ಬಯೋಪಿಕ್‌ ಎನ್ನುವುದೇ ಜೋಕ್‌, ಪ್ರಧಾನಿ ಮೋದಿ ಮೇಲೆ ಕಾಮಿಡಿ ಸಿನಿಮಾ ಮಾಡಬೇಕು: ಊರ್ಮಿಳಾ ಮತೋಂಡ್ಕರ್‌

ನವದೆಹಲಿ: ನಟಿ, ರಾಜಕಾರಣಿ ಊರ್ಮಿಳಾ ಮತೋಂಡ್ಕರ್‌ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದು, ಸರ್ಕಾರದ ಮುಖ್ಯಸ್ಥನಾಗಿದ್ದುಕೊಂಡು ಏನನ್ನು ಮಾಡಲು ವಿಫಲವಾಗಿರುವ ಪ್ರಧಾನಿ ಮೋದಿ ಬಯೋಪಿಕ್‌ಗೆ ಅರ್ಹರಲ್ಲ ಎಂದು ಹೇಳಿದ್ದಾರೆ.

ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮತೋಂಡ್ಕರ್‌ ಪ್ರಧಾನಿ ಮೋದಿಯವರ ಮೇಲೆ ಹಾಸ್ಯ ಸಿನಿಮಾವನ್ನು ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿಯವರ ಜೀವನಾಧಾರಿತ ಸಿನಿಮಾ ಮಾಡಿರುವುದರಲ್ಲಿ ಏನೂ ಇಲ್ಲ ಆದರೆ ಅವರು ಪ್ರಧಾನಿಯಾಗಿ ಏನನ್ನು ಮಾಡದೆ ವಿಫಲವಾಗಿದ್ದು, 56 ಇಂಚಿನ ಎದೆಯನ್ನು ಹೊಂದಿರುವುದನ್ನು ಹೇಳಿಕೊಂಡಿರುವುದೊಂದು ತಮಾಷೆಯಾಗಿದೆ. ಅವರ ಜೀವನಾಧಾರಿತ ಕುರಿತು ಸಿನಿಮಾ ಮಾಡಿರುವುದು ಭಾರತದ ಹಾನಿಗೊಳಗಾಗಿರುವ ಪ್ರಜಾಪ್ರಭುತ್ವ, ಬಡತನ ಮತ್ತು ವೈವಿಧ್ಯತೆಯ ಮೇಲಿನ ಹಾಸ್ಯಾಸ್ಪದವಾಗಿದೆ ಎಂದು ಕಿಡಿಕಾರಿದ್ದಾರೆ.

ಮುಂದುವರಿದು ಪ್ರಧಾನಿ ಮೋದಿ ಅವರ ಮೇಲೆ ಹಾಸ್ಯ ಚಿತ್ರವೊಂದನ್ನು ಮಾಡಬೇಕು ಮತ್ತು ಅವರ ಈಡೇರದ ಭರವಸೆಗಳ ಕುರಿತು ಸಿನಿಮಾವಾಗಲಿ. ಒಂದು ಪ್ರಜಾಪ್ರಭುತ್ವದ ದೇಶದ ಪ್ರಧಾನಿಯಾಗಿ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸದಿರುವುದಕ್ಕಿಂತ ಕೆಟ್ಟದ್ದು ಮತ್ತೇನಿದೆ ಎಂದು ಊರ್ಮಿಳಾ ಮತೋಂಡ್ಕರ್‌ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿಯವರ ಅಭಿಮಾನಿ ಎಂದು ಸ್ವತಃ ಹೇಳಿಕೊಂಡಿರುವ ಬಾಲಿವುಡ್‌ ನಟ ವಿವೇಕ್ ಒಬೆರಾಯ್‌ ಅವರು ‘ಪಿಎಂ ನರೇಂದ್ರ ಮೋದಿ’ ಬಯೋಪಿಕ್‌ನಲ್ಲಿ ನಟಿಸಿದ್ದು, ಮತದಾನದ ಮೇಲೆ ಪ್ರಭಾವ ಬೀರಬಹುದು ಎಂದು ಚುನಾವಣೆ ಆಯೋಗ ಲೋಕಸಭಾ ಚುನಾವಣೆ ಮುಗಿಯುವವರೆಗೂ ಚಿತ್ರ ಬಿಡುಗಡೆಗೆ ತಡೆ ನೀಡಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾದ ಊರ್ಮಿಳಾ, ಬಿಜೆಪಿಯ ಸಂಸದ ಗೋಪಾಲ್‌ ಶೆಟ್ಟಿ ವಿರುದ್ಧ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. (ಏಜೆನ್ಸೀಸ್)