ಮಹಾ ಮೈತ್ರಿಗೆ ಸಮ್ಮತಿ: ಬಿಜೆಪಿಗೆ 25, ಶಿವಸೇನೆಗೆ 23 ಸೀಟು

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮತ್ತು ಶಿವಸೇನೆ ಸಮ್ಮತಿ ಸೂಚಿಸಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ತಿಳಿಸಿದ್ದಾರೆ.

ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಡ್ನವೀಸ್,​ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ನಡುವೆ ನಡೆದ ಮಾತುಕತೆ ಫಲಪ್ರದವಾಗಿದೆ. ಬಿಜೆಪಿ 25 ಕ್ಷೇತ್ರಗಳನ್ನು ಮತ್ತು ಶಿವಸೇನೆ 23 ಕ್ಷೇತ್ರಗಳನ್ನು ಹಂಚಿಕೊಳ್ಳಲು ಹಾಗೂ ವಿಧಾನಸಭೆ ಚುನಾವಣೆಯಲ್ಲಿ 50:50 ಸೀಟುಗಳನ್ನು ಹಂಚಿಕೊಳ್ಳಲು ಸಮ್ಮತಿ ಸೂಚಿಸಿವೆ ಎಂದು ಫಡ್ನವೀಸ್​ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭೆ ಕ್ಷೇತ್ರಗಳಿದ್ದು, 2014ರಲ್ಲಿ ಬಿಜೆಪಿ 23 ಮತ್ತು ಶಿವಸೇನೆ 18 ಕ್ಷೇತ್ರಗಳು ಸೇರಿ ಉಭಯ ಪಕ್ಷಗಳು ಒಟ್ಟು 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.

ಮೂರು ವರ್ಷಗಳಿಂದಲೂ ಬಿಜೆಪಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಶಿವಸೇನೆಯ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಸುಗ್ರೀವಾಜ್ಞೆ ಜಾರಿಗೆ ಆಗ್ರಹಿಸಿ ಮಿತ್ರ ಪಕ್ಷ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಸದ್ಯ ಎರಡೂ ಪಕ್ಷದ ನಾಯಕರು ತಮ್ಮ ನಡುವಿನ ವ್ಯತ್ಯಾಸವನ್ನೆಲ್ಲ ಮರೆತು ಸೀಟು ಹಂಚಿಕೆಗಾಗಿ ಒಟ್ಟಾಗಿ ಕುಳಿತು ಚರ್ಚೆ ನಡೆಸಿದ್ದರು. (ಏಜೆನ್ಸೀಸ್​)