ಉಗ್ರರನ್ನು ಬಿಟ್ಟು ಟೀಕಿಸುವವರ ವಿರುದ್ಧ ಪಾಕ್ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ: ಬಿಲಾವಲ್​ ಭುಟ್ಟೊ

ಇಸ್ಲಾಮಾಬಾದ್​: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ಅವರು ದೇಶದಲ್ಲಿ ಸಕ್ರಿಯವಾಗಿರುವ ಉಗ್ರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದರೆ, ತಮ್ಮ ಸರ್ಕಾರವನ್ನು ಟೀಕಿಸುವವರ ವಿರುದ್ಧ ಮಾತ್ರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಬಿಲಾವಲ್​ ಭುಟ್ಟೋ ಕಿಡಿ ಕಾರಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಬೆನಜೀರ್​ ಭುಟ್ಟೋ ಪುತ್ರ ಬಿಲಾವಲ್​ ಭುಟ್ಟೋ ‘ನೀವು ನಿಷೇಧಕ್ಕೆ ಒಳಪಟ್ಟಿರುವ ಉಗ್ರ ಸಂಘಟನೆಗಳಿಗೆ ದೇಶದಲ್ಲಿ ವಿನಾಯಿತಿ ನೀಡಲಾಗಿದೆ ಎಂಬ ಸಂದೇಶವನ್ನು ವಿಶ್ವಕ್ಕೆ ನೀಡ ಬಯಸುತ್ತೀರಾ? ನಮ್ಮ ದೇಶದ ಅಮಾಯಕ ಜನರನ್ನು ಹತ್ಯೆ ಮಾಡುತ್ತಿರುವ ಮತ್ತು ಬೇರೆ ದೇಶಗಳಿಗೂ ಹೋಗಿ ಉಗ್ರವಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಉಗ್ರ ಸಂಘಟನೆಗಳ ವಿರುದ್ಧ ನೀವು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಇಮ್ರಾನ್​ ಖಾನ್​ ವಿರುದ್ಧ ವಾಗ್ದಾಳಿ ನಡೆಸಿದರು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆದ ಬಳಿಕ ವಿಶ್ವಮಟ್ಟದಲ್ಲಿ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಉಗ್ರ ಹಫೀಜ್​ ಸಯೀದ್​ನ ಜಮಾತ್​ ಉದ್​ ದವಾ (ಜೆಯುಡಿ) ಮತ್ತು ಫಲಾಹ್​ ಎ ಇನ್ಸಾನಿಯತ್​ ಸಂಘಟನೆಗಳನ್ನು ನಿಷೇಧಿಸಿರುವುದಾಗಿ ಪಾಕ್​ ಸರ್ಕಾರ ತಿಳಿಸಿತ್ತು. ಆದರೆ, ಮತ್ತೊಂದೆಡೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಗ್ರ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಮನವಿಗೆ ಪಾಕ್​ನ ಪರಮಾಪ್ತ ರಾಷ್ಟ್ರ ಚೀನಾ ಅಡ್ಡಗಾಲು ಹಾಕಿದೆ. ಈ ಮೂಲಕ ಪಾಕ್​ ಉಗ್ರರ ವಿರುದ್ಧದ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿದ್ದಾರೆ. (ಏಜೆನ್ಸೀಸ್​)