ವಲಸೆ ಹಕ್ಕಿಗಳ ಕಲರವ ಕ್ಷೀಣ

«ವಿದೇಶಿ ಹಕ್ಕಿಗಳ ಸಂಖ್ಯೆ ಗಣನೀಯ ಇಳಿಮುಖ * ಮುಳುವಾಯಿತೇ ಬಿಸಿಲ ಝಳ?»

– ಪ್ರಕಾಶ್ ಮಂಜೇಶ್ವರ ಮಂಗಳೂರು
ಶರದೃತುವಿನಲ್ಲೂ ಕರಾವಳಿಯಲ್ಲಿ ಹಕ್ಕಿಗಳ ಕಲರವ ಎಂದಿನಂತಿಲ್ಲ. ಸಾಮಾನ್ಯವಾಗಿ ಈ ಅವಧಿ ಹಸಿರು ತೋಪು, ಗಿಡ- ಮರಗಳನ್ನು ಆಭರಣಗಳಂತೆ ಅಲಂಕರಿಸುತ್ತಿದ್ದ ಬಣ್ಣದ ಪಕ್ಷಿಗಳ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿದಂತಿದೆ. ನಿತ್ಯ ಮುಂಜಾನೆ-ಮುಸ್ಸಂಜೆ ಕ್ಯಾಮೆರಾ ಜತೆ ಸೈಕಲ್ ಹಿಡಿದು ಹಸಿರು ಹಾದಿಯಲ್ಲಿ ಪಕ್ಷಿ ವೀಕ್ಷಣೆಗೆ ಪ್ರಯಾಣಕ್ಕೆ ಹೊರಡುವವರು ಒಂದಿಷ್ಟು ನಿರಾಶೆಯಿಂದಲೇ ಮರಳುತ್ತಿದ್ದಾರೆ!
ಸಾಮಾನ್ಯವಾಗಿ ವರ್ಷಂಪ್ರತಿ ಚಳಿಗಾಲದ ಅವಧಿ ಮುಂಜಾನೆ ಗೋಚರಿಸುವ ಮಂಜಿನ ಪರದೆ ಈ ಬಾರಿ ಬೇಗನೇ ಹರಿದು ತಾಪಮಾನದ ಝಳ ಆವರಿಸಿಕೊಳ್ಳುತ್ತಿದೆ. ಬಹುಶಃ ಇದೇ ಕಾರಣಕ್ಕೆ ಈ ಬಾರಿ ಕರಾವಳಿಗೆ ಭೇಟಿ ನೀಡುತ್ತಿರುವ ಹೊರ ರಾಜ್ಯ ಹಾಗೂ ವಿದೇಶಿ ಹಕ್ಕಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿದಿದೆ ಎನ್ನುತ್ತಾರೆ ಪಕ್ಷಿತಜ್ಞರು.

ಅತಿಥಿಗಳು ಕಡಿಮೆ
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕರಾವಳಿಗೆ, ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಈ ವರ್ಷ ವಲಸೆ ಬಂದಿರುವ ಹಕ್ಕಿಗಳ ಪ್ರಮಾಣ ಅತ್ಯಲ್ಪ. ಮಧ್ಯ ಏಷ್ಯಾ, ಯುರೋಪ್ ಮೂಲದ ಯುರೇಶಿಯನ್ ಮಾರ್ಷ್ ಹ್ಯಾರಿಯರ್ ಕರ್ನಾಟಕಕ್ಕೆ ವರ್ಷಂಪ್ರತಿ ದೊಡ್ಡ ಪ್ರಮಾಣದಲ್ಲಿ ಭೇಟಿ ನೀಡುತ್ತದೆ. ಬಜಪೆ ಕೆಂಜಾರು ಸಮೀಪ ಚಳಿಗಾಲದ ಸಮಯ ದಿನಂಪ್ರತಿ 7-8 ಈ ಹಕ್ಕಿಗಳು ಕಾಣಸಿಗುತ್ತಿದ್ದವು. 2-3 ಹಕ್ಕಿಗಳು ಈ ಕಾಲ ಇಲ್ಲೇ ಬಿಡಾರ ಹೂಡುತ್ತಿತ್ತು. ಆದರೆ, ಈ ಹಕ್ಕಿ ಈ ವರ್ಷ ಕೆಂಜಾರಿನಲ್ಲಿ ದಿನದಲ್ಲಿ ಎರಡು ಕಣ್ಣಿಗೆ ಗೋಚರಿಸಿದರೆ ಹೆಚ್ಚು. ವಲಸೆ ಬಂದಿರುವ ಇತರ ಹಕ್ಕಿಗಳ ಪ್ರಮಾಣವೂ ಅತ್ಯಂತ ಕಡಿಮೆ ಇದೆ ಎನ್ನುತ್ತಾರೆ ಹಿರಿಯ ಪಕ್ಷಿ ವೀಕ್ಷಕ ಅರ್ನಾಲ್ಡ್ ಗೋವಿಯಸ್. ಟೈಗಾ ಫ್ಲೈಕ್ಯಾಚರ್, ರಸ್ಟಿ ಟೈಲ್ಡ್ ಫ್ಲೈಕ್ಯಾಚರ್, ರಡ್ಡಿ ಶೆಲ್ಡಕ್, ಯುರೋಶಿಯನ್ ರೈನೆಕ್, ಯುರೇಶಿಯನ್ ಕುಕ್ಕೂ, ಹೂಪೊ, ರೆಡ್ ಹೆಡ್ಡೆಡ್ ಬಂಟಿಂಗ್, ಅಳವೆಬಾಗಿಲಿನಲ್ಲಿ ಕಾಣಸಿಗುವ ವೇಡರ್ಸ್‌ ಸಹಿತ ಕೆಲ ವಲಸೆ ಹಕ್ಕಿಗಳಷ್ಟೇ ಪಕ್ಷಿ ವೀಕ್ಷಕರ ನೋಟಕ್ಕೆ ಲಭ್ಯವಾಗಿದೆ.

ಇತರ ಕೆಲವು ಅಚ್ಚರಿ
ಉಡುಪಿಯ ಕೆಮ್ಮಣ್ಣು ಎಂಬಲ್ಲಿ ಚಕ್ರವಾಕ (ರಡ್ಡಿ ಶೆಲ್ಡಕ್)ಎನ್ನುವ ಬಾತುಕೋಳಿ ಜಾತಿಯ ಹಕ್ಕಿಯನ್ನು ಹವ್ಯಾಸಿ ಪಕ್ಷಿ ವೀಕ್ಷಕಿ ಅವಿಲಾ ಡಿಸೋಜ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ಇವು ವಲಸೆ ಹಕ್ಕಿಯಾಗಿದ್ದು, ಚಳಿಗಾಲಗಳನ್ನು ಭಾರತೀಯ ಉಪಖಂಡದಲ್ಲಿ ಕಳೆಯುತ್ತವೆ. ಆಗ್ನೇಯ ಯೂರೋಪ್ ಹಾಗೂ ಮಧ್ಯ ಏಷ್ಯಾ, ಹಿಮಾಲಯದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಉತ್ತರ ಆಫ್ರಿಕಾದಲ್ಲಿ ಸಣ್ಣ ಸಂಖ್ಯೆಯಲ್ಲಿ ಚಕ್ರವಾಕಗಳು ನೆಲೆಸಿವೆ. ಕಾರಿನ ಹಾರನ್ನಿನಂತೆ ಇವು ದೊಡ್ಡ ಸದ್ದು ಮಾಡುತ್ತವೆ. ಬಹುತೇಕ ಕೆರೆ, ಜಲಾಶಯ ಮತ್ತು ನದಿಗಳಂತಹ ಒಳನಾಡಿನ ಜಲಸಮೂಹಗಳಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಒಂದೆರಡು ಸಂಖ್ಯೆಯಲ್ಲಿ ಚಳಿಗಾಲದಲ್ಲಿ ಕರಾವಳಿಯಲ್ಲಿ ಗೋಚರಿಸುವ ಹಿಮಾಲಯ ಮೂಲದ ಯುರೇಶಿಯನ್ ಕುಕ್ಕೂ ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಕೆಂಜಾರಿನಲ್ಲಿ ಗೋಚರಿಸಿವೆ. ಒಂದು ಬಾರಿ 11 ಹಾಗೂ ಇನ್ನೊಂದು ಬಾರಿ 13 ಪಕ್ಷಿಗಳು ಒಂದೇ ಪಕ್ಷಿ ವೀಕ್ಷಕರ ಗಮನ ಸೆಳೆದಿವೆ.

ಬರಬೇಕಿದ್ದ ಅತಿಥಿಗಳು!
ನಾರ್ಥರ್ನ್ ಶೋವ್ಲೆರ್, ನಾರ್ಥರ್ನ್ ಪಿಂಟೈಲ್, ಫೆರೊಜಿನಸ್ ಪೊಚಾರ್ಡ್, ಯುರೋಶಿಯನ್ ವಿಜಿಯನ್ , ಕಾಮನ್ ಪೊಚಾರ್ಡ್ ಹಾಗೂ ಬೈಲನ್ಸ್ ಕ್ರೇಕ್, ಫೆರೊಜಿನಸ್ ಪೊಚಾರ್ಡ್, ಕಾಮನ್ ಪೊಚಾರ್ಡ್ ಹಾಗೂ ಬೈಲನ್ಸ್ ಕ್ರೇಕ್ ಸಹಿತ ವಿವಿಧ ರಾಷ್ಟ್ರ ಹಾಗೂ ರಾಜ್ಯಗಳ ವೈವಿಧ್ಯಮಯ ಹಕ್ಕಿಗಳು ಕರಾವಳಿಯಲ್ಲಿ ಕಾಣಸಿಗುತ್ತವೆ.

ದೇಶ-ವಿದೇಶಗಳಿಂದ ವರ್ಷದಿಂದ ವರ್ಷಕ್ಕೆ ಕರಾವಳಿಗೆ ವಲಸೆ ಬರುವ ಹಕ್ಕಿಗಳ ಸಂಖ್ಯೆ ಕಡಿಮೆ ಆಗುತ್ತಿವೆ. ಕಳೆದ ವರ್ಷ ಮಳೆ ಕೊರತೆಯಿಂದ ನೀರು ಕಡಿಮೆಯಾದ ಮೈಸೂರು, ಬೆಂಗಳೂರು, ಶಿವಮೊಗ್ಗ ಕಡೆ ವಲಸೆ ಹೋಗುವ ಅನೇಕ ಹಕ್ಕಿಗಳು ಕರಾವಳಿಯತ್ತ ಮುಖ ಮಾಡಿದ್ದವು. ಆದರೆ, ಈ ವರ್ಷ ಇಲ್ಲಿಗೆ ವಲಸೆ ಬಂದಿರುವ ಹೊರಗಿನ ಹಕ್ಕಿಗಳ ಒಟ್ಟು ಪ್ರಮಾಣ ತೀವ್ರ ಕುಂಠಿತಗೊಂಡ ಹಾಗೆ ಕಾಣುತ್ತದೆ. ಆಹಾರದ ಲಭ್ಯತೆ, ಪೂರಕ ವಾತಾವರಣ, ಹಕ್ಕಿಗಳ ಮೂಲ ತಾಣದ ಹವಾಮಾನ ವೈಪರಿತ್ಯ ಮತ್ತಿತರ ಅಂಶಗಳು ಪಕ್ಷಿಗಳ ವಲಸೆಯಲ್ಲಿ ಪಾತ್ರ ವಹಿಸುತ್ತವೆ.
ಅರ್ನಾಲ್ಡ್ ಗೋವಿಯಸ್, ಹಿರಿಯ ಪಕ್ಷಿ ವೀಕ್ಷಕ.