ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಬಳಿಯಿರುವ ಬೃಹತ್ ಜಾಹೀರಾತು ಫಲಕದಲ್ಲಿ ದಿಢೀರ್ ಆಗಿ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕ ಎದುರಾದ ಘಟನೆ ಶುಕ್ರವಾರ ನಡೆದಿದೆ.
ಏರ್‌ಪೋರ್ಟ್ ರಸ್ತೆಯನ್ನು ಸಂಪರ್ಕಿಸುವ ಮೇಲ್ಸೇತುವೆಯ ರಸ್ತೆಬದಿಯಿರುವ ಬಿಡಿಎ ಪಾರ್ಕ್‌ನಲ್ಲಿ ಬೃಹತ್ ಜಾಹೀರಾತು ಫಲಕ ಅಳವಡಿಸಲಾಗಿದೆ. ಮಧ್ಯಾಹ್ನ ಫಲಕದಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿಗಳು ಶಾರ್ಟ್ ಸಕೀರ್ಟ್ ಆಗಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತು. ಲಕವು ರಸ್ತೆಯಿಂದ 25 ಅಡಿ ಎತ್ತರದಲ್ಲಿದ್ದ ಕಾರಣ ಬೆಂಕಿ ನಂದಿಸಲು ದಾರಿಹೋಕರಿಂದ ಸಾಧ್ಯವಾಗಲಿಲ್ಲ. ಇದರಿಂದ ಫಲಕದಲ್ಲಿದ್ದ ಜಾಹೀರಾತು ಪರದೆ ಸುಟ್ಟು ಅದರ ತುಣಕುಗಳು ರಸ್ತೆಗೆ ಬೀಳಲಾರಂಭಿಸಿತು. ಮುಂಜಾಗ್ರತಾ ಕ್ರಮವಾಗಿ ಟ್ರಾಫಿಕ್ ಪೊಲೀಸರು ಸಂಚಾರವನ್ನು ಕೆಲ ಕಾಲ ತಡೆದು ನಿಲ್ಲಿಸಿದರು.
ಕೆಲ ಸಮಯದ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಲವಾದರು. ಫಲಕವು ಎತ್ತರದಲ್ಲಿದ್ದ ಕಾರಣ ಸಿಬ್ಬಂದಿ ಬೆಂಕಿ ಕಾಣಿಸಿಕೊಂಡಿದ್ದ ಜಾಗಕ್ಕೆ ನೀರನ್ನು ಚಿಮ್ಮಿಸಲು ಹರಸಾಹಸ ಪಡಬೇಕಾಯಿತು. ಘಟನೆ ನಡೆದ ವೇಳೆ ಹೆಬ್ಬಾಳ ಮೇಲ್ಸೇತುವೆ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂದಿತು. ಘಟನೆಗೆ ಶಾರ್ಟ್ ಸರ್ಕೀಟ್ ಕಾರಣವೆಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.