ಲೋಕಸಭೆಯಲ್ಲಿ ರಫೇಲ್ ಹಾರಾಟ

ನವದೆಹಲಿ: ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಹುಟ್ಟುಹಾಕಿರುವ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕೊನೆಗೂ ಸಂಸತ್ ಅಂಗಳ ತಲುಪಿದೆ. ಒಪ್ಪಂದದ ಪಾರದರ್ಶಕತೆಗೆ ಸುಪ್ರೀಂ ಕೋರ್ಟ್ ಕ್ಲೀನ್​ಚಿಟ್ ನೀಡಿರುವ ಹೊರತಾಗಿಯೂ, ಅಕ್ರಮದ ಆರೋಪ ಪುನರುಚ್ಛರಿಸುತ್ತ ಮೊಂಡಾಟಕ್ಕಿಳಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜಂಟಿ ಸದನ ಸಮಿತಿ ರಚನೆ ಆಗಬೇಕೆಂದು ಬುಧವಾರ ಲೋಕಸಭೆಯಲ್ಲಿ ಆಗ್ರಹಿಸಿದರು. ರಾಹುಲ್ ಆರೋಪ, ಟೀಕೆಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ ತಿರುಗೇಟು ನೀಡಿದರು. ಸುಪ್ರೀಂಕೋರ್ಟ್​ನ ಆದೇಶವಿರುವಾಗ ಜಂಟಿ ಸದನ ಸಮಿತಿ(ಜೆಪಿಸಿ) ರಚಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

ದುಡ್ಡಿಗಾಗಿ ಭದ್ರತೆ ಕಡೆಗಣನೆ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಕುರಿತು ಲೋಕಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಡುವೆ ಬುಧವಾರ ಮಾತಿನ ಸಮರ ತೀವ್ರವಾಗಿತ್ತು. ರಫೇಲ್ ಖರೀದಿ ಅಕ್ರಮವಾಗಿದ್ದು, ಪ್ರಧಾನಿ ನರೇಂದ್ರ ಭಾಗಿಯಾಗಿದ್ದಾರೆ. ಚೌಕಿದಾರ್ ಚೋರ್ ಹೈ ಎಂದು ರಾಹುಲ್ ಆರೋಪಿಸಿದರು. ಇದಕ್ಕೆ ಖಡಕ್ ಪ್ರತ್ಯುತ್ತರ ನೀಡಿದ ಜೇಟ್ಲಿ, ಸುಳ್ಳಿನ ಕಂತೆಗಳ ಮೂಲಕ ದೇಶದ ಜನರನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ರಾಹುಲ್ ಮುಂದಾಗಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು ಕೂಡ ಒಪು್ಪವ ಸ್ಥಿತಿಯಲ್ಲಿಲ್ಲ ಎಂದರು.

ರಾಹುಲ್ ಗಾಂಧಿ ಸಣ್ಣವರಾಗಿದ್ದಾಗ ಬೊಪೋರ್ಸ್ ಹಗರಣದ ಆರೋಪಿ ಕ್ವಟ್ರೋಚಿ ಮಡಿಲಲ್ಲಿ ಆಟವಾಡುತ್ತಿದ್ದುದು ಎಲ್ಲರಿಗೂ ತಿಳಿದ ವಿಚಾರ. ಕ್ವಟ್ರೋಚಿ ರಕ್ಷಣೆಗೆ ಒಂದು ಕುಟುಂಬ ಏನೆಲ್ಲ ಶ್ರಮವಹಿಸಿತ್ತು ಎನ್ನುವುದು ದೇಶದ ಜನತೆಗೆ ಗೊತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಮ್ಮ-ಮಗ ಜಾಮೀನು ಪಡೆದು ತಿರುಗಾಡುತ್ತಿರುವುದು ಹೊಸ ವಿಚಾರವೇನಲ್ಲ. ಹಾಗೆಯೇ ಅಗಸ್ತಾವೆಸ್ಟ್ ಲ್ಯಾಂಡ್ ದಲ್ಲಾಳಿಯು 2008-09ರಲ್ಲಿ ಮಿಸಸ್ ಗಾಂಧಿ- ಆರ್, ಸನ್ ಆಫ್ ಇಟಾಲಿಯನ್ ಲೇಡಿ ಕುರಿತು ಇ-ಮೇಲ್ ಮಾಡಿರುವ ವಿಚಾರ ಬಹಿರಂಗವಾಗಿದೆ. ಈ ಕುಟುಂಬಕ್ಕೆ ದೇಶದ ಭದ್ರತೆಯು ಅರ್ಥವಾಗುವುದಿಲ್ಲ, ಕೇವಲ ಹಣದ ಲೆಕ್ಕಾಚಾರ ಮಾತ್ರ ಬರುತ್ತದೆ ಎಂದು ಜೇಟ್ಲಿ ಕುಟುಕಿದರು.

