ಬಿಜೆಪಿಗೆ 6 ಕ್ಷೇತ್ರದಲ್ಲಿ ಅಪಸ್ವರ

| ರಮೇಶ ದೊಡ್ಡಪುರ ಬೆಂಗಳೂರು

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಚುನಾಯಿತರಾಗಿದ್ದವರ ಪೈಕಿ ಆರು ಸಂಸದರ ಕ್ಷೇತ್ರಗಳಲ್ಲಿ ಟಿಕೆಟ್ ಬದಲಿಸುವಂತೆ ಪ್ರಬಲವಾಗಿ ಧ್ವನಿ ಕೇಳಿಬರುತ್ತಿದ್ದು, ಇನ್ನೇನು ಟಿಕೆಟ್ ಘೊಷಣೆಗೆ ಕೆಲವೇ ದಿನ ಬಾಕಿಯಿರುವಾಗ ವರಿಷ್ಠರಿಗೆ ಸವಾಲು ಎದುರಾಗಿದೆ. ಬಿಜೆಪಿ ಜಯಿಸಿದ್ದ ಕ್ಷೇತ್ರಗಳ ಪೈಕಿ ಬಳ್ಳಾರಿ ಕ್ಷೇತ್ರ ಕೈಬಿಟ್ಟುಹೋದರೆ, ಬೆಂಗಳೂರು ದಕ್ಷಿಣ ಸಂಸದ ಅನಂತಕುಮಾರ್ ನಿಧನರಾಗಿ ದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ಬದಲಿಗೆ ಬಿ.ವೈ ರಾಘವೇಂದ್ರ ಸಂಸದರಾಗಿದ್ದಾರೆ. ಉಳಿದ 14 ಕ್ಷೇತ್ರಗಳ ಪೈಕಿ ಪ್ರಮುಖ ವಾಗಿ ಆರು ಕ್ಷೇತ್ರಗಳಲ್ಲಿ ಸಂಸದರ ವಿರುದ್ಧ ಧ್ವನಿಗಳು ಕೇಳಿಬರುತ್ತಿವೆ.

ಉತ್ತರ- ದಕ್ಷಿಣ ಗೊಂದಲವಿಲ್ಲ?: ಪೈಪೋಟಿಯಿರುವ ಹಾಲಿ ಸಂಸದರ ಕ್ಷೇತ್ರಗಳ ಪಟ್ಟಿಯಿಂದ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಹೊರಬಿದ್ದಿದ್ದು, ಡಿ.ವಿ. ಸದಾನಂದ ಗೌಡ ಹಾಗೂ ತೇಜಸ್ವಿನಿ ಅನಂತಕುಮಾರ್ ಟಿಕೆಟ್ ಪಡೆಯುವುದು ಬಹುತೇಕ ಖಚಿತ. ಕೇಂದ್ರದ ಹಿರಿಯ ಸಚಿವರು ಎಂಬುದರ ಜತೆಗೆ ಪ್ರಬಲ ಸಮುದಾಯವನ್ನೂ ಪ್ರತಿನಿಧಿಸುವ ಕಾರಣಕ್ಕೆ ಡಿ.ವಿ. ಸದಾನಂದಗೌಡರನ್ನು ಬದಲಿಸುವ ಚಿಂತನೆಯನ್ನು ಬಹುತೇಕ ಕೈಬಿಡಲಾಗಿದೆ. ಇನ್ನು, ಅನಂತಕುಮಾರ್ ನಿಧನದಿಂದ ತೆರವಾಗಿರುವ ಕ್ಷೇತ್ರದಲ್ಲಿ ಪತ್ನಿ ತೇಜಸ್ವಿನಿ ಅವರಿಗೇ ಟಿಕೆಟ್ ಖಚಿತ ಎನ್ನಲಾಗಿದೆ.

ಮನೆಯಲ್ಲೆ ಕುಳಿತು ಗೆಲ್ಲುತ್ತಾರೆ ಎನ್ನುವ ಸ್ಥಿತಿಯಿದ್ದ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಕ್ಷೇತ್ರದಲ್ಲಿ ಪರಿಸ್ಥಿತಿ ಬದಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ಸಂಸದರ ವಿರುದ್ಧ ಹರಿಹಾಯುವುದರ ಜತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿಸ್​ವೈ ಸಮ್ಮುಖದಲ್ಲೇ ಕಾರ್ಯಕರ್ತರು ಶನಿವಾರ ಕಿತ್ತಾಡಿಕೊಂಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ‘ಸ್ಥಳೀಯತೆ’ ಅಭಿಯಾನ ನಡೆಯುತ್ತಿದೆ. ಸ್ಥಳೀಯರಿಗೆ ಟಿಕೆಟ್ ನೀಡಿ, ಇಲ್ಲದಿದ್ದರೆ ಕೆಲಸ ಮಾಡುವುದಿಲ್ಲ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೆ, ಜಯಪ್ರಕಾಶ ಹೆಗಡೆ, ಕರಂದ್ಲಾಜೆ ಬೆಂಬಲಿಗರ ನಡುವೆ ಸಣ್ಣಪುಟ್ಟ ಸಂಘರ್ಷಗಳೂ ನಿರಂತರ.

ಕೊಪ್ಪಳ ಸಂಸದ ಸಂಗಣ್ಣ ಕರಡಿ ವಿರುದ್ಧ ಅನೇಕ ಸ್ಥಳೀಯ ನಾಯಕರು ತೊಡೆತಟ್ಟಿದ್ದಾರೆ. ಸಂಸದರನ್ನು ಬದಲಿಸಿ ಎಂಬ ಮಾತಿದ್ದು, ಡಾ.ಬಸವರಾಜ್, ವಿರೂಪಾಕ್ಷಪ್ಪ ಸಿಂಗನಾಳ್ ಪ್ರಮುಖವಾಗಿ ಟಿಕೆಟ್​ಗೆ ಪ್ರಯತ್ನಿಸುತ್ತಿದ್ದಾರೆ.

ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಜಿಲ್ಲಾ ಅಧ್ಯಕ್ಷ ಡಾ.ಮಂಜುನಾಥ್ ಅವರೇ ತಿರುಗಿ ಬಿದ್ದು ಸ್ವತಃ ಟಿಕೆಟ್ ಕೇಳುತ್ತಿದ್ದು, ಸಂಘ ಪರಿವಾರದಲ್ಲೂ ಸಂಸದರ ಬಗ್ಗೆ ನಕಾರಾತ್ಮಕ ಮಾತುಗಳಿವೆ. ಕೊಡಗು ಮುಖಂಡ ಅಪ್ಪಚ್ಚು ರಂಜನ್ ಸಹ ಟಿಕೆಟ್ ಆಕಾಂಕ್ಷಿ.

ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಬದಲಿಗೆ ಟಿಕೆಟ್ ಕೇಳುತ್ತಿರುವುದು ಇನ್ನೊಂದು ಅಚ್ಚರಿ. ಐದನೇ ಬಾರಿ ಸಂಸದರಾಗಿರುವ ಹೆಗಡೆ ಬದಲಿಗೆ ಸ್ಥಳೀಯ ಬಿಜೆಪಿ ಮುಖಂಡ ಡಾ.ಜಿ.ಜಿ. ಹೆಗಡೆಗೆ ಟಿಕೆಟ್ ಕೊಡಿಸಲು ಪಕ್ಷದೊಳಗೆ ಪ್ರಯತ್ನಗಳು ನಡೆದಿವೆ ಎನ್ನಲಾಗುತ್ತಿದೆ.

ಚುನಾವಣಾ ರಾಜಕೀಯ ಸಾಕಾಗಿದೆ ಎಂದು ಸ್ವತಃ ಬಾಗಲಕೋಟೆ ಸಂಸದ ಪಿ.ಸಿ ಗದ್ದಿಗೌಡರ್ ಹೇಳಿದ್ದಾರೆ ಎನ್ನುತ್ತ ಮಾಜಿ ಶಾಸಕ ಪಿ.ಎಚ್. ಪೂಜಾರ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ.

ಗೋ ಬ್ಯಾಕ್ ಅಭಿಯಾನ ಷಡ್ಯಂತ್ರ

ಉಡುಪಿ: ಹಣ, ಜಾತಿ ಬಲವಿಲ್ಲದಿದ್ದರೂ ಇಷ್ಟರವರೆಗೆ ಪುರುಷ ಸಂಸದರು ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಹಿಳೆಯಾಗಿ ನಾನು ಮಾಡಿದ್ದೇನೆ. ಗೋ ಬ್ಯಾಕ್ ಅಭಿಯಾನ ಷಡ್ಯಂತ್ರವಾಗಿದ್ದು, ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಇದರ ಹಿಂದಿದ್ದಾರೆ. ಅಪಪ್ರಚಾರಗಳಿಗೆ ಹೆದರುವುದಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಬ್ರಹ್ಮಾವರ ಪಾಸ್​ಪೋರ್ಟ್ ಕೇಂದ್ರ, ರಾಜ್ಯದ ಏಕೈಕ ಸಖಿ ಸೆಂಟರ್, 2 ಜಿಲ್ಲೆಗಳಲ್ಲಿ ಕೇಂದ್ರೀಯ ವಿದ್ಯಾಲಯ, ಉಡುಪಿಯಲ್ಲಿ ಜಿಟಿಟಿಸಿ ಕಟ್ಟಡ, ಕೌಶಲ ತರಬೇತಿ ಕೇಂದ್ರ ನಿರ್ವಣ, 550 ಕೋಟಿ ರೂ. ಸಿಆರ್​ಎಫ್ ಅನುದಾನ ಜಿಲ್ಲೆಗೆ ತರಲಾಗಿದೆ. ಈ ಮೊದಲು ಇದ್ದ ಪುರುಷ ಸಂಸದ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ತೋರಿಸಲಿ ಎಂದು ಸವಾಲೆಸೆದಿದ್ದಾರೆ.

ಸಂಸದರ ವಿರುದ್ಧ ಸಮಾನ ದೂರು

ಬಹುತೇಕ ಬಿಜೆಪಿ ಸಂಸದರ ವಿರುದ್ಧದ ದೂರುಗಳಲ್ಲಿ ಸಮಾನತೆಯಿದೆ. ಜನರಿಂದ ದೂರವಿರುತ್ತಾರೆ, ಕೇಂದ್ರ ಸರ್ಕಾರದಿಂದ ರೂಪಿಸಲಾಗಿರುವ ಯೋಜನೆಗಳ ಹೊರತಾಗಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ರಯತ್ನ ನಡೆಸಿಲ್ಲ, ಈಗಲೂ ಜಯಿಸಲು ಮೋದಿ ಹೆಸರೊಂದೇ ಆಧಾರ, ಬಿಜೆಪಿ ಕಾರ್ಯಕರ್ತರ ಬದಲಿಗೆ ಅನ್ಯ ಪಕ್ಷದವರಿಗೆ ಉಪಯೋಗ ಮಾಡಿದ್ದೇ ಹೆಚ್ಚು ಎನ್ನುವ ಆರೋಪಗಳು ಕೇಳಿಬರುತ್ತಿವೆ.

