ತಮಿಳುನಾಡಿನಲ್ಲೂ ಮೈತ್ರಿ: ಐದು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟ ಎಐಎಡಿಎಂಕೆ

ಚೆನ್ನೈ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಒಂದೊಂದೇ ರಾಜ್ಯದಲ್ಲಿ ಮೈತ್ರಿ ಪೂರ್ಣಗೊಳಿಸುತ್ತಿರುವ ಬಿಜೆಪಿ ಇಂದು ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆಗೂ ಮೈತ್ರಿ ಕುದುರಿಸಿದೆ.

ಎಐಡಿಎಂಕೆ (ಅಖಿಲ ಭಾರತ ಅಣ್ಣಾ ಡ್ರಾವಿಡ ಮುನ್ನೇಟ್ರ ಖಳಗಂ) ಮತ್ತು ಪಿಎಂಕೆ (ಪಾಟ್ರಾಳಿ ಮಕ್ಕಳ್​ ಕಚ್ಚಿ) ಮೈತ್ರಿಯೊಂದಿಗೆ ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ ಎದುರಿಸಲಿರುವ ಬಿಜೆಪಿ, ಐದು ಕ್ಷೇತ್ರಗಳನ್ನು ಮೈತ್ರಿಕೂಟದಿಂದ ಪಡೆದುಕೊಂಡಿದೆ.

ಇದಕ್ಕೂ ಮೊದಲು ಎಐಡಿಎಂಕೆ ಮತ್ತು ಪಿಎಂಕೆ ಮೈತ್ರಿ ಘೋಷಣೆಯಾಗಿದ್ದು, ಪಿಎಂಕೆ ಒಟ್ಟು 7 ಸ್ಥಾನಗಳನ್ನು ಕೂಟದಿಂದ ಪಡೆದುಕೊಂಡಿದೆ.

ಇನ್ನು ಮೈತ್ರಿ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪಿಯೂಶ್​ ಗೋಯಲ್​, ” ಎಐಎಡಿಎಂಕೆ ಜತೆಗಿನ ಮೈತ್ರಿ ನಮಗೆ ಹರ್ಷ ತಂದಿದೆ. ಅತ್ಯಂತ ವಿಶ್ವಾಸದಿಂದ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ತಮಿಳುನಾಡಿನಲ್ಲಿ ಎದುರಾಗಿರುವ 21 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮತ್ತು ಲೋಕಸಭೆ ಚುನಾವಣೆಯನ್ನು ನಾವು ಒಟ್ಟಿಗೆ ಎದುರಿಸುತ್ತೇವೆ. ಉಪಚುನಾವಣೆಯಲ್ಲಿ ಬಿಜೆಪಿಯು ಇತರ ಸಣ್ಣ ಪಕ್ಷಗಳ ಜತೆಗೇ ಎಐಎಡಿಎಂಕೆಯನ್ನು ಬೆಂಬಲಿಸಲಿದೆ. ರಾಜ್ಯದಲ್ಲಿ ಎಐಎಡಿಎಂಕೆ ನೇತೃತ್ವದಲ್ಲಿ ಮತ್ತು ಲೋಕಸಭೆ ಚುನಾವಣೆಗೆ ಮೋದಿ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ,” ಎಂದು ಘೋಷಿಸಿದರು.

2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಎನ್​ಡಿಎ ಮೈತ್ರಿಕೂಟ ಸೇರುವ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಅವರು, ಸ್ವತಂತ್ರವಾಗಿ ಸ್ಪರ್ಧಿಸಿ 37 ಸ್ಥಾನಗಳನ್ನು ಗೆದ್ದುಕೊಂಡಿದ್ದರು. ಬಿಜೆಪಿ, ಎಂಡಿಎಂಕೆ (ಮರುಮಲರ್ಚಿ ದ್ರಾವಿಡ ಮುನ್ನೇಟ್ರ ಕಳಗಂ), ಕ್ಯಾಪ್ಟನ್​ ವಿಜಯಕಾಂತ್​ ನೇತೃತ್ವದ ಡಿಎಂಡಿಕೆ (ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ), ಪಿಎಂಕೆಯನ್ನು ಒಳಗೊಂಡ ಎನ್​ಡಿಎ ಮೈತ್ರಿಕೂಟ ಒಟ್ಟು ಎರಡು ಸ್ಥಾನಗಳನ್ನು ಗೆದ್ದಿತ್ತು. ಇದರಲ್ಲಿ ಬಿಜೆಪಿ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಬಿಜೆಪಿಯಿಂದ ಗೆದ್ದಿದ್ದ ಪೊನ್​ ರಾಧಾಕೃಷ್ಣ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು.