ಶ್ರೀಮನ್ನಾರಾಯಣನಿಂದ ಸಾಕಷ್ಟು ಕಲಿತೆ: ವಿಜಯವಾಣಿ ಸಂದರ್ಶನದಲ್ಲಿ ರಕ್ಷಿತ್​ ಮನದಾಳ

ನಟ ರಕ್ಷಿತ್ ಶೆಟ್ಟಿ ಅಭಿನಯದ ಯಾವುದೇ ಸಿನಿಮಾ ತೆರೆಕಾಣದೆ ಬರೋಬ್ಬರಿ ಎರಡೂವರೆ ವರ್ಷವಾಯ್ತು. ಅಷ್ಟು ಸಮಯ ಅವರು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ರಕ್ಷಿತ್ ಜನ್ಮದಿನದ ಹಿನ್ನೆಲೆಯಲ್ಲಿ ಇಂದು (ಜೂ.6) 2ನೇ ಟೀಸರ್ ರಿಲೀಸ್ ಆಗುತ್ತಿದೆ. ಅಲ್ಲದೆ, ಒಂದು ವರ್ಷದ ನಂತರ ಅವರು ಮತ್ತೆ ಸಾಮಾಜಿಕ ಜಾಲತಾಣಕ್ಕೂ ಮರಳಿದ್ದಾರೆ.

| ಅವಿನಾಶ್ ಜಿ. ರಾಮ್ ಬೆಂಗಳೂರು

# ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿರಿ. ಇದರಿಂದ ಅಭಿಮಾನಿಗಳೊಂದಿಗೆ ಸಂವಹನ ಮಾಡಲಾಗುತ್ತಿಲ್ಲ ಎಂಬ ಬೇಸರ ಇತ್ತಾ?

ಖಂಡಿತವಾಗಿಯೂ ಆ ಬಗ್ಗೆ ಬೇಸರವಿದೆ. ಆದರೆ, ನಾನು ಇದರಿಂದ ದೂರ ಇರುವುದಕ್ಕೆ ಕಾರಣವೂ ಇತ್ತು. ಸೋಷಿಯಲ್ ಮೀಡಿಯಾಗೆ ಒಂದು ರೀತಿಯಲ್ಲಿ ಅಡಿಕ್ಟ್ ಆಗಿಬಿಟ್ಟಿದ್ದೆ. ಒಂದು ಸಲ ಅದರೊಳಕ್ಕೆ ಎಂಟ್ರಿ ಆದರೆ, ತುಂಬ ಸಮಯ ಅಲ್ಲೇ ವ್ಯರ್ಥವಾಗುತ್ತಿತ್ತು. ನನ್ನ ಬೇರೆ ಕೆಲಸಗಳಿಗೆ ಟೈಮ್ ನೀಡಲು ಆಗುತ್ತಿರಲಿಲ್ಲ. ಯಾರದ್ದಾದರೂ ಟ್ವೀಟ್ ನೋಡಿದರೆ, ಅದಕ್ಕೆ ರಿಪ್ಲೈ ಮಾಡಬೇಕು ಎನಿಸುತ್ತಿತ್ತು. ಮಾಡದಿದ್ದರೆ ಬೇಸರವಾಗುತ್ತಿತ್ತು. ಕೊನೆಗೆ ಒಂದು ತಂಡಕ್ಕೆ ಅದನ್ನು ನಿಭಾಯಿಸುವುದಕ್ಕೆ ಸೂಚಿಸಿದೆ. ಆದರೆ, ಅದು ಕೂಡ ನನಗ್ಯಾಕೋ ಇಷ್ಟವಾಗಲಿಲ್ಲ. ಹಾಗಾಗಿ, ಗ್ಯಾಪ್ ತೆಗೆದುಕೊಂಡೆ. ಈಗ ಟೀಮ್ ರಕ್ಷಿತ್ ಶೆಟ್ಟಿ ಎಂಬ ಹೆಸರಿನಲ್ಲೇ ಟ್ವಿಟರ್ ಅಕೌಂಟ್ ಇರಲಿದೆ. ಆ ಮೂಲಕ ಅಭಿಮಾನಿಗಳೊಂದಿಗೆ ಸಂವಹನ ಮುಂದುವರಿಸುತ್ತೇನೆ.

# ಈ ಬಾರಿಯ ಬರ್ತ್​ಡೇ ವಿಶೇಷಗಳೇನು?

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಒಂದು ಟೀಸರ್ ರಿಲೀಸ್ ಆಗಲಿದೆ. ಇದರಲ್ಲಿ ಯಾವುದೇ ವಿಷಯಗಳನ್ನು ಹೇಳುತ್ತಿಲ್ಲ. ಮುಂದೆ ಒಂದು ಟ್ರೇಲರ್ ಬರಲಿದೆ. ನನ್ನ ಹುಟ್ಟುಹಬ್ಬಕ್ಕೆ ಒಂದು ದಿನ ಇರುವಾಗಲೇ ಸಿನಿಮಾದ ಶೂಟಿಂಗ್ ಮುಗಿದಿದೆ. ಅದು ನನಗೆ ಬಹಳ ಖುಷಿ ನೀಡಿದೆ.

# ‘ಕಿರಿಕ್ ಪಾರ್ಟಿ’ ಬಳಿಕ ತುಂಬ ಸಮಯ ತೆಗೆದುಕೊಂಡು ಈ ಸಿನಿಮಾ ಮಾಡಿ ದ್ದೀರಿ. ಎರಡೂವರೆ ವರ್ಷ ನಿಮ್ಮನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ..