ವರಿಷ್ಠರಿಂದ ನಿರ್ಧಾರ

ಹಾಲಿ ಸಂಸದರಿಗೆ ಟಿಕೆಟ್ ಕುರಿತು ತೀರ್ವನವನ್ನು ಕೇಂದ್ರದ ವರಿಷ್ಠರೇ ಮಾಡಲಿದ್ದಾರೆ. ಹಾಲಿ ಕ್ಷೇತ್ರಗಳ ಟಿಕೆಟ್ ಬದಲಾವಣೆ ಕುರಿತು ತಾವು ನಿರ್ಧಾರ ಮಾಡುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ತಿಳಿಸಿದ್ದಾರೆ. ಯಾರಿಗೆ ನಿರಾಕರಿಸಬೇಕು, ಯಾರನ್ನು ಬದಲಾಯಿಸಬೇಕು ಎಂಬುದನ್ನು ಕೇಂದ್ರದಲ್ಲೇ ನಿರ್ಧಾರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಂಡಾಯ ತಣಿಸಲು ತೀವ್ರ ನಿಗಾ

ಬೆಂಗಳೂರು: ಹಾಲಿ ಸಂಸದರಿರುವ ಕ್ಷೇತ್ರಗಳಲ್ಲಿ ಎದ್ದಿರುವ ಬಂಡಾಯ ತಣಿಸಲು ಬಿಜೆಪಿ ತೀವ್ರ ನಿಗಾ ವಹಿಸಲಿದೆ. ಉಡುಪಿ- ಚಿಕ್ಕಮಗಳೂರು, ವಿಜಯಪುರ ಸೇರಿ ಅನೇಕ ಕ್ಷೇತ್ರಗಳಲ್ಲಿ ಬಹಿರಂಗವಾಗಿಯೇ ಬಂಡಾಯ ಹಾಗೂ ಹಾಲಿ ಸಂಸದರ ವಿರೋಧಿ ಮಾತುಗಳು ಕೇಳಿಬರುತ್ತಿವೆ. ಇನ್ನೂ ಅನೇಕ ಕ್ಷೇತ್ರಗಳಲ್ಲಿ ಗುಪ್ತಗಾಮಿಯಂತಿರುವ ಬಂಡಾಯದಿಂದ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆಯಾಗುವ ಮುನ್ಸೂಚನೆ ಲಭಿಸಿದೆ. ಪ್ರಮುಖ ಕ್ಷೇತ್ರಗಳ ಬಂಡಾಯವನ್ನು ಸ್ವತಃ ಬಿ.ಎಸ್. ಯಡಿಯೂರಪ್ಪ ಅವರೇ ನಿರ್ವಹಿಸಲಿದ್ದಾರೆ. ಇನ್ನುಳಿದ ಕ್ಷೇತ್ರಗಳಿಗೆ ಒಬ್ಬೊಬ್ಬ ರಾಜ್ಯ ನಾಯಕರನ್ನು ಸದ್ಯದಲ್ಲೆ ನಿಯೋಜಿಸಲಾಗುತ್ತದೆ. ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಬೇಡಿಕೆ ಪಕ್ಷಕ್ಕೆ ಮುಜುಗರವಾಗದಂತೆ ಇರಬೇಕು. ಟಿಕೆಟ್ ಘೋಷಣೆ ಆಗುವವರೆಗೂ ಈ ಅಸಮಾಧಾನ ಇದ್ದೇ ಇರುತ್ತದೆ. ನಂತರವೂ ಬಂಡಾಯ ಜೀವಂತವಾಗಿದ್ದರೆ ಮುಂದಿನ ಕಾರ್ಯತಂತ್ರ ರ್ಚಚಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪಕ್ಷ ಸಂಘಟನೆಗಾಗಿ ರಾಜ್ಯ ರಾಜಕಾರಣದಲ್ಲೇ ಉಳಿದು ರಾಜ್ಯಾದ್ಯಂತ ಸಂಚರಿಸುವೆ. ಈ ಕುರಿತು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಒಂದು ಕ್ಷೇತ್ರಕ್ಕೆ ಸೀಮಿತ ಆಗಬೇಕಾಗುತ್ತದೆ.

One Reply to “ಬಿಜೆಪಿಗೆ 6 ಕ್ಷೇತ್ರದಲ್ಲಿ ಅಪಸ್ವರ”

Comments are closed.