ಮೇಲ್ವರ್ಗಕ್ಕೆ ಮೀಸಲಾತಿ ಸುಪ್ರೀಂ ಕಟಕಟೆಗೆ

ನವದೆಹಲಿ: ಆರ್ಥಿಕ ದುರ್ಬಲರಾದ ಮೇಲ್ವರ್ಗದವರಿಗೂ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ. 10 ಮೀಸಲು ನೀಡುವ ಐತಿಹಾಸಿಕ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್​ನ ಉಭಯ ಸದನಗಳು ಅನುಮೋದನೆ ನೀಡಿದ ಬೆನ್ನಲ್ಲೇ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಯೂಥ್​ ಫಾರ್​ ಈಕ್ವಾಲಿಟಿ ಆರ್ಗನೈಸೇಷನ್​ ಮತ್ತು ಕೌಶಲ್​ ಕಾಂತ್​ ಮಿಶ್ರಾ ಎಂಬುವವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಕೇವಲ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿ ಹೇಗೆ ನೀಡಲಾಗುತ್ತದೆ. ಮಸೂದೆಯಲ್ಲಿ ಸಂವಿಧಾನದ ಪ್ರಮುಖ ವಿಷಯಗಳನ್ನು ಉಲ್ಲಂಘಿಸಲಾಗಿದೆ. ಜತೆಗೆ ಸುಪ್ರೀಂ ಕೋರ್ಟ್​ ಆದೇಶದನ್ವಯ ಶೇ.50 ಕ್ಕಿಂತ ಹೆಚ್ಚು ಮೀಸಲಾತಿ ನೀಡುವಂತಿಲ್ಲ ಎಂದು ಅರ್ಜಿದಾರರು ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ಮಸೂದೆಗೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರೆತಿತ್ತು. ಬುಧವಾರ ರಾಜ್ಯಸಭೆಯಲ್ಲಿ ಮಸೂದೆ ಯಾವುದೇ ಬದಲಾವಣೆ ಇಲ್ಲದೆ ಅಂಗೀಕಾರ ಪಡೆದುಕೊಂಡಿತ್ತು. ರಾಜ್ಯಸಭೆಯಲ್ಲಿ ಮಸೂದೆ ಪರ 165 ಮತ್ತು ವಿರುದ್ಧವಾಗಿ 7 ಸದಸ್ಯರು ಮತ ಚಲಾಯಿಸಿದ್ದರು. (ಏಜೆನ್ಸೀಸ್​)