ಪಕ್ಷಿಗಳ ಪ್ರೀತಿಸಿರಿ

ಸಕಲ ಜೀವರಾಶಿಗಳಿಗೂ ಪ್ರಕೃತಿ ಎನ್ನುವುದು ತಾಯಿಯ ಮಡಿಲು ಇದ್ದಂತೆ. ಇಂದು ಅದೇ ಮಡಿಲನ್ನು ನಾವು ನಾಶ ಮಾಡುತ್ತಿರುವುದರಿಂದ ವನ್ಯಪ್ರಾಣಿ, ಪಕ್ಷಿಗಳ ಸಂಕುಲ ಅಪಾಯದಂಚಿನಲ್ಲಿದೆ. ಈಗಾಗಲೇ ಹಲವು ಪಕ್ಷಿಗಳು ನಶಿಸಿಹೋಗಿದ್ದು, ಹಲವಾರು ನಶಿಸುವ ಹಂತದಲ್ಲಿವೆ. ಈ ನಾಶವನ್ನು ಇನ್ನಷ್ಟು ತಡೆಗಟ್ಟಲು ಹಾಸನದ ಕಾರಂಜಿ ಟ್ರಸ್ಟ್ ಮುಂದಾಗಿದೆ. ಟ್ರಸ್ಟ್​ನಿಂದ ಉಚಿತವಾಗಿ ಸಿರಿಧಾನ್ಯ ಬೀಜಗಳನ್ನು ಪಡೆದು ಮನೆಯಂಗಳ ಅಥವಾ ಹಿತ್ತಲಿನಲ್ಲಿ ಅವುಗಳನ್ನು ಬೆಳೆದು, ಪಕ್ಷಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನೀವೂ ಭಾಗಿಯಾಗಬಹುದು.

| ಬಸವರಾಜ ಎನ್. ಬೋದೂರು

ದಿನದಿಂದ ದಿನಕ್ಕೆ ನಾಶವಾಗುತ್ತಿರುವ ಅರಣ್ಯ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರ, ಔಷಧ ಬಳಸುವುದು, ಬರಗಾಲದಿಂದ ಕೆರೆ, ಹಳ್ಳ, ನದಿ, ಸರೋವರಗಳೆಲ್ಲ ಬತ್ತಿ ಹೋಗುವುದು, ಕಾಡ್ಗಿಚ್ಚು, ಗಣಿಗಾರಿಕೆ, ಬೇಟೆ, ಪ್ರಕೃತಿ ವಿಕೋಪ, ಮೊಬೈಲ್ ತರಂಗಗಳು ಸೇರಿದಂತೆ ಇನ್ನೂ ಹಲವಾರು ಅಪಾಯಗಳು ಇಂದು ಪಕ್ಷಿಸಂಕುಲಕ್ಕಿವೆ. ಇದರ ಜೊತೆಗೆ ಪಕ್ಷಿಗಳು ಎದುರಿಸುತ್ತಿರುವ ಸವಾಲುಗಳನ್ನು ಒಮ್ಮೆ ನೋಡುತ್ತ ಹೋದರೆ ಹಲವಾರು ಆಯಾಮಗಳು ಅನಾವರಣಗೊಳ್ಳುತ್ತವೆ. ಆಹಾರ-ನೀರಿನ ಕೊರತೆ, ವಾಯುಮಾಲಿನ್ಯ, ಗೂಡು ಕಟ್ಟಲು ಪೂರಕ ಗಿಡಮರ, ಪೊದೆಗಳ ಕೊರತೆ, ವಿಷ ತಿಂದು ಸತ್ತ ಪ್ರಾಣಿಗಳ ಮಾಂಸ ಸೇವನೆ ಹಾಗೂ ಕೊಳಚೆ ನೀರು ಸೇವನೆಯಿಂದ ಪಕ್ಷಿಗಳ ದೇಹದಲ್ಲಿ ಜಂತುಹುಳುವಿನಂತಹ ಕ್ರಿಮಿಗಳು ಉತ್ಪತ್ತಿಯಾಗಿಯೂ ಸಾಯುತ್ತಿವೆ. ಇದನ್ನೆಲ್ಲ ಮನಗಂಡ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದ ತನುಜಾ ಹಾಗೂ ನವೀನ್ ಕುಮಾರ ಎಂಬ ಅಕ್ಕ-ತಮ್ಮ ಪಕ್ಷಿಗಳ ಪ್ರಾಣ ಉಳಿಸಲು ಪಣತೊಟ್ಟು ನಿಂತಿದ್ದಾರೆ.

ಹೇಗೆ ಅಂತೀರಾ?: ನಾಡಿನ ಎಲ್ಲ ಭಾಗದ ಪಕ್ಷಿಪ್ರೇಮಿಗಳು ಮನೆಯಂಗಳದಲ್ಲೇ ಸಿರಿಧಾನ್ಯ ಬೆಳೆದು ಪಕ್ಷಿಗಳಿಗೆ ಅನುಕೂಲ ಮಾಡಿಕೊಡುವಂತಾಗಲು ಇವರು ಉಚಿತ ಬೀಜಗಳನ್ನು ಹಂಚುತ್ತಿದ್ದಾರೆ. ಅದಕ್ಕಾಗಿಯೇ ಕಾರಂಜಿ ಟ್ರಸ್ಟ್ ಸ್ಥಾಪಿಸಿಕೊಂಡು ಪ್ರೀತಿ‘ಸಿರಿ’ ಎಂಬ ತಲೆಬರಹ ಹಾಗೂ ಗುಬ್ಬಿ, ಗೀಜಗ, ಗಿಳಿಗಳು ಎಂಬ ಅಡಿಬರಹದೊಂದಿಗೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ‘ಮನೆಯಂಗಳ ದಲ್ಲೊಂದಿಷ್ಟು ಸಿರಿಧಾನ್ಯ ಬಿತ್ತೋಣ, ಬೇಸಿಗೆ ಧಗೆಯಲ್ಲಿ ಪಕ್ಷಿಗಳ ಪ್ರಾಣ ಉಳಿಸೋಣ’ ಎಂಬುದು ಕಾರಂಜಿಯ ಧ್ಯೇಯವಾಕ್ಯ. ಬಿರುಬೇಸಿಗೆಯಲ್ಲಿ ಪಕ್ಷಿಗಳಿಗೆ ಕಾಳು, ನೀರು ಕೊರತೆಯಾಗದಂತೆ ಆಸಕ್ತರನ್ನು ಈಗಿನಿಂದಲೇ ಸಜ್ಜುಗೊಳಿಸಲು ಕಾರಂಜಿ ಟ್ರಸ್ಟ್ ಮೂಲಕ ಮುಂದಾಗಿದ್ದಾರೆ.

