ಬೆಂಗಳೂರು : ಇತ್ತೀಚೆಗೆ ಚಿತ್ರರಂಗಕ್ಕೂ ಕಡಲೆಕಾಯಿ ಪರಿಷೆ ಹತ್ತಿರವಾದಂತಿದೆ. ಕೆಲವು ದಿನಗಳ ಹಿಂದೆ ಕೆ.ಪಿ. ಶ್ರೀಕಾಂತ್ ನಿರ್ಮಾಣ ಹಾಗೂ ದುನಿಯಾ ವಿಜಯ್ ನಿರ್ದೇಶನ ಮತ್ತು ನಾಯಕತ್ವದ ‘ಸಲಗ’ ಚಿತ್ರದ ಶೂಟಿಂಗ್ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ನಡೆದಿತ್ತು. ಇದೀಗ ಅದೇ ಹಾದಿಯಲ್ಲಿ ಬಿಲ್-ಗೇಟ್ಸ್ ಕೂಡ ಸಾಗುತ್ತಿದ್ದಾರೆ. ಅಂದರೆ, ‘ಬಿಲ್ಗೇಟ್ಸ್’ ಸಿನಿಮಾದ ಟ್ರೇಲರ್ ಜ. 15ರಂದು ಸೋಮಪುರದಲ್ಲಿ ನಡೆಯುವ ಕಡಲೆಕಾಯಿ ಪರಿಷೆಯಲ್ಲಿ ಬಿಡುಗಡೆ ಆಗಲಿದೆ.
‘ಶ್ರೀಪಾಂಚಜನ್ಯ ಸಿನಿಕ್ರಿಯೇಷನ್ಸ್’ ಬ್ಯಾನರ್ನಲ್ಲಿ ನಿರ್ವಣವಾಗಿರುವ ‘ಬಿಲ್ ಗೇಟ್ಸ್’ ಸಿನಿಮಾದ ಟ್ರೇಲರನ್ನು ಲಕ್ಷಾಂತರ ಜನರ ಸಮ್ಮುಖದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ‘ಸೋಮಪುರ ಬಳಿಯ ಚೆನ್ನವೀರಯ್ಯನಪಾಳ್ಯದ ವರಾಹಸಂದ್ರದಲ್ಲಿರುವ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಕಡಲೆಕಾಯಿ ಪರಿಷೆ ನಡೆಯಲಿದೆ. ಇದರಲ್ಲಿ 2ರಿಂದ 3 ಲಕ್ಷ ಜನರು ಭಾಗಿಯಾಗುತ್ತಾರೆ. ಈ ಚಿತ್ರವನ್ನು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನವಾಗಿ ಹೀಗೆ ಲಕ್ಷಾಂತರ ಜನರ ಮಧ್ಯೆ ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ. ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷ ಎಂ. ರುದ್ರೇಶ್ ಸಹಕಾರದಲ್ಲಿ ಈ ಸಮಾರಂಭ ನಡೆಯಲಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸಿ. ಶ್ರೀನಿವಾಸ್.
‘ನಿಜವಾದ ಬಿಲ್ಗೇಟ್ಸ್ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಿನಿಮಾದಲ್ಲಿ ಶಿಶಿರ್ ಶಾಸ್ತ್ರಿ ಬಿಲ್ ಹಾಗೂ ಚಿಕ್ಕಣ್ಣ ಗೇಟ್ಸ್ ಎಂಬ ಪ್ರಧಾನಪಾತ್ರಗಳಲ್ಲಿ ನಟಿಸಿರುವುದರಿಂದ ಈ ಟೈಟಲ್ ಇಡಲಾಗಿದೆ. ನಾಯಕಿಯರಾಗಿ ರೋಜಾ ರಾವ್, ಅಕ್ಷತಾ ರೆಡ್ಡಿ ಅಭಿನಯಿಸಿದ್ದಾರೆ. ನೋಬಿನ್ ಪೌಲ್ ಸಂಗೀತ, ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ರಾಜಶೇಖರ್ ಅವರ ಚಿತ್ರಕಥೆ ಇರುವ ಈ ಚಿತ್ರವನ್ನು ಫೆಬ್ರವರಿಯಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಸಿನಿತಂಡ.