ಮೈತ್ರಿಗೆ ಮುಕ್ತ ಎಂದ ಮೋದಿ

ನವದೆಹಲಿ: ಸ್ವಂತ ಬಲದ ಮೇಲೆ ಬಿಜೆಪಿ ಬಹುಮತ ಗಳಿಸಿದರೂ, ಮಿತ್ರಪಕ್ಷಗಳಿಗೆ ಕೊಡಬೇಕಾದ ಸ್ಥಾನಮಾನ ಕೊಡಲು ಬದ್ಧ. ಹಾಗಾಗಿ ಎನ್​ಡಿಎ ಮೈತ್ರಿಕೂಟಕ್ಕೆ ಸೇರಲು ಬಯಸುವ ಎಲ್ಲ ಪಕ್ಷಗಳನ್ನು ಸ್ವಾಗತಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಕಾರ್ಯಕರ್ತರೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಎಐಎಡಿಎಂಕೆ, ಡಿಎಂಕೆ ಅಥವಾ ರಜನಿಕಾಂತ್ ಅವರ ಪಕ್ಷದ ಜತೆ ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೈತ್ರಿಕೂಟದ ಧರ್ಮಪಾಲನೆ ಎಂದರೇನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂದಿಗೂ ಬಿಜೆಪಿ ಅದೇ ಮಾರ್ಗದಲ್ಲಿ ಸಾಗುತ್ತಿದೆ. ಎನ್​ಡಿಎ ಮೈತ್ರಿಕೂಟಕ್ಕೆ ಪರಸ್ಪರ ವಿಶ್ವಾಸ ಮತ್ತು ನಂಬಿಕೆಯೇ ಆಧಾರವಾಗಿದೆ. ಬಿಜೆಪಿಯ ಬಗ್ಗೆ ವಿಶ್ವಾಸ ಮತ್ತು ನಂಬಿಕೆಯುಳ್ಳವರು ಯಾರೇ ಬಂದರೂ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಸ್ಪಷ್ಟಪಡಿಸಿದರು.