ಬಿಂದು, ಕನಕದುರ್ಗ ನಿಜ ಭಕ್ತರೇ? ಹೈಕೋರ್ಟ್ ಪ್ರಶ್ನೆ

ಕಾಸರಗೋಡು: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಬಿಂದು ಹಾಗೂ ಕನಕದುರ್ಗ ನಿಜವಾದ ಭಕ್ತರಾಗಿದ್ದರೇ? ಅವರನ್ನು ಶಬರಿಮಲೆಗೆ ಕಳುಹಿಸಿಕೊಡುವಲ್ಲಿ ಸರ್ಕಾರ ಪ್ರತ್ಯೇಕ ಅಜೆಂಡಾ ಹೊಂದಿತ್ತೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ ವರದಿ ಪರಿಗಣಿಸುವ ಸಂದರ್ಭ ಈ ಪ್ರಶ್ನೆ ಎತ್ತಿದೆ.

ಶಬರಿಮಲೆಗೆ ಪ್ರವೇಶಿಸಿರುವ ಮಹಿಳೆಯರು ನೈಜ ಭಕ್ತರೇ ಅಥವಾ ಬೇರೆ ಉದ್ದೇಶವಿಟ್ಟು ಬಂದಿದ್ದರೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು. ಶಬರಿಮಲೆ ಸರ್ಕಾರ, ಸಂಘಟನೆ ಅಥವಾ ಯಾವುದೇ ವ್ಯಕ್ತಿಗಳಿಗೆ ಶಕ್ತಿ ಪ್ರದರ್ಶನಕ್ಕಿರುವ ಸ್ಥಳವಲ್ಲ. ಇದು ಭಕ್ತರ ತಾಣ ಎಂದಿರುವ ಕೋರ್ಟ್, ಶಬರಿಮಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಇದೇ ಸಂದರ್ಭ ಮನಿದಿ ಸಂಘಟನೆ ಕಾರ್ಯಕರ್ತರು ಸಂಚರಿಸಿದ ಖಾಸಗಿ ವಾಹನಕ್ಕೆ ಪಂಪೆಗೆ ತೆರಳಲು ಅನುಮತಿ ನೀಡಿರುವ ಕ್ರಮವನ್ನೂ ನ್ಯಾಯಾಲಯ ಪ್ರಶ್ನಿಸಿದೆ. ನೀಲಕ್ಕಲ್‌ನಲ್ಲಿ ಇವರನ್ನು ಇಳಿಸಿದರೆ, ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂಬ ಇಂಟೆಲಿಜೆನ್ಸ್ ವರದಿ ಹಿನ್ನೆಲೆಯಲ್ಲಿ ಪಂಪೆಗೆ ಕರೆದೊಯ್ದಿರುವುದಾಗಿ ಸರ್ಕಾರದ ಪರ ವಕೀಲರು ವಾದಿಸಿದಾಗ, ಪಂಪೆಗೆ ಕರೆದೊಯ್ದಲ್ಲಿ ಅಹಿತಕರ ಘಟನೆ ನಡೆಯುವುದಿಲ್ಲ ಎಂದು ಏನು ಖಾತರಿ ಇತ್ತು ಎಂದು ಪ್ರಶ್ನಿಸಿ ಸರ್ಕಾರದ ವರದಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಖಾಸಗಿ ವಾಹನಗಳಿಗೆ ಪಂಪೆಗೆ ತೆರಳಲು ಅವಕಾಶವಿಲ್ಲದಿದ್ದರೂ, ಮನಿದಿ ಸಂಘಟನೆ ಸದಸ್ಯರ ವಾಹನ ಪಂಪೆಗೆ ಬಿಟ್ಟಿರುವ ಬಗ್ಗೆ ಹೈಕೋರ್ಟ್ ನೇಮಿಸಿದ ವಿಶೇಷ ಕಮಿಷನ್ ವರದಿ ಸಲ್ಲಿಸಿತ್ತು.