More

    ಅರ್ಹರಿಗೆ ನಿರಾಷಾ: ಸಂಪುಟ ವಿಸ್ತರಣೆಗೆ ಒಲವು ತೋರದ ಕೇಂದ್ರ ಗೃಹ ಸಚಿವ

    ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜ್ಯ ಭೇಟಿ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಗುವ ನಿರೀಕ್ಷೆ ಹುಸಿಯಾಗಿದ್ದು, ವಿದೇಶ ಪ್ರವಾಸದ ಬಳಿಕ ನವದೆಹಲಿಗೆ ಬಂದು ರ್ಚಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಷಾ ಸೂಚನೆ ನೀಡಿದ್ದಾರೆ. ಇದರಿಂದಾಗಿ ತಕ್ಷಣ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಮೂಲ ಹಾಗೂ ವಲಸಿಗ ಬಿಜೆಪಿಗರಲ್ಲಿ ನಿರಾಸೆ ಮೂಡಿದೆ.

    ಅಮಿತ್ ಷಾ ಅವರೊಂದಿಗೆ ಯಡಿಯೂರಪ್ಪ ಚರ್ಚೆ ನಡೆಸಿ, ಭಾನುವಾರ ಬೆಳಗ್ಗೆಯೇ ಸಂಪುಟ ವಿಸ್ತರಣೆ ಆಗಿ ಬಿಡುತ್ತದೆ. ಆನಂತರ ಯಡಿಯೂರಪ್ಪ ವಿದೇಶಕ್ಕೆ ತೆರಳುತ್ತಾರೆ ಎಂಬ ವದಂತಿ ಶನಿವಾರ ಹರಡಿತ್ತು. ಆದರೆ ಅಂತಹ ಯಾವುದೇ ಮಹತ್ವದ ಮಾತುಕತೆ ನಡೆದಿಲ್ಲ ಎಂದು ಬಿಜೆಪಿ ಉನ್ನತ ಮೂಲಗಳು ಖಚಿತಪಡಿಸಿವೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯೆ ಅಮಿತ್ ಷಾ ಬಳಿ ಯಡಿಯೂರಪ್ಪ ಸಂಪುಟ ವಿಸ್ತರಣೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಷಾ ಈ ಬಗ್ಗೆ ಹೆಚ್ಚಿನ ಚರ್ಚೆಗೆ ಒಲವು ತೋರಿಸಿಲ್ಲ.

    ಶಾಸಕರ ಅಸಮಾಧಾನ: ಕಾಂಗ್ರೆಸ್ ಹಾಗೂ ಜೆಡಿಎಸ್​ನಿಂದ ಬಂದಿರುವ ಶಾಸಕರು ಉಪಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಸಂಪುಟ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದರು. ಪಕ್ಷ ತೊರೆಯುವ ಸಂದರ್ಭದಲ್ಲಿ ಫಲಿತಾಂಶ ಬಂದ 24 ಗಂಟೆಯೊಳಗೆ ಸಂಪುಟ ಸೇರಿಸುವ ಭರವಸೆ ರಾಜ್ಯ ಹಾಗೂ ಕೇಂದ್ರ ವರಿಷ್ಠರಿಂದ ಸಿಕ್ಕಿತ್ತು. ಆದರೆ ಬಿಜೆಪಿಯ ಹೈಕಮಾಂಡ್ ಪದೆ ಪದೇ ನಿರ್ಧಾರ ಮುಂದಕ್ಕೆ ಹಾಕುತ್ತಿರುವುದರಿಂದ ವಲಸೆ ಬಂದಿರುವ ಶಾಸಕರು ಹಾಗೂ ಚುನಾವಣೆಯಲ್ಲಿ ಸೋತವರು ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಬಹುತೇಕ ಶಾಸಕರು ಸಿಎಂ ಮನೆಗೆ ಬರುವುದನ್ನೇ ಕಡಿಮೆ ಮಾಡಿದ್ದಾರೆ.

    ಜೆ.ಪಿ.ನಡ್ಡಾ ಜತೆ ಚರ್ಚೆಯಾಗಲಿ…

    ಸಂಪುಟ ಕುರಿತು ಯಡಿಯೂರಪ್ಪ ಪ್ರಸ್ತಾಪ ಮಾಡಿದಾಗ, ‘ವಿದೇಶಕ್ಕೆ ಆರಾಮವಾಗಿ ಹೋಗಿ ಬನ್ನಿ. ಆನಂತರ ವಿಸ್ತರಣೆಯ ಬಗ್ಗೆ ಚರ್ಚೆ ಮಾಡೋಣ’ ಎಂದು ಷಾ ತಿಳಿಸಿದರೆನ್ನಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಸದ್ಯದಲ್ಲಿಯೇ ಅಧಿಕಾರ ಸ್ವೀಕರಿಸುತ್ತಾರೆ. ನೀವು ವಿದೇಶದಿಂದ ಬಂದ ನಂತರ ದೆಹಲಿಗೆ ಬನ್ನಿ. ನಡ್ಡಾ ಅವರೊಂದಿಗೂ ಚರ್ಚೆ ನಡೆಸಿ ನಿರ್ಧಾರ ಮಾಡೋಣ ಎಂದು ಷಾ ಕಟ್ಟುನಿಟ್ಟಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಡಿಯೂರಪ್ಪ ಅವರು ಪದೇಪದೆ ಪ್ರಸ್ತಾಪ ಮಾಡಲು ಮುಂದಾದಾಗ ಅದಕ್ಕೆ ಅವಕಾಶ ನೀಡದ ಷಾ, ಅವಸರಕ್ಕೆ ಬಿದ್ದು ಏನೂ ಮಾಡಲು ಹೋಗಬೇಡಿ. ನಿಧಾನವಾಗಿ ಚರ್ಚೆ ನಡೆಸೋಣ. ನೀವು ವಿದೇಶದಿಂದ ಬರುವ ವೇಳೆಗೆ ನಡ್ಡಾ ದೆಹಲಿ ಚುನಾವಣೆಯಲ್ಲಿ ಬಿಜಿಯಾಗಿರುತ್ತಾರೆ. ಅದೆಲ್ಲವನ್ನೂ ನೋಡಿಕೊಂಡು ನಿರ್ಧಾರ ಮಾಡೋಣ ಎಂದು ಹೇಳಿರುವ ಕಾರಣ ಸಂಪುಟ ವಿಸ್ತರಣೆ ಕುರಿತು ಅನಿಶ್ಚಿತತೆ ಮುಂದುವರಿದಿದೆ. ವಿದೇಶದಿಂದ ವಾಪಸಾದ ಕೂಡಲೇ ಸಂಪುಟ ವಿಸ್ತರಣೆ ಮಾಡಬೇಕೆಂಬ ಉದ್ದೇಶವನ್ನು ಬಿಎಸ್​ವೈ ಹೊಂದಿದ್ದರು. ಆದರೆ ವರಿಷ್ಠರು ಈಗ ದೆಹಲಿ ಚುನಾವಣೆಯ ವಿಷಯವನ್ನು ಎಳೆದು ತಂದಿರುವುದರಿಂದ ಸಂಪುಟ ವಿಸ್ತರಣೆ ಫೆಬ್ರವರಿ ಮಧ್ಯದ ತನಕ ಮುಂದಕ್ಕೆ ಹೋಗಬಹುದು ಎನ್ನಲಾಗುತ್ತಿದೆ.

    ಬೇಸರದಲ್ಲಿ ಮುಖ್ಯಮಂತ್ರಿ

    ವಲಸೆ ಶಾಸಕರಿಗೆ ನೀಡಿ ರುವ ಮಾತು ತಪು್ಪತ್ತಿದ್ದೇನೆ ಎಂಬ ಬೇಸರದಲ್ಲಿ ಸಿಎಂ ಇದ್ದಾರೆ. ಪದೆ ಪದೇ ಶಾಸಕರು ಒತ್ತಡ ತಂದಾಗಲೂ ಅವರಿಗೆ ಸಮಾಧಾನ ಮಾಡುವಲ್ಲಿ ಸಿಎಂ ಹೈರಾಣಾಗುತ್ತಿದ್ದಾರೆ.

    ವಿಸ್ತರಣೆ ವಿಳಂಬಕ್ಕೆ ಕಾರಣ

    • ಮೂಲ ಬಿಜೆಪಿಗರಿಂದ ದಿನದಿಂದ ದಿನಕ್ಕೆ ಸಚಿವ ಸ್ಥಾನಕ್ಕೆ ಒತ್ತಡ ಹೆಚ್ಚಿರುವುದು
    • ವಲಸಿಗರಲ್ಲಿ ಎಲ್ಲರಿಗೂ ಮಂತ್ರಿ ಮಾಡಲು ಸಿದ್ದವಿಲ್ಲ
    • ಕೆಲ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಪುನಾರಚನೆಯ ಸಾಧ್ಯತೆ
    • ಸಿಎಎ, ದೆಹಲಿ ಚುನಾವಣೆಯಲ್ಲಿ ವರಿಷ್ಠರು ನಿರತ
    • ಮೂಲ-ವಲಸಿಗರಲ್ಲಿ ಅಸಮಾಧಾನಕ್ಕೆ ಆಸ್ಪದ ಆಗದಂತೆ ನೋಡಿಕೊಳ್ಳಬೇಕಾಗಿರುವುದು

    ಸಮಸ್ಯೆಗಳೇನು

    • ವಲಸಿಗರಲ್ಲಿ ಹೆಚ್ಚುತ್ತಿರುವ ಅಸಹನೆ
    • ಸ್ಥಾನ ಉಳಿಸಿಕೊಳ್ಳಲು ಸಚಿವರ ಪ್ರಯತ್ನ
    • ಹೆಚ್ಚುವರಿ ಖಾತೆಗಳನ್ನು ಗಮನಿಸಿದ ಸಚಿವರು
    • ಬಿಜೆಪಿಯಲ್ಲಿ ಹೆಚ್ಚುತ್ತಿರುವ ಆಕಾಂಕ್ಷಿಗಳ ದಂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts