ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರ

ನವದೆಹಲಿ: ಭಾರತದ ಸ್ಫೋಟಕ ಬ್ಯಾಟ್ಸಮನ್‌ ಯುವರಾಜ್‌ ಸಿಂಗ್‌ ಅವರಿಂದು 37ನೇ ವರ್ಷಕ್ಕೆ ಕಾಲಿಡುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯಿಂದ ಹಿಡಿದು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡುಲ್ಕರ್‌ ವರೆಗೆ ಹಲವಾರು ಜನರು ಟ್ವಿಟರ್‌ ಮೂಲಕ ಚಂಡೀಗಢ ಮೂಲದ ಭಾರತೀಯ ಕ್ರಿಕೆಟಿಗ ಯುವಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಐಸಿಸಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ, 2011ರ ಕ್ರಿಕೆಟ್‌ ವಿಶ್ವಕಪ್‌ ಟೂರ್ನಮೆಂಟ್‌ನ ಆಟಗಾರನಾಗಿದ್ದ ಯುವಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ 11,778 ರನ್‌ ಮತ್ತು 148 ವಿಕೆಟ್‌ ಕಬಳಿಸಿದ್ದು, ಅಂತಾರಾಷ್ಟ್ರೀಯ ಟಿ20ಯಲ್ಲಿ 12 ಎಸೆತಗಳಲ್ಲಿಯೇ ಅರ್ಧ ಶತಕ ಬಾರಿಸಿದ ವೇಗಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದೆ.

ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿನ ಯುವಿಯ ವಿಡಿಯೋವನ್ನು ಶೇರ್‌ ಮಾಡಿಕೊಂಡಿರುವ ಭಾರತೀಯ ಕ್ರಿಕೆಟ್‌ ಮಂಡಳಿ(ಬಿಸಿಸಿಐ), 2011ರಲ್ಲಿ ಮ್ಯಾನ್ ಆಫ್‌ ದಿ ಸೀರಿಸ್‌. ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ ಅರ್ಧ ಶತಕ ಬಾರಿಸಿದ ಟೀಂ ಇಂಡಿಯಾದ ಆಲ್‌ ರೌಂಡರ್‌ ಯುವರಾಜ್‌ ಸಿಂಗ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 138 ರನ್‌ ಗಳಿಸಿ ಜಯತಂದುಕೊಟ್ಟಿದ್ದರು ಎಂದು ನೆನಪಿಸಿಕೊಂಡಿದೆ.

ಬೌಲರ್‌ಗಳನ್ನು ಎದುರಿಸಿದ, ಅನಾರೋಗ್ಯವನ್ನು ಎದುರಿಸಿ ನಿಂತ, ಜೀವನದಲ್ಲಿ ಅನೇಕ ಹಿನ್ನಡೆಗಳನ್ನು ಎದುರಿಸಿ ನಿಂತು ಶಾಂತಿ ಮತ್ತು ಪ್ರೀತಿಯನ್ನೇ ಬಯಸುವ ಯುವರಾಜ್‌ ಸಿಂಗ್‌ಗೆ ಜನ್ಮದಿನದ ಶುಭಾಶಯಗಳು, ಸಾರ್ವಕಾಲಿಕ ಸ್ಫೋಟಕ ಬ್ಯಾಟ್ಸಮನ್‌ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ.

ಇನ್ನು ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಕೂಡ ಟ್ವೀಟ್‌ ಮಾಡಿ, ಆಟದಲ್ಲಿರಲಿ, ಬದುಕಿನಲ್ಲಿರಲಿ ಎಲ್ಲ ಅಡೆತಡೆಗಳನ್ನು ಮೀರಿ ನಿಂತ ದಂತಕಥೆಗೆ ಶುಭಾಶಯಗಳು ಎಂದು ಶುಭಕೋರಿದ್ದಾರೆ.

ಇದುವರೆಗೂ ಯುವರಾಜ್‌ ಸಿಂಗ್‌ 400ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 10 ಸಾವಿರ್‌ ಗಳಿಸಿದ್ದಾರೆ. 2007ರ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್‌ ಬೌಲರ್‌ ಸ್ಟುವರ್ಟ್ ಬ್ರಾಡ್‌ ಅವರ ಎಸೆತಗಳಲ್ಲಿ ಆರು ಬೌಂಡರಿ ಬಾರಿಸಿ ತಂಡದ ಗೆಲುವಿಗೆ ನೆರವಾಗಿದ್ದರು. 2011ರ ವಿಶ್ವಕಪ್‌ನಲ್ಲಿ ‘ಮ್ಯಾನ್ ಆಫ್ ದ ಟೂರ್ನಮೆಂಟ್’ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ಮಾರಕ ಕ್ಯಾನ್ಸರ್‌ನಿಂದ ಬದುಕುಳಿದ ನಂತರ, ಅಮೆರಿಕದಲ್ಲಿನ ಲೈವ್‌ಸ್ಟ್ರಾಂಗ್‌ ಫೌಂಡೇಶನ್‌ನಿಂದ ಯುವರಾಜ್ ಸ್ಫೂರ್ತಿಯನ್ನು ಪಡೆದ ಯುವಿ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಒಬ್ಬ ಜಾಗೃತಿದಾರನಾಗಿ ಹೊರಹೊಮ್ಮಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *