VIDEO: 25 ವರ್ಷಗಳ ಬಳಿಕ ಒಂದೇ ವೇದಿಕೆ ಏರಿ ರಾಜಕೀಯದಲ್ಲಿ ಶಾಶ್ವತ ಮಿತ್ರರು, ಶತ್ರುಗಳಿಲ್ಲ ಎಂದವರು ಯಾರು?

ಮೈನ್​ಪುರಿ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂಬುದಕ್ಕೆ ತಾಜಾ ಉದಾಹರಣೆಯಾಗಿದ್ದಾರೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್​ ಯಾದವ್​ ಮತ್ತು ಬಹುಜನ ಸಮಾಜ ಪಕ್ಷದ ಮಾಯಾವತಿ. ಉತ್ತರಪ್ರದೇಶದಲ್ಲಿ 25 ವರ್ಷಗಳಿಂದ ರಾಜಕೀಯವಾಗಿ ಪರಸ್ಪರ ಕತ್ತಿ ಮಸೆಯುತ್ತಿದ್ದ ಇವರಿಬ್ಬರೂ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸುವ ಸಲುವಾಗಿ ಪರಸ್ಪರ ಒಂದಾಗಿ ಸೆಣೆಸಲು ಮುಂದಾಗಿದ್ದಾರೆ.

ಮೈನ್​ಪುರಿಯ ಕ್ರಿಶ್ಚಿಯನ್​ ಮೈದಾನದಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಈ ಇಬ್ಬರೂ ನಾಯಕರು ಕಾಣಿಸಿಕೊಂಡರು. ಲಖನೌನಲ್ಲಿ 1995ರಲ್ಲಿ ನಡೆದಿದ್ದ ಗೆಸ್ಟ್​ಹೌಸ್​ ಪ್ರಕರಣವೆಂದೇ ಕುಖ್ಯಾತವಾಗಿದ್ದ ವಿವಾದದ ಬಳಿಕ ಇವರಿಬ್ಬರೂ ರಾಜಕೀಯವಾಗಿ ಪ್ರತ್ಯೇಕಗೊಂಡಿದ್ದರು.

ಮುಲಾಯುಂ ಸಿಂಗ್​ ಯಾದವ್​ ಅವರು ಮೈನ್​ಪುರಿ ಕ್ಷೇತ್ರದಿಂದ ಎಸ್​ಪಿ-ಬಿಎಸ್​ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಮುಖಂಡರು ಒಂದಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಒಗ್ಗಟ್ಟಿನ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.

ಮೈತ್ರಿ 2ನೇ ಬಾರಿ: ಬಹುಜನ ಸಮಾಜ ಪಕ್ಷದ ಕಾನ್ಷಿರಾಂ ಇದ್ದಾಗ 1993ರಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿ ಮಾಡಿಕೊಂಡಿದ್ದವು. ಬಹುಮತ ಪಡೆದುಕೊಂಡು ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಿದ್ದವು. ಆಗ ಮುಲಾಯಂ ಸಿಂಗ್​ ಯಾದವ್​ ಸಿಎಂ ಆಗಿದ್ದರು. ಆದರೆ, ಮುಲಾಯಂ ಸಿಂಗ್​ ಯಾದವ್​ಗೆ ನೀಡಿದ್ದ ಬೆಂಬಲವನ್ನು 1995ರ ಜೂನ್​ 2ರಂದು ಬಿಎಸ್​ಪಿ ಹಠಾತ್ತನೆ ಹಿಂಪಡೆದುಕೊಂಡಿತ್ತು. ಆಗ ಗೆಸ್ಟ್​ಹೌಸ್​ನಲ್ಲಿದ್ದ ಮಾಯಾವತಿ ಮತ್ತಿತರರ ಮೇಲೆ ಎಸ್​ಪಿ ಕಾರ್ಯಕರ್ತರು ಹಲ್ಲೆ ಮಾಡಲು ಮುಂದಾಗಿದ್ದರು. ಅಂದು ಈ ಎರಡು ಪಕ್ಷಗಳು ಪರಸ್ಪರ ದೂರಾಗಿದ್ದವು. (ಏಜೆನ್ಸೀಸ್​)