ಜೈವಿಕ ಇಂಧನ ಚಾಲಿತ ದೇಶದ ಮೊದಲ ವಿಮಾನ ಪ್ರಾಯೋಗಿಕ ಹಾರಾಟ ಯಶಸ್ವಿ

ನವದೆಹಲಿ: ಭಾರತದ ಮೊದಲ ಜೈವಿಕ ಇಂಧನ ಚಾಲಿತ ವಿಮಾನದ ಪ್ರಾಯೋಗಿಕ ಹಾರಾಟ ಇಂದು ಯಶಸ್ವಿಯಾಗಿ ನಡೆಯಿತು. 72 ಆಸನಗಳಿರುವ ಈ ಸ್ಪೈಸ್​ಜೆಟ್ ವಿಮಾನದಲ್ಲಿ ಭಾಗಶಃ ಜೈವಿಕ ಇಂಧನವನ್ನು ಬಳಕೆ ಮಾಡಲಾಗಿದ್ದು ಡೆಹ್ರಾಡೂನ್​ ನಿಂದ ದೆಹಲಿಯವರೆಗೆ ಪ್ರಾಯೋಗಿಕವಾಗಿ ಹಾರಾಟ ನಡೆಸಿತು.

ವಿಮಾನಯಾನದ ವೆಚ್ಚ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೃಷಿ ತ್ಯಾಜ್ಯ, ಖಾದ್ಯಯೋಗ್ಯವಲ್ಲದ ತೈಲಗಳು, ಕಸ ತ್ಯಾಜ್ಯಗಳಲ್ಲಿರುವ ಜೈವಿಕ ವಿಘಟಕಗಳಿಂದ ತಯಾರಿಸಿದ ಇಂಧನವನ್ನು ವಿಮಾನದಲ್ಲಿ ಪ್ರಾಯೋಗಿಕವಾಗಿ ಬಳಸಲಾಗಿದೆ. ಈ ವಿಮಾನಗಳು ವಾಯುಮಾಲಿನ್ಯ ನಿಯಂತ್ರಣ ಮಾಡುತ್ತವೆ ಹಾಗೂ ಕಾರ್ಯಕ್ಷಮತೆ ಸಾಮರ್ಥ್ಯ ಅಧಿಕವಾಗಿರುತ್ತದೆ. ದುಬಾರಿ ಟರ್ಬೈನ್​ಗಳಿಗಿಂತ ಕಡಿಮೆ ಖರ್ಚಿನಲ್ಲಿ ತಯಾರಿಕೆಯಾಗುವುದರಿಂದ ವಿಮಾನಯಾನದ ವೆಚ್ಚದಲ್ಲೂ ಕಡಿತವಾಗುತ್ತದೆ ಎನ್ನಲಾಗಿದೆ.

ಇಂದಿನ ಪ್ರಾಯೋಗಿಕ ಹಾರಾಟಕ್ಕೆ ಡೆಹ್ರಾಡೂನ್​ ಮೂಲದ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಪೆಟ್ರೋಲಿಯಂ ಸಂಸ್ಥೆ ಜೈವಿಕ ಇಂಧನವನ್ನು ಒದಗಿಸಿದ್ದಲ್ಲದೆ ಅದನ್ನು ಬಳಸುವುದರಿಂದ ವಿಮಾನ ಎಷ್ಟು ಸುರಕ್ಷಿತ ಎಂಬುದನ್ನೂ ಸರಿಯಾಗಿ ಪರಿಶೀಲನೆ ಮಾಡಿದೆ.
ಡೆಹ್ರಾಡೂನ್ ನಿಂದ ಹಾರಾಟ ನಡೆಸಿ ದೆಹಲಿ ಏರ್​ಪೋರ್ಟ್​ನಲ್ಲಿ ವಿಮಾನ ಲ್ಯಾಂಡ್​ ಆಗಿದ್ದು ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ನಿತಿನ್​ ಗಡ್ಕರಿ, ಸುರೇಶ್​ ಪ್ರಭು, ಧರ್ಮೇಂದ್ರ ಪ್ರಧಾನ್​, ಡಾ. ಹರ್ಷವರ್ಧನ್​ ಮತ್ತು ಜಯಂತ್​ ಸಿನ್ಹಾ ಇತರರು ಇದ್ದರು.