ್ಲಿರುವ ಕೋಲಿ ಸಮುದಾಯದ ಬಾಬುರಾವ್ ಚಿಂಚನಸೂರ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಸಂತಸ ತಂದಿದೆ. ಬಿಜೆಪಿ ಪರ ಜನಾದೇಶ ಇದ್ದರೂ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಸರ್ಕಾರದ ಭವಿಷ್ಯದ ಕುರಿತು ಅನೇಕ ಅನುಮಾನಗಳಿವೆ.

| ಸಾಧಿ್ವ ನಿರಂಜನ ಜ್ಯೋತಿ ಕೇಂದ್ರ ಆಹಾರ ಸಂಸ್ಕರಣ ಕೈಗಾರಿಕೆ ಸಚಿವೆ

ಚಿಂಚನಸೂರ ಬಿಜೆಪಿ ಸೇರ್ಪಡೆ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಪಕ್ಷದಿಂದ ವ್ಯಕ್ತಿಯೇ ಹೊರತು, ಒಬ್ಬ ವ್ಯಕ್ತಿಯಿಂದ ಪಕ್ಷವಲ್ಲ. ಅವರಿಗೆ ಎಲ್ಲ ಅಧಿಕಾರ ಗಳನ್ನು ಕೊಟ್ಟಿದ್ದು ಕಾಂಗ್ರೆಸ್. ಈಗ ಮಾತೃ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ.

|ಪ್ರಿಯಾಂಕ್ ಖರ್ಗೆ ಸಚಿವ (ಕಲಬುರಗಿಯಲ್ಲಿ ಹೇಳಿದ್ದು)

ಸಿದ್ದು ಫೋನ್ ಕೂಡ ಟ್ಯಾಪ್!

ನನ್ನ ಜತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ದೂರವಾಣಿಯನ್ನೂ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದರು. ಇಂತಹದ್ದೇ ಸನ್ನಿವೇಶ ಹಿಂದೆ ಆಗಮಿಸಿದಾಗ ಸರ್ಕಾರದ ಕಥೆ ಏನಾಯಿತು ಎಂಬುದರ ಅರಿವು ಎಲ್ಲರಿಗೂ ಇದೆ. ಇದೊಂದು ಗಂಭೀರ ಪ್ರಕರಣ. ಇದರ ಬಗ್ಗೆ ಸಮಗ್ರ ತನಿಖೆ ಆಗಿ ಸತ್ಯಾಂಶ ಹೊರಬರಬೇಕು ಎಂದರು. ಅವರ ವಿರುದ್ಧದ ಪ್ರಕರಣಗಳ ಖುಲಾಸೆ ಕುರಿತು ಪ್ರತಿಕ್ರಿಯಿಸಿ, ಇನ್ನೂ ನಾಲ್ಕು ಪ್ರಕರಣಗಳಿವೆ. ನ್ಯಾಯಾಂಗದ ಮೇಲೆ ವಿಶ್ವಾಸ ಇನ್ನೂ ಹೆಚ್ಚಿದೆ. ಉಳಿದ ಪ್ರಕರಣಗಳಲ್ಲೂ ಖುಲಾಸೆಯಾಗುವ ನಂಬಿಕೆಯಿದೆ ಎಂದು ಹೇಳಿದರು. ಕೊಡಗಿನಲ್ಲಿ ನೆರೆ ಪರಿಸ್ಥಿತಿ ನಿಭಾಯಿಸಲು ವಿಶೇಷ ಅಧಿವೇಶನದ ಅವಶ್ಯಕತೆ ಇಲ್ಲ ಎಂದ ಬಿಎಸ್​ವೈ, ಸಮರೋಪಾದಿಯಲ್ಲಿ ಕಾರ್ಯ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ನಿಯಮಾವಳಿಗೆ ಹೆಚ್ಚು ಅಂಟಿಕೊಳ್ಳದೆ ಸಂತ್ರಸ್ತ ಜನರ ಸಂಕಷ್ಟ ಆಲಿಸಲು ಡಿಸಿ ಮುಂದಾಗಬೇಕು ಎಂದರು.

ಫೋನ್ ಕದ್ದಾಲಿಕೆ ಬಗ್ಗೆ ನನಗೇನೂ ಗೊತ್ತಿಲ್ಲ.

| ಸಿದ್ದರಾಮಯ್ಯ ಮಾಜಿ ಸಿಎಂ

ನಾನು ಯಾರ ದೂರವಾಣಿಯನ್ನೂ ಕದ್ದಾಲಿಕೆ ಮಾಡುತ್ತಿಲ್ಲ. ಅಂಥ ಚಟವೂ ನಮಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರು ಮಾಡಿದ್ದ ಕೆಲಸವನ್ನು ತಲೆಯಲ್ಲಿಟ್ಟುಕೊಂಡು ಯಡಿಯೂರಪ್ಪ ಮಾತನಾಡುತ್ತಿದ್ದಾರೆ. ಈ ಬಗ್ಗೆ ಸಣ್ಣ ಸಾಕ್ಷ್ಯ ತಂದುಕೊಟ್ಟರೂ ಕ್ರಮ ಕೈಗೊಳ್ಳಲಾಗುವುದು. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಬೇಕಿದ್ದರೆ ತನಿಖೆ ಮಾಡಿಕೊಳ್ಳಲಿ. ಸಮ್ಮಿಶ್ರ ಸರ್ಕಾರ ನೂರು ದಿನ ಪೂರೈಸಲಿದ್ದು, ಎಲ್ಲ ಹೊಸ ಯೋಜನೆಗಳು ಸೆಪ್ಟೆಂಬರ್ ಒಂದರಿಂದಲೇ ಜಾರಿಗೆ ಬರಲಿವೆ.

| ಎಚ್.ಡಿ.ಕುಮಾರಸ್ವಾಮಿ ಸಿಎಂ

ಯಾವ ರಾಜಕಾರಣಿ ಫೋನನ್ನೂ ಅನಧಿಕೃತವಾಗಿ ಟ್ಯಾಪ್ ಮಾಡಲಾಗಿಲ್ಲ. ದೇಶದ ರಕ್ಷಣಾ ವಿಚಾರದಲ್ಲಿ ಹಾಗಾಗ ಕೇಂದ್ರ ಗೃಹ ಇಲಾಖೆ ಮಾಹಿತಿ ಆಧರಿಸಿ ನಮ್ಮ ಅಧಿಕಾರಿಗಳು ಅಧಿಕೃತವಾಗಿ ಫೋನ್ ಕರೆ ಆಲಿಸುತ್ತಾರೆ. ಈ ಮಾಹಿತಿ ಯನ್ನೂ ಅವರು ನಮಗೆ ನೀಡುವುದಿಲ್ಲ. ನಾವೇಕೆ ರಾಜಕೀಯ ನಾಯಕರ ಫೋನ್ ಕದ್ದಾಲಿಸೋಣ?

| ಡಾ.ಪರಮೇಶ್ವರ್ ಡಿಸಿಎಂ