ಫಸ್ಟ್ ಡೇ ಫಸ್ಟ್ ಶೋ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ನಾವು ಕಳೆದ ಮೂರು ವರ್ಷಗಳಿಂದ ಶ್ರಮ ಹಾಕಿದ್ದೇವೆ. ಆ ಸಿನಿಮಾವನ್ನು ನೋಡುವುದಕ್ಕೆ ಪ್ರೇಕ್ಷಕರಿಗೆ ಎಷ್ಟು ಕುತೂಹಲವಿದೆಯೋ, ಅದೇ ಥರ ಅವರ ಪ್ರತಿಕ್ರಿಯೆಯನ್ನು ನೋಡುವುದಕ್ಕೆ ನನಗೂ ಕುತೂಹಲವಿದೆ. ನಾನು ಮಾಡಿರುವ ಸಿನಿಮಾಗಳಲ್ಲೇ ಇದು ನನಗೆ ತುಂಬ ಅತಿ ಹೆಚ್ಚು ತೃಪ್ತಿ ನೀಡಿದೆ. ಒಬ್ಬ ಕಲಾವಿದನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ ಈ ಸಿನಿಮಾ ಸಾಕಷ್ಟು ಕಲಿಸಿದೆ. ಒಬ್ಬ ವಿದ್ಯಾರ್ಥಿ ಡಿಗ್ರಿ ಕಲಿತು ಕೆಲಸ ಮಾಡುವುದಕ್ಕೆ ಶುರು ಮಾಡುವಂತೆ ಈ ಸಿನಿಮಾ ಕೂಡ ನನಗೆ ಒಂದು ರೀತಿಯ ಡಿಗ್ರಿ ಆಗಿದೆ.

# ಮೊದಲ ಬಾರಿ ನಿಮ್ಮ ಚಿತ್ರವೊಂದು ಬೇರೆ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ..

ನನ್ನ ಪ್ರಕಾರ, ಮುಂಬರುವ ಬಹುತೇಕ ಸಿನಿಮಾಗಳು ಇದೇ ಮಾದರಿಯನ್ನು ಅನುಸರಿಸಲಿವೆ. ತಮ್ಮ ಸಿನಿಮಾ ಬಗ್ಗೆ ಭರವಸೆ ಇದ್ದಾಗ ಎಲ್ಲರೂ ಬೇರೆ ಭಾಷೆಗೆ ಡಬ್ ಮಾಡಿ, ರಿಲೀಸ್ ಮಾಡುತ್ತಾರೆ. ಈ ಮೂಲಕ ಸಿನಿಮಾಗಳು ಬೇರೆ ಬೇರೆ ಪ್ರೇಕ್ಷಕರಿಗೆ ರೀಚ್ ಆಗಲಿವೆ. ಸದ್ಯ ನಮ್ಮ ಚಿತ್ರದ ಟೀಸರ್ ಕನ್ನಡದಲ್ಲಿ ಇರಲಿದೆ. ಟ್ರೇಲರ್ ಐದು ಭಾಷೆಯಲ್ಲಿ ಬರಲಿದೆ.

# ನಿಮ್ಮ ನಿರ್ದೇಶನದ ಮುಂದಿನ ಸಿನಿಮಾ ‘ಪುಣ್ಯಕೋಟಿ’. ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದೇ?

ಸದ್ಯ ನಾನಿನ್ನೂ ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ನಾನು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬರುತ್ತಿದೆ. ನಾನು ಹಲವು ಸ್ಕ್ರಿಪ್ಟ್ ಬರೆಯುತ್ತಿರುತ್ತೇನೆ. ಅದರಲ್ಲಿ ಕೆಲವೊಂದನ್ನು ನಾನೇ ನಿರ್ದೇಶನ ಮಾಡಬೇಕು ಎನಿಸುತ್ತದೆ. ಆ ರೀತಿ ಅನಿಸಿದ ಸಿನಿಮಾ ‘ಪುಣ್ಯಕೋಟಿ’. ಇದು ವರೆಗೂ ನಾನು ಬರೆದ ಸ್ಕ್ರಿಪ್ಟ್​ಗಳಲ್ಲಿ ಇದು ಬಹಳ ಆಸಕ್ತಿಕರವಾದ ವಿಷಯವನ್ನು ಹೊಂದಿದೆ.

# ‘ಅವನೇ ಶ್ರೀಮನ್ನಾರಾಯಣ’ ಕ್ಕಾಗಿ ಅಂದಾಜು 600 ದಿನಗಳಷ್ಟು ಶ್ರಮ ಹಾಕಿದ್ದೀರಿ. ಇದರ ಮಧ್ಯೆ ಬೇರೆ ಸಿನಿಮಾಗಳಿಗಾಗಿ ಏನಾದರೂ ತಯಾರಿ..?

ಹೌದು, ಈ ಮಧ್ಯೆ ನನ್ನ ನಟನೆಯ ‘777 ಚಾರ್ಲಿ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ನಾನು ಮುಂದೆ ನಿರ್ದೇಶನ ಮಾಡಲಿರುವ ‘ಪುಣ್ಯಕೋಟಿ’ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಜತೆಜತೆಗೆ ಮಾಡಿದ್ದೇನೆ.

Leave a Reply

Your email address will not be published. Required fields are marked *