ಚುಕ್ಕಾಣಿ ಹಿಡಿಯಲು ಕೈ, ಕಮಲ ತಯಾರಿ

ಕಾರವಾರ: ನಗರ ಸ್ಥಳೀಯ ಸಂಸ್ಥೆಗಳನ್ನು ತಮ್ಮ ವಶ ಮಾಡಿಕೊಳ್ಳಲು ರಾಜಕೀಯ ಪಕ್ಷಗಳು ತಯಾರಿ ನಡೆಸಿವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಿತಿ ರಚಿಸಿದ್ದು, ಆ. 15 ರೊಳಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧ ಮಾಡಿ ‘ಬಿ’ ಫಾಮ್ರ್ ವಿತರಣೆ ಮಾಡುವ ಸಾಧ್ಯತೆ ಇದೆ. ಆದರೆ, ಜೆಡಿಎಸ್​ನಲ್ಲಿ ಅಂತಹ ಯಾವುದೇ ಸಂಘಟಿತ ಸಿದ್ಧತೆ ಕಂಡುಬರುತ್ತಿಲ್ಲ.

ಎಲ್ಲೆಡೆ ಸಭೆ: ಬಿಜೆಪಿ ಜಿಲ್ಲಾ ಉಸ್ತುವಾರಿ ತಿಂಗಳೆ ವಿಕ್ರಮಾರ್ಜುನ ಹೆಗಡೆ ಈ ವಾರ ಜಿಲ್ಲೆಯ ಎಲ್ಲೆಡೆ ಪ್ರವಾಸ ನಡೆಸಲಿದ್ದಾರೆ. ಬಿಜೆಪಿಯಿಂದ ಸ್ಪರ್ಧೆಗಿಳಿಯುವ ಇಚ್ಛೆ ಹೊಂದಿರುವವರ ಅರ್ಜಿ ಸ್ವೀಕರಿಸುವ ಸಲುವಾಗಿ ಆ.6 ರಂದು ಕುಮಟಾ, ಶಿರಸಿ, ಯಲ್ಲಾಪುರ, ಆ. 7 ರಂದು ಮುಂಡಗೋಡ, ಹಳಿಯಾಳ ಹಾಗೂ ದಾಂಡೇಲಿ. ಆ. 8 ರಂದು ಕಾರವಾರ ಹಾಗೂ ಅಂಕೋಲಾದಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ತಿಳಿಸಿದ್ದಾರೆ. ಆಯ್ಕೆಗಾಗಿ ಸಮಿತಿ ರಚನೆ ಮಾಡಲಾಗಿದೆ. ಆಯಾ ಕ್ಷೇತ್ರದ ಶಾಸಕರು ಅಥವಾ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವವರಿಗೆ ಚುನಾವಣೆಯ ನೇತೃತ್ವ ವಹಿಸಲಾಗಿದೆ ಎಂದು ವಿವರಿಸಿದ್ದಾರೆ. ಸರಳವಾಗಿರುವಲ್ಲಿ ಸಮಿತಿಯೇ ಅಭ್ಯರ್ಥಿಯನ್ನು ನಿರ್ಧರಿಸಲಿದೆ.

ಕಾಂಗ್ರೆಸ್​ನಲ್ಲಿ ಮೂವರ ಪಟ್ಟಿ: ಕಾಂಗ್ರೆಸ್ ಸಹ ಎಲ್ಲ 8 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಿತಿಗಳನ್ನು ರಚಿಸಿದೆ. ಆಯಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಮಿತಿಯ ಸಂಚಾಲಕರಾಗಿರಲಿದ್ದಾರೆ. ಇನ್ನೆರಡು ದಿನದಲ್ಲಿ ಸಭೆ ನಡೆಸಿ ಅರ್ಜಿ ಸ್ವೀಕರಿಸಿ ಪೈಪೋಟಿ ಇರುವಲ್ಲಿ ಮೂರು ಜನರ ಪಟ್ಟಿಯನ್ನು ಕೆಪಿಸಿಸಿಗೆ ಕಳಿಸಿಕೊಡಲು ಸೂಚಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ತಿಳಿಸಿದ್ದಾರೆ. ಆ. 13 ಅಥವಾ 14 ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದು ವಿವರಿಸಿದ್ದಾರೆ. ಈ ನಡುವೆ ಪಕ್ಷದ ಜಿಲ್ಲಾ ಉಸ್ತುವಾರಿ ಆರಾಧ್ಯ ಜಿಲ್ಲೆಯ ಎಲ್ಲೆಡೆ ಆ. 6 ರಿಂದ ಪ್ರವಾಸ ನಡೆಸಲಿದ್ದಾರೆ.

ಜೆಡಿಎಸ್​ನಲ್ಲಿಲ್ಲ ತಯಾರಿ: ರಾಜ್ಯದಲ್ಲಿ ಆಡಳಿತದಲ್ಲಿದ್ದರೂ ಜಿಲ್ಲೆಯಲ್ಲಿ ಮಾತ್ರ ಜೆಡಿಎಸ್ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ವಾರ್ಡ್​ಗಳಿಗೆ ಸ್ಪರ್ಧೆ ನಡೆಸುವುದು ಅನುಮಾನವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕಡೆ ಸೋಲು ಕಾಣುವ ಮೂಲಕ ತೆನೆ ಹೊತ್ತ ಮಹಿಳೆ ನಿತ್ರಾಣಳಾಗಿದ್ದಾಳೆ. ಇದರಿಂದ ಇದುವರೆಗೂ ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ಬಗೆಗೆ ಯಾವುದೇ ಸಿದ್ಧತಾ ಸಭೆಗಳು ನಡೆದಿಲ್ಲ. ಶಿರಸಿಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಶಶಿಭೂಷಣ ಹೆಗಡೆ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ. ಹಳಿಯಾಳದ ಅಭ್ಯರ್ಥಿ ರಮೇಶ ಕೂಡ ಚುನಾವಣೆಯ ಸೋಲಿನ ಬಳಿಕ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅಲ್ಲಿ ಚುನಾವಣೆಯ ನೇತೃತ್ವ ಯಾರದ್ದು ಎಂಬ ಬಗೆಗೆ ಇನ್ನೂ ಸ್ಪಷ್ಟತೆ ಇಲ್ಲ.

ಕಾರವಾರದಲ್ಲಿ ಆನಂದ ಅಸ್ನೋಟಿಕರ್, ಕುಮಟಾದಲ್ಲಿ ಪ್ರದೀಪ ನಾಯಕ ದೇವರಬಾವಿ ಅಭ್ಯರ್ಥಿ ಆಯ್ಕೆಯ ನೇತೃತ್ವ ವಹಿಸಬಹುದು. ಆದರೂ ಕಾರವಾರದಲ್ಲಿ ಆನಂದ ನಡೆಗೆ ಪಕ್ಷದ ಮೂಲ ಪದಾಧಿಕಾರಿಗಳ ವಿರೋಧವಿದೆ. ಇದರಿಂದ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ತಯಾರಿಗೆ ದಿನ ಕಡಿಮೆ: ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ತಯಾರಿಗೆ ಹೆಚ್ಚಿನ ದಿನವಿಲ್ಲ. ಆ.10 ರಂದು ನಾಮಪತ್ರ ಸಲ್ಲಿಕೆ ಪ್ರಾರಂಭವಾಗುತ್ತದೆ. 17 ರಂದು ನಾಮಪತ್ರ ಸಲ್ಲಿಕೆ ಮುಕ್ತಾಯವಾಗುತ್ತದೆ. ಆ.29 ರಂದು ಅಗತ್ಯವಿದ್ದಲ್ಲಿ ಚುನಾವಣೆ ನಡೆಯಲಿದೆ. ಇದರಿಂದ 20 ದಿನದ ಒಳಗೆ ಅಭ್ಯರ್ಥಿ ಆಯ್ಕೆ, ಟಿಕೆಟ್ ಹಂಚಿಕೆ, ಫಂಡ್ ಒಟ್ಟುಗೂಡಿಸುವುದು, ಪ್ರಚಾರ ಮುಂತಾದ ಎಲ್ಲ ಕಾರ್ಯಗಳನ್ನು ಸಂಯೋಜಿಸುವ ಅನಿವಾರ್ಯತೆ ಪಕ್ಷ ಹಾಗೂ ಆಕಾಂಕ್ಷಿಗಳಿಗಿದೆ.

