ಗೆಲ್ಲುವ ಅಸಲಿ ಆಟಕ್ಕೆ ಅಣಿಯಾದ ಬಿಜೆಪಿ!

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ಬೆಂಬಲಿಸುವುದಾಗಿ ತಿಳಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ತೀವ್ರ ಸ್ಪರ್ಧೆಯೊಡ್ಡುವ ಹಾಗೂ ರೋಚಕ ಹಣಾಹಣಿಗೆ ಕಾರಣವಾಗುವ ನಿರೀಕ್ಷೆಯನ್ನು ಬಿಜೆಪಿ ಖಚಿತಪಡಿಸಿದೆ.

ಕ್ಷೇತ್ರದಲ್ಲಿ 80 ಸಾವಿರದಿಂದ 1 ಲಕ್ಷದವರೆಗೆ ಮತದಾರರನ್ನು ಹೊಂದಿರುವ ಬಿಜೆಪಿ, ಈಚೆಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ವಿರೋಧಿ ಕಾಂಗ್ರೆಸ್ ಮತ ಪಡೆದು 2.44 ಲಕ್ಷಕ್ಕೆ ಏರಿಕೆಯಾಗಿತ್ತು. ಈ ಬಾರಿಯೂ ಅಭ್ಯರ್ಥಿ ಕಣಕ್ಕಿಳಿಸಿ ಪಕ್ಷದ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು ಎಂಬುದು ವರಿಷ್ಠರ ಇಚ್ಛೆಯಾಗಿತ್ತಾದರೂ, ಅಂಬರೀಷ್ ನಿಧನ ಕಾರಣಕ್ಕೆ ಎದ್ದಿರುವ ಅನುಕಂಪದ ಅಲೆಯಲ್ಲಿ ಸುಮಲತಾ ಬೆಂಬಲಿಸಿದರೆ ಕ್ಷೇತ್ರದ ಮಟ್ಟಿಗೆ ಬಿಜೆಪಿ ಕುರಿತೂ ಉತ್ತಮ ಅಭಿಪ್ರಾಯ ಮೂಡುತ್ತದೆ. ಸುಮಲತಾ ಗೆದ್ದ ನಂತರ ಪಕ್ಷ ಬೆಂಬಲಿಸುತ್ತಾರೆ ಎಂಬುದು ರಾಜ್ಯ ಹಾಗೂ ಸ್ಥಳೀಯ ಬಿಜೆಪಿ ನಾಯಕರ ವಾದವಾಗಿತ್ತು.

ಗುರುವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರ ಘೋಷಿಸದಿದ್ದ ಪಕ್ಷ, ಅಂತಿಮವಾಗಿ ರಾಜ್ಯ ಘಟಕದ ಒತ್ತಾಯಕ್ಕೇ ಮಣೆ ಹಾಕುವ ಮೂಲಕ ಒಮ್ಮೆ ಹೊರತುಪಡಿಸಿ ಕಳೆದ 8 ಚುನಾವಣೆಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸುತ್ತಿದ್ದ ಪದ್ಧತಿಯನ್ನು ಬದಲಾಯಿಸಿಕೊಂಡಿದೆ.

ಬಿಜೆಪಿ ಅಭ್ಯರ್ಥಿ ಕಣಕ್ಕಿಳಿದರೆ ಅಷ್ಟರಮಟ್ಟಿಗೆ ಮತ ವಿಭಜನೆಯಾಗಿ ಜೆಡಿಎಸ್ ಅಭ್ಯರ್ಥಿ ನಿಖಿಲ್​ಗೆ ಲಾಭವಾಗುತ್ತದೆ ಎಂಬ ಜೆಡಿಎಸ್ ನಿರೀಕ್ಷೆಗೆ ಬಿಜೆಪಿ ನಿರ್ಧಾರ ತಣ್ಣೀರೆರೆಚಿದೆ. ಇದೀಗ ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ ಸುಮಲತಾ ನಡೆಸುವ ಯುದ್ಧಕ್ಕೆ ಬಿಜೆಪಿ ಕಾಲಾಳುಗಳು ನೆರವಾಗಲಿದ್ದಾರೆ. ಬಿಜೆಪಿ ಲೆಕ್ಕದ ಪ್ರಕಾರ, ಕ್ಷೇತ್ರದ ಶೇ.80 ಬೂತ್​ಗಳಲ್ಲಿ ಬೂತ್ ಸಮಿತಿ ರಚನೆಯಾಗಿದ್ದು ಸಕ್ರಿಯವಾಗಿದೆ.

ಬಿಜೆಪಿ ಪ್ರಚಾರ?

ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ ಪಕ್ಷದ ಬೆಂಬಲಿತ ಅಭ್ಯರ್ಥಿ ಗೆಲ್ಲಿಸಿ ಕೊಳ್ಳಲು ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರು ಬಹಿರಂಗ ಪ್ರಚಾರ, ಸಮಾವೇಶಗಳಲ್ಲೂ ಭಾಗವಹಿಸಲು ದಾರಿ ಸುಗಮವಾಗಿದೆ. ನೇರವಾಗಿ ಬಿಜೆಪಿ ಜತೆ ಗುರುತಿಸಿಕೊಂಡರೆ ಸುಮಲತಾಗೆ ಲಾಭವಾಗುವುದಿಲ್ಲ ಎಂಬ ಕಾರಣಕ್ಕೆ ಪಕ್ಷೇತರರಾಗೇ ಇದ್ದರೂ ಬೆಂಬಲ ನೀಡಿದ್ದೇವೆ. ಬಹಿರಂಗ ಪ್ರಚಾರ ಹಾಗೂ ರ್ಯಾಲಿಗಳಿಂದ ಸುಮಲತಾ ಗೆಲುವಿಗೆ ಅನುಕೂಲ ಆಗುತ್ತದೆ ಎಂಬ ಮಾಹಿತಿ ಬಂದರೆ ಆ ಕಾರ್ಯಕ್ಕೂ ಮುಂದಾಗುತ್ತೇವೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

‘ಮುನಿ’ ವಿರೋಧಿಗೆ ಮಣೆ

ಕಾಂಗ್ರೆಸ್ ಹಿರಿಯ ನಾಯಕ ಎಚ್.ಮುನಿಯಪ್ಪ ಸತತವಾಗಿ ಸ್ಪರ್ಧಿಸುತ್ತಿರುವ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾಡುಗೋಡಿ ವಾರ್ಡ್ ಕಾರ್ಪೆರೇಟರ್ ಮುನಿಸ್ವಾಮಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಪ್ರಮುಖವಾಗಿ ಚರ್ಚೆಯಾಗುತ್ತಿದ್ದ ಡಿ.ಎಸ್.ವೀರಯ್ಯ, ಚಿ.ನಾ.ರಾಮು, ಛಲವಾದಿ ನಾರಾಯಣಸ್ವಾಮಿ ಹೆಸರನ್ನು ಬದಿಗೆ ಸರಿಸಿ ಮುನಿಸ್ವಾಮಿ ಘೋಷಿಸಿರುವುದರ ಹಿಂದೆ, ಕೋಲಾರದಲ್ಲಿ ಸಕ್ರಿಯವಾಗಿರುವ ಮುನಿಯಪ್ಪ ವಿರೋಧಿ ಗುಂಪಿನ ಒತ್ತಾಸೆ ಇದೆ ಎನ್ನಲಾಗಿದೆ. ಇನ್ನೇನು ಹೆಸರು ಘೋಷಣೆ ಆಗುತ್ತದೆ ಎನ್ನುವಷ್ಟರಲ್ಲಿ ಯಡಿಯೂರಪ್ಪರನ್ನು ಕೋಲಾರದ ಮೂವರು ಕೈ ಮುಖಂಡರು ಸಂರ್ಪಸಿ, ಛಲವಾದಿ ನಾರಾಯಣಸ್ವಾಮಿ ಉತ್ತಮ ಸ್ಪರ್ಧೆ ಒಡ್ಡುತ್ತಾರಾದರೂ ಗೆಲುವು ಸಾಧ್ಯವಿಲ್ಲ. ಮುನಿಸ್ವಾಮಿ 5-6 ತಿಂಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಮುನಿಯಪ್ಪಗೆ ಸ್ಪರ್ಧೆ ನೀಡುವಷ್ಟು ‘ಸಾಮರ್ಥ್ಯ’ ಅವರಿಗಿದೆ. ಕ್ಷೇತ್ರದಲ್ಲಿರುವ ಸುಮಾರು 4 ಲಕ್ಷ ಎಸ್​ಸಿ ಬಲಗೈ ಸಮುದಾಯದ ಜತೆಗೆ ಇತರ ಸಮುದಾಯಗಳೂ ಕೈಜೋಡಿಸುವಂತೆ ನಾವು ಮಾಡುತ್ತೇವೆ. ಹೇಗಾದರೂ ಈ ಬಾರಿ ಮುನಿಯಪ್ಪ ಸೋಲಿಸುವ ನಮ್ಮ ಗುರಿಗೆ ನಿಮ್ಮ ಬೆಂಬಲ ನೀಡಿ, ಇದರಿಂದ ನಿಮಗೇ ಲಾಭವಾಗಲಿದೆ ಎಂದು ಒತ್ತಾಯ ಮಾಡಿದ್ದಾರೆ. ವರಿಷ್ಠರಿಗೆ ಈ ವಿಚಾರವನ್ನು ಯಡಿಯೂರಪ್ಪ ಮನವರಿಕೆ ಮಾಡಿದ ನಂತರ ಅಂತಿಮವಾಗಿ ಮುನಿಸ್ವಾಮಿ ಹೆಸರು ಘೋಷಣೆ ಮಾಡಲಾಗಿದೆ. ಮುನಿಯಪ್ಪ ವಿರುದ್ಧ ಮುನಿಸ್ವಾಮಿ ‘ಡಮ್ಮಿ’ ಅಭ್ಯರ್ಥಿ ಅಲ್ಲ. ಚುನಾವಣೆ ಫಲಿತಾಂಶದಲ್ಲಿ ಇದು ವ್ಯಕ್ತವಾಗುತ್ತದೆ ಎಂದು ಕೋಲಾರ ಕ್ಷೇತ್ರದ ರಾಜಕಾರಣದಲ್ಲಿ ಸಕ್ರಿಯವಾಗಿರುವ ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.