ಅನಂತಕುಮಾರ್ ನಿಧನ ಸಂತಾಪ

ಮಡಿಕೇರಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ನಿಧನ ಹೊಂದಿದ ಹಿನ್ನೆಲೆ ಮಡಿಕೇರಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ವತಿಯಿಂದ ಸಂತಾಪ ಸೂಚಿಸಲಾಯಿತು.
ಈ ಸಂದರ್ಭ ಮಾತನಾಡಿ ವಿಧಾನಪರಿಷತ್ ಸದಸ್ಯ ಸುನೀಲ್ ಸುಬ್ರಹ್ಮಣಿ, ಎಲ್ಲ ಧರ್ಮದವರೂ, ಪಕ್ಷದವರೂ ಮೆಚ್ಚುವಂತಹ ನಾಯಕ ಅನಂತಕುಮಾರ್. ನನಗೆ ಅವರೊಂದಿಗೆ ಸುಮಾರು 33 ವರ್ಷದ ಪರಿಚಯವಿದೆ. ಬಿಜೆಪಿಯಲ್ಲಿ ಯಾವುದೇ ತೊಂದರೆ ಅಥವಾ ಗೊಂದಲಗಳಾದರೆ ಶೀಘ್ರ ಸರಿಪಡಿಸುತ್ತಿದ್ದರು. ಪಕ್ಷಭೇದ ಮರೆತು ಎಲ್ಲರೂ ಅವರಿಗೆ ಗೌರವ ನೀಡುತ್ತಿದ್ದರು. ಯಾವುದೇ ಸಂದರ್ಭವನ್ನು ಧೈರ್ಯದಿಂದ ನಿಭಾಯಿಸುವ ಶಕ್ತಿ ಅವರಲ್ಲಿತ್ತು ಎಂದು ಸ್ಮರಿಸಿದರು.
ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರ ಪಾತ್ರ ಮಹತ್ತರವಾದುದು. ಜಿಲ್ಲೆಯ ಶಾಸಕರೊಂದಿಗೆ ಅನಂತಕುಮಾರ್ ಆತ್ಮೀಯವಾಗಿದ್ದರು. ಪಕ್ಷದ ಎಲ್ಲ ಕಾರ್ಯಕರ್ತರನ್ನೂ ಗೌರವಭಾವದಿಂದ ಕಾಣುತ್ತಿದ್ದರು. ಇಂತಹ ಸಜ್ಜನಿಕೆಯ ವ್ಯಕ್ತಿ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿ ಇಹಲೋಕ ತ್ಯಜಿಸಿರುವುದು ತುಂಬಾ ನೋವು ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಎಲ್ಲರ ನೆಚ್ಚಿನ ನಾಯಕರಾಗಿದ್ದ ಅನಂತಕುಮಾರ್ ಅವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ ಹಾಗೂ ಸಚಿವರಾಗಿ ಅತ್ಯಂತ ಪ್ರಾಮಾಣಿಕತೆಯಿಂದ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅವರ ಅಗಲಿಕೆ ಎಲ್ಲರಲ್ಲೂ ನೋವು ಉಂಟುಮಾಡಿದೆ ಎಂದರು.

Leave a Reply

Your email address will not be published. Required fields are marked *