ಶಿಕ್ಷಕರ ನೇಮಕ್ಕೆ ಆಗ್ರಹಿಸಿ ಪ್ರತಿಭಟನೆ

ಬೀಳಗಿ: ತಾಲೂಕಿನ ಸುನಗ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಇಂಗ್ಲಿಷ್ ಮತ್ತು ಪ್ರಾಥಮಿಕ ಶಾಲೆಗೆ ವಿಜ್ಞಾನ ವಿಷಯ ಶಿಕ್ಷಕರ ನೇಮಕಕ್ಕೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

ಹಲವು ಬಾರಿ ಶಾಲೆ ಸಮಸ್ಯೆಗಳನ್ನು ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶಿಕ್ಷಕರ ಕೊರತೆ ಸರಿಪಡಿಸದಿದ್ದರೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ತೋಳಮಟ್ಟಿ ಮಾತನಾಡಿ, ಶ್ರೀಮಂತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಕಲಿಸುತ್ತಾರೆ. ಬಡ ಮಕ್ಕಳಿಗಾಗಿ ಸರ್ಕಾರಿ ಶಾಲೆಗಳು ಇವೆ. ಆದರೆ, ಇಲ್ಲಿ ಅಗತ್ಯ ಶಿಕ್ಷಕರಿಲ್ಲ. ಈಗಿದ್ದವರು ಸರಿಯಾಗಿ ಕಲಿಸುತ್ತಿಲ್ಲ. ಹೀಗಾಗಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಹೀಗಾದರೆ ಸರ್ಕಾರಿ ಶಾಲೆಗಳು ಯಾವ ಪುರುಷಾರ್ಥಕ್ಕೆ ಇರುವುದು ಎಂದು ಪ್ರಶ್ನಿಸಿದರು.

ಜೂನ್ ತಿಂಗಳ ಪ್ರಾರಂಭದಲ್ಲಿ ಶಿಕ್ಷಕರನ್ನು ನೇಮಿಸಬೇಕು. ಇಲ್ಲದಿದ್ದರೆ ಶಾಲೆಗೆ ಬೀಗ ಜಡಿದು ಮಕ್ಕಳೊಂದಿಗೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ಕೆ.ಪಿ. ವಿರಕ್ತಮಠ, ವಿಠಲ ದೊಡಮನಿ, ಸಿದ್ದಪ್ಪ ಕುರಿ, ಲಕ್ಷ್ಮಣ ಗಾಳಿ, ನಾಗೇಶ ಆಲಗುಂಡಿ, ಕರಿಯಪ್ಪ ಬೂದಿಹಾಳ, ಡೋಂಗ್ರೀಸಾಬ ನದಾಫ್, ನಂದೂಗೌಡ ವಂದಾಲ, ಖಾಜಿ ಮುಜಾವರ, ರವಿ ನಾಗರಾಳ, ರಾಜು ಚಿಕ್ಕಣ್ಣವರ, ಲಕ್ಕಪ್ಪ ಮೇಲನಾಡ ಇತರರಿದ್ದರು.

Leave a Reply

Your email address will not be published. Required fields are marked *