ಕೋಲಾರ: ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ ತಿಳಿಸಿದ್ದು, ಇದನ್ನೂ ಸಹ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಆ ಪಕ್ಷಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂಬುದನ್ನು ಬಿಜೆಪಿ ಮುಖಂಡರು ತೋರಿಸುತ್ತಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ತಾಲೂಕಿನ ರಾಮಸಂದ್ರ ಗಡಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಹಕರಿಗಿಂತಲೂ ಕಷ್ಟದ ಜೀವಿಗಳತ್ತ ಗಮನಹರಿಸಬೇಕು. ರೈತರು, ಹಾಲು ಉತ್ಪಾದಕರ ಕಷ್ಟಗಳು ಹೆಚ್ಚಾಗಿವೆ. ಹಾಲಿನ ಬೆಲೆ ಮನಬಂದAತೆ ಒಕ್ಕೂಟಗಳಿಂದ ಏರಿಕೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದ್ದೇ ಆದಲ್ಲಿ ಒಕ್ಕೂಟಗಳು ಬೀಗ ಹಾಕಿಕೊಂಡು ಹೋಗಬೇಕಾಗುತ್ತದೆ ಎಂದರು.
ಬೇರೆ ರಾಜ್ಯಗಳಲ್ಲಿ ಹಾಲಿನ ಬೆಲೆಯು ನಮಗಿಂತಲೂ 8 ರಿಂದ 10 ರೂ. ಹೆಚ್ಚು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದು, ಅಂತೆಯೇ ನಮ್ಮ ರಾಜ್ಯದಲ್ಲಿಯೂ ಕಷ್ಟಜೀವಿಗಳಾದ ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಲೆ ನೀಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬೇರೆ ರಾಜ್ಯಗಳಿಂದ ಹಾಲು ಬರುತ್ತಿದ್ದು, ನಂದಿನಿ ಹಾಲಿನ ಉತ್ಪಾದನೆ ಹೆಚ್ಚಿಸಬೇಕು. ಜತೆಗೆ ಉತ್ಪಾದಕರಿಗೂ ಅನುಕೂಲವಾಗಬೇಕೆನ್ನುವ ನಿಟ್ಟಿನಲ್ಲಿ ಸಿಎಂ ತಿಳಿಸಿದ್ದು, ನಂದಿನಿಯನ್ನು ಅಮುಲ್‌ಗಿಂತಲೂ ಹೆಚ್ಚಾಗಿ ಉತ್ಪಾದಿಸಿ ದೇಶಾದ್ಯಂತ ವಿಸ್ತರಣೆಗೆ ಕ್ರಮಕೈಗೊಳ್ಳಲಾಗುವು ಎಂದು ನಂಜೇಗೌಡ ಹೇಳಿದರು.
ಹಾಲು ಪ್ರ‍್ರೋತ್ಸಾಹಧನ 6 ತಿಂಗಳಿಂದ ಬಾಕಿ ಉಳಿದಿಲ್ಲ. ಬಿಜೆಪಿ ಸರ್ಕಾರವು ಬಾಕಿ ಉಳಿಸಿಕೊಂಡು ಬಂದಿತ್ತು. ನಮ್ಮ ಸರ್ಕಾರ ಹಂತಹಂತವಾಗಿ ರೈತರ ಖಾತೆಗೆ ಜಮಾ ಮಾಡಿದೆ. ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ನೀಡಬೇಕೆಂದು ಸಿಎಂ ಹೇಳಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರು ಎಂದಿಗೂ ರೈತರು, ಹಾಲು ಉತ್ಪಾದಕರ ಪರ ಇರುವುದಿಲ್ಲ. ಎಲ್ಲವನ್ನೂ ವಿರೋಧಿಸುವುದೇ ಅವರ ಕೆಲಸವಾಗಿದೆ. ಹಾಲು ಉತ್ಪಾದಕರು ಬಿಜೆಪಿಯವರ ವಿರುದ್ಧ ಹೋರಾಟಕ್ಕೆ ಮುಂದಾಗುವ ಬಗ್ಗೆ ನನ್ನ ಬಳಿ ಚರ್ಚಿಸಿದ್ದಾರೆ ಎಂದರು.