ಬೀಜಗಳು ಉಚಿತ: ಪಕ್ಷಿ ರಕ್ಷಣಾ ಕಾರ್ಯದಲ್ಲಿ ಕಾರಂಜಿ ಟ್ರಸ್ಟ್ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ನಂಬರ್ ಹರಿಯಬಿಟ್ಟಿದ್ದು, ‘ಪಕ್ಷಿಪ್ರಿಯರು ಈ ನಂಬರಿಗೆ ವಿಳಾಸ ಕಳುಹಿಸಿ, ನಾವು ನಿಮಗೆ ಸಿರಿಧಾನ್ಯದ ಬೀಜಗಳನ್ನು ಕಳುಹಿಸಿಕೊಡುತ್ತೇವೆ. ಬನ್ನಿ, ಪ್ರಕೃತಿ ಸಿರಿಯನ್ನು ಎದೆಯೊಳಗೊಸಿ ಬಿತ್ಕೊಳ್ಳೋಣ, ಪುಟಾಣಿಗಳನ್ನು ಪ್ರೇರೇಪಿಸೋಣ, ಚಿಲಿಪಿಲಿ ದನಿಗೆ ಕಿವಿಯಾಗೋಣ’ ಎಂದು ವಿನಂತಿಸಿಕೊಂಡಿದೆ. ಅಷ್ಟೇ ಅಲ್ಲ, ಸಿರಿಧಾನ್ಯ ಬೀಜಗಳಾದ ನವಣೆ, ಬರಗು, ಕೊರಲೆ, ಸಾಮೆ, ಊದಲು, ಸಜ್ಜೆ, ಮುಸುಕಿನ ಜೋಳ, ರೊಟ್ಟಿ ಜೋಳ, ಸೂರ್ಯಕಾಂತಿ ಸೇರಿದಂತೆ ಇನ್ನೂ ಹತ್ತಾರು ತರಹದ ಬೀಜಗಳನ್ನು ಅಂಚೆ ಮೂಲಕ ಆಸಕ್ತರಿಗೆ ಉಚಿತವಾಗಿ ಕಳಿಸಿಕೊಡುತ್ತಿದೆ. ಈ ಬೀಜಗಳನ್ನು ಬಿತ್ತಿ ಮನೆಯಂಗಳ ಅಥವಾ ಹಿತ್ತಲಿನಲ್ಲಿ ಸಿರಿಧಾನ್ಯಗಳನ್ನು ಬೆಳೆದರೆ ಅವು ಬೇಸಿಗೆಯಲ್ಲಿ ಪಕ್ಷಿಗಳಿಗೆ ಆಹಾರವಾಗುತ್ತವೆ. ಜೊತೆಗೊಂದಿಷ್ಟು ಪಾತ್ರೆಯಲ್ಲಿ ನೀರು ಇಟ್ಟರೆ ಪಕ್ಷಿಗಳು ಚಿಲಿಪಿಲಿಗುಟ್ಟುತ್ತ ಆಟ ಆಡುವುದನ್ನು, ಹಾರಾಡುವುದನ್ನು ಕಣ್ತುಂಬಿಕೊಳ್ಳಬಹುದು. ಮಕ್ಕಳಿಗೆ ಪಕ್ಷಿಗಳು ಮತ್ತು ಸಿರಿಧಾನ್ಯಗಳ ಪರಿಚಯ ಮಾಡಿಕೊಡಬಹುದು. ಮುಖ್ಯವಾಗಿ ಪಕ್ಷಿಗಳ ಪ್ರಾಣ ಉಳಿಸಬಹುದು. ಮುಂದಿನ ಪೀಳಿಗೆಗೆ ಪಕ್ಷಿಗಳನ್ನು ಬಳುವಳಿಯಾಗಿ ಬಿಟ್ಟು ಹೋಗಬಹುದು ಎಂದು ಕರೆ ನೀಡುತ್ತಿದೆ.

ಆಸಕ್ತಿ ಚಿಗುರಿದ್ದು ಹೀಗೆ: ‘ಪ್ರಕೃತಿಯಲ್ಲಿ ಪಕ್ಷಿಗಳ ಪಾತ್ರ ಪ್ರಮುಖವಾದದ್ದು. ಪಕ್ಷಿಗಳು ಬೆಳೆಗಳನ್ನು ನಾಶ ಮಾಡುವ ಕೀಟಗಳನ್ನು ನಾಶಗೊಳಿಸುತ್ತವೆ. ಬೀಜ ಪ್ರಸರಣೆ ಮಾಡುತ್ತವೆ. ಪರಾಗಸ್ಪರ್ಶ ಮಾಡುವ ಮೂಲಕ ಗಿಡ-ಮರಗಳ ಸಂಖ್ಯೆ ಹೆಚ್ಚಿಸಿ ಹಸಿರಿನ ನಿರ್ಮಾಣ ಮಾಡುತ್ತವೆ. ಪಕ್ಷಿಗಳ ಹಿಕ್ಕೆ ಪ್ರಕೃತಿಗೆ ಒಳ್ಳೆಯ ಗೊಬ್ಬರ. ಪಕ್ಷಿಗಳು ವಿಕೋಪದ ಮುನ್ಸೂಚನೆ ಅರಿಯುತ್ತವೆ. ಮುಂಜಾವಿನಲ್ಲಿ ಅವುಗಳ ಚಿಲಿಪಿಲಿ ಕಲರವ ಕೇಳುತ್ತಿದ್ದರೆ ಮನಸ್ಸು ಆಹ್ಲಾದಗೊಳ್ಳುತ್ತದೆ. ನಿಸರ್ಗದ ಸೌಂದರ್ಯಕ್ಕೆ ಪ್ರಾಣಿಪಕ್ಷಿಗಳೇ ಆಭರಣಗಳು. ಅವುಗಳ ಸ್ವರದಿಂದ ಇಡೀ ಭೂಮಿಯೇ ನಾದಮಯವಾಗುವುದು. ಹೀಗಿರುವಾಗ ಬೇಸಿಗೆಯಲ್ಲಿ ಅವು ಆಹಾರ, ನೀರಿಲ್ಲದೆ ಸಾವನ್ನಪ್ಪುತ್ತಿರುವುದನ್ನು ನೋಡಿ ಮನಸ್ಸು ಮರುಗಿತು. ವಿನಾಶದ ಅಂಚಿನಲ್ಲಿರುವ ಪಕ್ಷಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿರುವುದರಿಂದ ಏನಾದರೂ ಮಾಡಲೇಬೇಕೆಂದು ತೀರ್ಮಾನ ಮಾಡಿದೆವು. ಹಾಗ ಪ್ರೀತಿ‘ಸಿರಿ’ ಐಡಿಯಾ ಹೊಳೆಯಿತು. ಅದನ್ನೇ ಮಾಡಲು ಮುಂದಾದೆವು’ ಎನ್ನುತ್ತಾರೆ ತನುಜಾ. ಇವರು ಎಂಬಿಎ ಪದವೀಧರೆ. ಸ್ವಯಂ ಉದ್ಯೋಗವಾಗಿ ನರ್ಸರಿ ಮಾಡಿಕೊಂಡಿರುವ ತನುಜಾ ಬ್ರದರ್ಸ್ ಕಾಜಿನಿಂಬೆ, ನುಗ್ಗೆ, ತೆಂಗು, ಕರಿಬೇವು, ಲಕ್ಷ್ಮಣ ಫಲ, ಅಡಕೆ ಇನ್ನೂ ಹತ್ತಾರು ಪ್ರಭೇದದ ಸಸಿಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಬಂದುದರಲ್ಲಿ ಅರ್ಧ ಹಣವನ್ನು ಪಕ್ಷಿಗಳ ರಕ್ಷಣೆಗೆ ಖರ್ಚು ಮಾಡುತ್ತಿದ್ದಾರೆ. ಜೊತೆಗೆ ಜಮೀನಿನಲ್ಲಿ ನೈಸರ್ಗಿಕ ಕೃಷಿಯನ್ನು ಸಹ ಮಾಡುತ್ತಿದ್ದಾರೆ. ಕಳೆದ 6 ತಿಂಗಳಿನಿಂದ ಈ ಕಾರಂಜಿ ಟ್ರಸ್ಟ್ ಮೂಲಕ ಕಾರ್ಯೂೕನ್ಮುಖರಾಗಿದ್ದು, ಈಗಾಗಲೇ 500ಕ್ಕೂ ಹೆಚ್ಚು ಆಸಕ್ತರಿಗೆ ಸಿರಿಧಾನ್ಯಗಳ ಬೀಜಗಳನ್ನು ಕಳುಹಿಸಿದ್ದಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪಕ್ಷಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ, ಸಿರಿಧಾನ್ಯ ಪರಿಚಯಿಸಿ, ಅವುಗಳಿಂದಾಗುವ ಉಪಯೋಗದ ಕುರಿತು ತಿಳಿಸಿ ಅವರಿಗೆ ಬೀಜಗಳನ್ನು ನೀಡುತ್ತಿದ್ದಾರೆ.

ಉತ್ತರ ಕರ್ನಾಟಕದಿಂದ ಖರೀದಿ

ಹಾಸನದ ಕಡೆ ಸಜ್ಜೆ, ಜೋಳ, ನವಣೆ, ಸೂರ್ಯಕಾಂತಿಯ ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುವುದಿಲ್ಲ. ಹೀಗಾಗಿ, ಈ ಧಾನ್ಯಗಳನ್ನು ಉತ್ತರ ಕರ್ನಾಟಕದಿಂದ ತರಿಸಿಕೊಳ್ಳುತ್ತಾರೆ. ಅವುಗಳನ್ನು ಸ್ವಲ್ಪ ಸ್ವಲ್ಪ ಆಸಕ್ತ ಪಕ್ಷಿಪ್ರಿಯರಿಗೆ ಸ್ಪೀಡ್ ಪೋಸ್ಟ್ ಮಾಡುತ್ತಾರೆ. ಇದೆಲ್ಲದರ ಖರ್ಚು ಈಗಾಗಲೇ 20 ಸಾವಿರಕ್ಕೂ ಅಧಿಕವಾಗಿದೆ. ನಿಮಗೂ ಸಿರಿಧಾನ್ಯ ಬೇಕಾದಲ್ಲಿ 8792605846, 9591066583 ಈ ವಾಟ್ಸಾಪ್ ನಂಬರ್​ಗೆ ವಿಳಾಸ ಕಳಿಸಬಹುದು.