ಆಡಿಯೋ ಬಾಂಬ್ ಎಸೆದ ಕೈ: ರಫೆಲ್ ಯದ್ಧ ವಿಮಾನ ಖರೀದಿ ಕರಾರಿಗೆ ಸಂಬಂಧಿಸಿದಂತೆ ಇದೀಗ ಬಿಜೆಪಿಯ ಮೇಲೆ ಕಾಂಗ್ರೆಸ್ ಆಡಿಯೋ ಕ್ಲಿಪ್ ಬಾಂಬ್ ಎಸೆದಿದೆ. ಗೋವಾದ ಆರೋಗ್ಯಸಚಿವ ವಿಶ್ವಜಿತ್ ರಾಣೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್​ನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ. ರಫೇಲ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ನನ್ನ ಬೆಡ್ ರೂಮ್ಲ್ಲಿದೆ. ಇದರಿಂದಾಗಿ ನನಗೆ ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಗೋವಾ ಸಿಎಂ ಪರಿಕ್ಕರ್ ಹೇಳಿದ್ದಾರೆ ಎಂದು ರಾಣೆ ವ್ಯಕ್ತಿಯೊಬ್ಬರ ಬಳಿ ನಡೆಸಿದ ಸಂಭಾಷಣೆ ಇದಾಗಿದೆ.

ದ್ವಂದ್ವದಲ್ಲಿ ಮುಳುಗಿರುವ ‘ಕೈ’

 • ಆಫ್​ಸೆಟ್ ಒಪ್ಪಂದದ ಒಟ್ಟು ಮೊತ್ತ 29 ಸಾವಿರ ಕೋಟಿ ರೂ. ಹಾಗೂ 72ಕ್ಕೂ ಅಧಿಕ ಆಫ್​ಸೆಟ್ ಖರೀದಿದಾರರಿದ್ದಾರೆ. ಆದರೆ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂ. ಲಾಭ ಎಂಬ ಆರೋಪ.
 • ಪರಿಕ್ಕರ್​ಗೆ ಖರೀದಿ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು ಈ ಹಿಂದೆ ಹೇಳಿದ್ದ ಕಾಂಗ್ರೆಸ್​ನಿಂದ ಈಗ ಆಡಿಯೋ ಕ್ಲಿಪ್ ಬಿಡುಗಡೆಯಲ್ಲಿ ಪರಿಕ್ಕರ್ ಮೇಲೆ ಪ್ರಮುಖ ಆರೋಪ.
 • ಬೆಲೆ ವಿವರ ಬಹಿರಂಗ ಕುರಿತು ರಾಹುಲ್ ಗಾಂಧಿ ಹೇಳಿದಂತೆ ಮಾಹಿತಿ ಬಹಿರಂಗಪಡಿಸುವ ವಿಚಾರ ಪ್ರಸ್ತಾಪವಾಗಿರಲಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷರಿಂದ ಈಗಾಗಲೇ ಸ್ಪಷ್ಟೀಕರಣ ಸಿಕ್ಕಿದೆ.
 • ಗೋವಾ ಸಿಎಂ ಕುರಿತು ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ಖಾತ್ರಿ ಕುರಿತು ಹೊಣೆಗಾರಿಕೆಗೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಿಂಜರಿಕೆ

ಎಐಎಡಿಎಂಕೆ 24 ಸಂಸದರ ಅಮಾನತು

ಮೇಕೆದಾಟು ಯೋಜನೆ ವಿರೋಧಿಸಿ ಲೋಕಸಭೆಯಲ್ಲಿ ಪ್ರತಿಭಟಿಸುತ್ತಿರುವ ಎಐಎಡಿಎಂಕೆಯ 24 ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅಮಾನತುಗೊಳಿಸಿದ್ದಾರೆ. ಮುಂದಿನ 5 ದಿನಗಳ ಕಲಾಪದಲ್ಲಿ ಸಂಸದರು ಭಾಗಿಯಾಗುವಂತಿಲ್ಲ. ಸ್ಪೀಕರ್ ಮನವಿ ಹೊರತಾಗಿಯೂ ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ನಿಯಮ 374ರ ಪ್ರಕಾರ ಕ್ರಮ ಜರುಗಿಸಲಾಗಿದೆ.

ಆಫ್​ಸೆಟ್​ಗೆ ಕೇಂದ್ರದ ವಿವರಣೆ

ಕಾಂಗ್ರೆಸ್ ಅಧ್ಯಕ್ಷರಿಗೆ ಆಫ್​ಸೆಟ್ ಎಂದರೇನು ಎನ್ನುವ ಮಾಹಿತಿಯಿಲ್ಲ. ಒಟ್ಟು 1.3 ಲಕ್ಷ ಕೋಟಿ ರೂ. ಅಕ್ರಮ ಎಲ್ಲಿಂದ ಬಂತು ಎಂಬ ಮಾಹಿತಿ ಸಿಗುತ್ತಿಲ್ಲ. ಒಟ್ಟಾರೆ ಒಪ್ಪಂದವು 58 ಸಾವಿರ ಕೋಟಿ ರೂ.ಗಳದ್ದಾಗಿದ್ದು, ಅದರಲ್ಲಿ ಆಫ್​ಸೆಟ್ ಒಪ್ಪಂದವು 29 ಸಾವಿರ ಕೋಟಿ ರೂ.ಗಳದ್ದಾಗಿದೆ. ಇದರಲ್ಲಿ ರಿಲಯನ್ಸ್ ಪಾಲು ಕೇವಲ ಶೇ.3-4 ಮಾತ್ರ. ಅಷ್ಟಕ್ಕೂ ಆಫ್​ಸೆಟ್ ಖರೀದಿ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳು ರಫೇಲ್ ಯುದ್ಧ ವಿಮಾನಕ್ಕೆ ಯಾವುದೇ ಉಪಕರಣ ನೀಡುತ್ತಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.

ರಾಹುಲ್ ಬಾಣ

 • ರಫೇಲ್ ಚರ್ಚೆಯಿಂದ ಪ್ರಧಾನಿ ದೂರ ಸರಿಯುತ್ತಿರುವುದೇಕೆ, ನನ್ನ ಜತೆ 20 ನಿಮಿಷ ಮುಖಾಮುಖಿ ಚರ್ಚೆ ನಡೆಸಲಿ.
 • ರಕ್ಷಣಾ ಸಚಿವಾಲಯ ರಫೇಲ್ ಖರೀದಿ ಪ್ರಕ್ರಿಯೆಗೆ ಆಕ್ಷೇಪಣೆ ಎತ್ತಿದ್ದೇಕೆ?
 • ಯುದ್ಧ ವಿಮಾನದ ಬೆಲೆ -ಠಿ;520 ಕೋಟಿ ನಿಂದ -ಠಿ;1600 ಕೋಟಿಗೆ ಏರಿಸಿದ್ದೇಕೆ?
 • ಎಚ್​ಎಎಲ್​ನ ಅನುಭವವನ್ನು ಕಡೆಗಣಿಸಿ ಸಾಲದ ಹೊರೆ ಹೊತ್ತಿರುವ ಅನಿಲ್ ಅಂಬಾನಿ ಕಂಪನಿ ಜತೆ -ಠಿ;30 ಸಾವಿರ ಕೋಟಿ ಆಫ್​ಸೆಟ್ ಒಪ್ಪಂದ ಮಾಡಿಕೊಂಡಿದ್ದೇಕೆ?
 • ಮನೋಹರ್ ಪರಿಕ್ಕರ್ ಮಲಗುವ ಕೋಣೆಯಲ್ಲಿ ಯಾವ ರಹಸ್ಯವಿದೆ?

ಜೇಟ್ಲಿ ತಿರುಗುಬಾಣ

 • ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಜತೆಗಿನ ಸಂಭಾಷಣೆಯನ್ನು ಈ ಹಿಂದೆ ಪ್ರಸ್ತಾಪಿಸಿ ರಾಹುಲ್ ಮುಜುಗರ ಅನುಭವಿಸಿದ್ದರು. ಈಗ ನಕಲಿ ಆಡಿಯೋ ಕ್ಲಿಪ್​ನ ನಾಟಕವಾಡುತ್ತಿದ್ದಾರೆ.
 • ಅಡಿಯೋ ಕ್ಲಿಪ್ ಅಸಲಿಯಾಗಿದ್ದರೆ ಲೋಕಸಭೆಯಲ್ಲಿ ದಾಖಲೆಗಳ ಮೂಲಕ ಪ್ರಸ್ತುತಪಡಿಸಿ, ಇಲ್ಲವಾದಲ್ಲಿ ಹಕ್ಕುಚ್ಯುತಿ ಎದುರಿಸಲು ಸಿದ್ಧರಾಗಿ.
 • ಖರೀದಿ ಪ್ರಕ್ರಿಯೆಯನ್ನು ಕಾನೂನು ಬದ್ಧವಾಗಿಯೇ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
 • ಯುಪಿಎ ಅವಧಿಯ ಟೆಂಡರ್​ಗಿಂತ ಮೋದಿ ಸರ್ಕಾರದ ಒಪ್ಪಂದದಲ್ಲಿನ ಯುದ್ಧ ವಿಮಾನದ ಮೂಲ ಬೆಲೆಯು ಶೇ.9 ಕಡಿಮೆಯಿದೆ. ಶಸ್ತ್ರಾಸ್ತ್ರ ಹೊಂದಿರುವ ವಿಮಾನದ ಬೆಲೆಯು ಶೇ.20 ಕಡಿಮೆಯಾಗಿದೆ.

ರಫೇಲ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ದಂತೆ ಸುಪ್ರೀಂ ನೀಡಿರುವ ತೀರ್ಪಿನಿಂದಾಗಿ ಕಾಂಗ್ರೆಸ್​ನ ಬಣ್ಣ ಬಯಲಾಗಿದೆ. ರಫೇಲ್ ವಿಷಯಕ್ಕೆ ಸಂಬಂಧಿಸಿದಂತೆ ನಾನು ಯಾವತ್ತೂ ಕ್ಯಾಬಿನೆಟ್ ಅಥವಾ ಇತರ ಯಾವುದೇ ಬೈಠಕ್​ನಲ್ಲಿ ವಿಷಯ ಪ್ರಸ್ತಾಪಿಸಿಯೇ ಇಲ್ಲ.

| ಮನೋಹರ್ ಪರಿಕ್ಕರ್, ಗೋವಾ ಮುಖ್ಯಮಂತ್ರಿ

ಕಾಂಗ್ರೆಸ್ ಬಿಡುಗಡೆ ಮಾಡಿದ ಆಡಿಯೋ ನನ್ನದಲ್ಲ. ಅದನ್ನು ಲ್ಯಾಬ್ ಟೆಸ್ಟ್​ಗೆ ಕಳುಹಿಸಬೇಕು. ಕಾಂಗ್ರೆಸ್ ಇಷ್ಟು ಕೆಳಮಟ್ಟದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ.

| ವಿಶ್ವಜಿತ್ ರಾಣೆ, ಗೋವಾ ಆರೋಗ್ಯ ಸಚಿವ

ಸುಪ್ರೀಂಗೆ ಮರು ಪರಿಶೀಲನಾ ಅರ್ಜಿ

ರಫೇಲ್ ಯುದ್ಧವಿಮಾನ ಖರೀದಿ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್​ಗೆ ಯಶ್ವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ವಕೀಲ ಪ್ರಶಾಂತ್ ಭೂಷಣ್ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.