ಮೋದಿ ಅಲೆ ತಡೆಯಲು ಸಾಧ್ಯವಿಲ್ಲ

ಬೀಳಗಿ: ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಸೇವೆ ಮತ್ತೆ ಬೇಕು ಎಂದು ದೇಶದ ಮೂಲೆಮೂಲೆಯಲ್ಲಿ ‘ಮೋದಿ ಮೋದಿ’ ಎನ್ನುವ ಸ್ವಾಭಿಮಾನದ ಅಲೆ ಜನಸಾಮಾನ್ಯರಿಂದ ಕೇಳಿ ಬರುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಲೂಕಿನ ಗಲಗಲಿ ಗ್ರಾಮದಲ್ಲಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮೋದಿ ಅಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರಿಂದ ತಡೆಯಲು ಸಾಧ್ಯವಿಲ್ಲ. ಈಗಾಗಲೇ ದೇಶದ ಮತದಾರರು ತೀರ್ಮಾನ ಮಾಡಿದ್ದಾರೆ. ಉತ್ತಮ ನಾಯಕ ಮೋದಿಯವರ ಸೇವೆ ದೇಶಕ್ಕೆ ಬೇಕಾಗಿದೆ. ರಾಜ್ಯದ ಹಣ ಕೊಳ್ಳೆ ಹೊಡೆಯಲು ಹಾಗೂ ಹಿಂದಿನ ಕಾಂಗ್ರೆಸಿನಲ್ಲಿ ಭ್ರಷ್ಟಾಚಾರದ ಕರ್ಮಕಾಂಡ ಮುಚ್ಚಿಹಾಕಲು ದೋಸ್ತಿ ಸರ್ಕಾರ ರಚನೆಯಾಗಿದೆ ಎಂದು ದೂರಿದರು.

ಶಾಸಕ ಮುರುಗೇಶ ನಿರಾಣಿ ಮಾತನಾಡಿ, ರಾಜ್ಯದ 28 ಲೋಕಸಭೆ ಕ್ಷೇತ್ರದಲ್ಲಿ 22 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಪಿ.ಸಿ. ಗದ್ದಿಗೌಡರ ತಮ್ಮ ರಾಜಕೀಯ ವೃತ್ತಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಮೂರು ಬಾರಿ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿಯೂ 2 ಲಕ್ಷ ಮತಗಳ ಅಂತರದಿಂದ ಆಯ್ಕೆಯಾಗಲಿದ್ದಾರೆ ಎಂದರು.

ಅಭ್ಯರ್ಥಿ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಪಿ.ಎಸ್. ಪೂಜಾರಿ ಮಾತನಾಡಿದರು. ನಾರಾಯಣಸಾ ಭಾಂಡಗೆ, ಎಂ. ಎಂ. ಶಂಭೋಜಿ, ಅದೃಶಪ್ಪ ದೇಸಾಯಿ, ಎಪಿಎಂಸಿ ಸದಸ್ಯ ರಾಮಣ್ಣ ಕಾಳಪ್ಪಗೋಳ, ಮೋಹನ ಜಾಧವ, ಹೊಳಬಸು ಬಾಳಶೆಟ್ಟಿ, ಜಗದೀಶ ಚಿರಾಳಶೆಟ್ಟಿ, ಚನಮಲ್ಲಪ್ಪ ಗುಗ್ಗರಿ ಇತರರಿದ್ದರು.

ಬೀಳಗಿ ಮತಕ್ಷೇತ್ರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್‌ನಿಂದ ಶೂನ್ಯ ಸಾಧನೆಯಾಗಿದೆ. ಈ ದಿಸೆಯಲ್ಲಿ ಏ.23ರಂದು ನಡೆಯುವ ಮತದಾನದಂದು ಬಿಜೆಪಿಗೆ ಮತ ನೀಡಿ ಆಶೀರ್ವದಿಸಬೇಕು.
– ಮುರುಗೇಶ ನಿರಾಣಿ, ಶಾಸಕ

Leave a Reply

Your email address will not be published. Required fields are marked *