ಹೊಂದಾಣಿಕೆ ಇಲ್ಲ: ರಾಜ್ಯ ಆಡಳಿತದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಎಲ್ಲ 200 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಚುನಾವಣೆ ಎದುರಿಸಲು ಪ್ರತಿ ಬೂತ್ ಮಟ್ಟದ ಸಮಿತಿಯನ್ನು ಜಾಗೃತಗೊಳಿಸಲಾಗಿದೆ. ಕೆಪಿಸಿಸಿಯಿಂದಲೇ ಟಿಕೆಟ್ ಹಂಚಿಕೆಯಾಗಲಿದೆ. ರಾಜ್ಯ ಸರ್ಕಾರದ ಸಾಧನೆ, ಸ್ಥಳೀಯ ಸಮಸ್ಯೆಗಳು ಚುನಾವಣೆಯ ಪ್ರಮುಖ ವಿಷಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.

ಆಕಾಂಕ್ಷಿಗಳ ಪೈಪೋಟಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪಕ್ಷದ ಚಿಹ್ನೆಯಲ್ಲೇ ನಡೆದರೂ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ವರ್ಚಸ್ಸು ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಹೆಚ್ಚಿನ ಆಕಾಂಕ್ಷಿಗಳು ಪಕ್ಷದ ಟಿಕೆಟ್ ಬಗೆಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಪಕ್ಷ ಟಿಕೆಟ್ ಕೊಟ್ಟರೆ ಓಕೆ, ಇಲ್ಲದಿದ್ದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ಹೇಳುವವರೇ ಹೆಚ್ಚಿದ್ದಾರೆ. ಟಿಕೆಟ್​ಅನ್ನು ತಕ್ಷಣ ಘೊಷಣೆ ಮಾಡಿದಲ್ಲಿ ಬಂಡಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ನಾಮಪತ್ರ ಸಲ್ಲಿಕೆಗೆ ಕೊನೆಯ ಎರಡು ದಿನ ಬಾಕಿ ಇರುವಾಗ ಎರಡೂ ಪ್ರಮುಖ ಪಕ್ಷಗಳು ಟಿಕೆಟ್ ಘೊಷಿಸುವ ಸಾಧ್ಯತೆ ಹೆಚ್ಚಿದೆ.

ಆಯಾ ಸ್ಥಳೀಯ ಸಮಸ್ಯೆಗಳನ್ನು ಕೇಂದ್ರೀಕರಿಸಿ ನಗರ ಸ್ಥಳೀಯ ಸಂಸ್ಥೆಯ ಚುನಾವಣೆ ಎದುರಿಸಲು ಸಿದ್ಧತೆ ನಡೆಸಲಾಗಿದೆ. ಹಾಲಿ ಕಾರವಾರ, ಶಿರಸಿ, ಕುಮಟಾದಲ್ಲಿ ನಮ್ಮದೇ ಶಾಸಕರು ಚುನಾವಣೆ ನೇತೃತ್ವ ವಹಿಸುವರು. ಹಳಿಯಾಳ ದಾಂಡೇಲಿಯಲ್ಲಿ ಸುನೀಲ ಹೆಗಡೆ, ಯಲ್ಲಾಪುರದಲ್ಲಿ ವಿ.ಎಸ್.ಪಾಟೀಲ್ ಅವರು ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು. – ಕೆ.ಜಿ.ನಾಯ್ಕ ಬಿಜೆಪಿ ಜಿಲ್ಲಾಧ್ಯಕ್ಷ