More

  ಬಿಟಾ ರಚನೆಗೆ ಶೀಘ್ರ ಗ್ರೀನ್ ಸಿಗ್ನಲ್

  ಪಿ.ಬಿ.ಹರೀಶ್ ರೈ ಮಂಗಳೂರು
  ಕರಾವಳಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಕೊನೆಗೂ ಸ್ಪಂದಿಸಿದೆ. ಬೈಕಂಪಾಡಿಯಲ್ಲಿ ರಾಜ್ಯದ ಎರಡನೇ ಕೈಗಾರಿಕಾ ನಗರ ಪ್ರಾಧಿಕಾರ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಪೂರಕವಾಗಿ ಮುನ್ಸಿಪಲ್ ಕಾಯ್ದೆ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಪ್ರಕ್ರಿಯೆ ಆರಂಭಗೊಂಡಿದೆ.
  ಬೈಕಂಪಾಡಿ ಕೈಗಾರಿಕಾ ನಗರ ಪ್ರಾಧಿಕಾರ(ಬಿಟಾ)ರಚನೆ ಸಂಬಂಧಿಸಿ ಎರಡು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಉದ್ದೇಶಿತ ಪ್ರಾಧಿಕಾರದ ಜಾಗ ಮಂಗಳೂರು ಮಹಾನಗರ ಪಾಲಿಕೆ ಮತ್ತು 5 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾರಣ ಕಾನೂನು ತೊಡಕು ಎದುರಾಗಿತ್ತು. ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ತೊಡಕು ನಿವಾರಿಸಲು ಈಗ ಸರ್ಕಾರ ಮುಂದಾಗಿದೆ.

  ಏನಿದು ಪ್ರಾಧಿಕಾರ?: ಕೈಗಾರಿಕಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮತದಾರರು ವಾಸವಿಲ್ಲದ ಕಾರಣ ಜನಪ್ರತಿನಿಧಿಗಳು ಮೂಲಸೌಕರ್ಯ ಒದಗಿಸಲು ಹೆಚ್ಚಿನ ಆಸಕ್ತಿ ವಹಿಸುವುದಿಲ್ಲ. 1967ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧ್ದಿ ಮಂಡಳಿ(ಕೆಐಎಡಿಬಿ) ಸ್ಥಾಪಿಸಿದ ಬೈಕಂಪಾಡಿ ಕೈಗಾರಿಕಾ ಪ್ರದೇಶವೂ ಇದಕ್ಕೆ ಹೊರತಾಗಿಲ್ಲ. ಪ್ರತ್ಯೇಕ ಕೈಗಾರಿಕಾ ನಗರ ಪ್ರಾಧಿಕಾರ ರಚನೆಯಾದರೆ ಪ್ರಸ್ತಾವಿತ ಕೈಗಾರಿಕಾ ಪ್ರದೇಶ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಿಂದ ಬೇರ್ಪಡಲಿದೆ. ಕೈಗಾರಿಕೆಗಳ ಪ್ರತಿನಿಧಿಗಳೇ ಚುನಾಯಿಸುವ ಇಬ್ಬರು ನಿರ್ದೇಶಕರು, ಸರ್ಕಾರದ ನಾಮನಿರ್ದೇಶನ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಯನ್ನು ಒಳಗೊಂಡ ಪ್ರಾಧಿಕಾರ ಆಡಳಿತ ಮಂಡಳಿ ರಚನೆಯಾಗಲಿದೆ. ಕೈಗಾರಿಕಾ ಪ್ರದೇಶದ ಅಭಿವೃದ್ಧಿ, ನಿರ್ವಹಣೆ, ತೆರಿಗೆ ವಸೂಲಿ ಎಲ್ಲ ಕಾರ್ಯ ಪ್ರಾಧಿಕಾರದ ಸುಪರ್ದಿಗೆ ಬರಲಿದೆ.

   ಪ್ರಸ್ತಾವನೆ ಸಲ್ಲಿಕೆ: ಬಿಟಾ ರಚನೆ ಸಂಬಂಧ ಕೆನರಾ ಸಣ್ಣ ಕೈಗಾರಿಕಾ ಸಂಘ ರಾಜ್ಯ ಸರ್ಕಾರಕ್ಕೆ ಸಮಗ್ರ ಯೋಜನಾ ವರದಿ ಸಹಿತ ಪ್ರಸ್ತಾವನೆ ಸಲ್ಲಿಸಿತ್ತು. ಮನಪಾ ವ್ಯಾಪ್ತಿಯ ಬೈಕಂಪಾಡಿ ಕೈಗಾರಿಕಾ ಪ್ರದೇಶ ಹಾಗೂ ಬಾಳ, ಬಜ್ಪೆ, ಪೆರ್ಮುದೆ ಸಹಿತ 5 ಗ್ರಾಮ ಪಂಚಾಯಿತಿಗಳ 6076.23 ಎಕರೆ ಪ್ರದೇಶವನ್ನು ಪ್ರಾಧಿಕಾರ ವ್ಯಾಪ್ತಿಗೆ ಗುರುತಿಸಲಾಗಿದೆ. ಎಂಆರ್‌ಪಿಎಲ್, ಎಚ್‌ಪಿಸಿಎಲ್, ಒಎಂಪಿಎಲ್, ಬಿಎಎಸ್‌ಎಫ್, ಕೆಐಒಸಿಎಲ್, ಎಂಸಿಎಫ್ ಮುಂತಾದ ಬೃಹತ್ ಕೈಗಾರಿಕೆಗಳ ಸಹಿತ 573 ಮಧ್ಯಮ, ಸಣ್ಣ ಕೈಗಾರಿಕೆಗಳ ಪ್ರದೇಶಗಳು ಈ ಪ್ರಾಧಿಕಾರ ವ್ಯಾಪ್ತಿಗೆ ಬರಲಿವೆ. ಪ್ರಾಧಿಕಾರ ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ.30ರಷ್ಟು ಮೊತ್ತ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪಾವತಿಯಾಗಲಿದೆ.

   ತಿದ್ದುಪಡಿ ಅಗತ್ಯ: ಕರ್ನಾಟಕ ಮುನ್ಸಿಪಲ್ ಆಕ್ಟ್ 1964 ಪ್ರಕಾರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕಾ ನಗರ ಪ್ರಾಧಿಕಾರ ರಚಿಸಲು ಅವಕಾಶವಿದೆ. ಆದರೆ ನಗರ ಪಾಲಿಕೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಚಿಸುವ ಬಗ್ಗೆ ಕಾಯ್ದೆಯಲ್ಲಿ ಉಲ್ಲೇಖವಿಲ್ಲ. ಹಾಗಾಗಿ ಎರಡು ಕಾಯ್ದೆಗೆ ತಿದ್ದುಪಡಿ ತಂದು ಪ್ರಾಧಿಕಾರ ರಚಿಸಬೇಕಾಗಿದೆ.

  ಬೈಕಂಪಾಡಿ ಕೈಗಾರಿಕಾ ನಗರ ಪ್ರಾಧಿಕಾರ ರಚನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ರಾಜ್ಯದಲ್ಲಿ ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ನಗರ ಪ್ರಾಧಿಕಾರ ಮಾತ್ರವಿದೆ. ಬಿಟಾ ಸಂಬಂಧಿಸಿ ಕೈಗಾರಿಕೆ ಇಲಾಖೆ ಮತ್ತು ವಾಣಿಜ್ಯ ಇಲಾಖೆ ಕಾರ್ಯ ದರ್ಶಿ ವಿವರ ಪಡೆದಿದ್ದಾರೆ. ನಗರಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಕೆಯಾಗಿದೆ. ಮುನ್ಸಿಪಲ್ ಕಾಯ್ದೆ ಮತ್ತು ಪಂಚಾಯತ್‌ರಾಜ್ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಪ್ರಕ್ರಿಯೆ ನಡೆದಿದೆ.
  -ಗೋಕುಲ್‌ದಾಸ್ ನಾಯಕ್ ಜಂಟಿ ನಿರ್ದೇಶಕರು, ದ.ಕ.ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts