ಬೀಳಗಿ: ಸ್ವಚ್ಛ ಭಾರತ ಅಭಿಯಾನದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಟ್ಟಣ ಹಾಗೂ ಗ್ರಾಮಗಳ ಸ್ವಚ್ಛತೆಗೆ ಮುಂದಾಗಿವೆ. ಆದರೆ, ಬೀಳಗಿ ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ರಸ್ತೆ ಮೇಲೆ ಮಳೆ, ಬಚ್ಚಲು ಹಾಗೂ ನಲ್ಲಿ ನೀರು ನಿಂತು ಗಬ್ಬು ವಾಸನೆ ಬೀರುತ್ತಿದೆ.
ಗಾಂಧಿ ನಗರದ ಎಸ್.ಕೆ. ಪತ್ರಿಯವರ ಮನೆ ಹತ್ತಿರ ರಸ್ತೆ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಇಲ್ಲಿಯ ನಿವಾಸಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವಾರ್ಡ್ ಸದಸ್ಯರಿಗೆ ಹೇಳಿದರೆ ಪಟ್ಟಣ ಪಂಚಾಯಿತಿಗೆ ಮೀಸಲಾತಿ ಪ್ರಕಟವಾಗದ ಕಾರಣ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎನ್ನುತ್ತಾರೆ ಎಂದು ನಿವಾಸಿಗಳು ದೂರಿದರು.
ರಸ್ತೆ ಮೇಲೆ ಕೊಳಚೆ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ.
ಮಕ್ಕಳು ಜ್ವರದಿಂದ ಬಳಲುತ್ತಿದ್ದು, ನಿವಾಸಿಗಳು ಭಯ ಭೀತರಾಗಿದ್ದಾರೆ. ಕೂಡಲೇ ಅಧಿಕಾರಿಗಳು ರಸ್ತೆ ದುರಸ್ತಿ ಕೈಗೊಂಡು ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ವರ್ತಕ ಎಸ್.ಕೆ. ಪತ್ರಿ ಒತ್ತಾಯಿಸಿದ್ದಾರೆ.
ಸೊಳ್ಳೆಗಳ ಕಾಟ ತಪ್ಪಿಸಿ
ಪಟ್ಟಣದ ಗಟಾರಗಳು ಸೊಳ್ಳೆ ಉತ್ಪತ್ತಿ ತಾಣಗಳಾಗಿದ್ದು, ಡಿಡಿಟಿ ಪುಡಿಯನ್ನು ಸಿಂಪಡಿಸಿ ಸ್ವಲ್ಪ ಮಟ್ಟಿಗಾದರೂ ಸೊಳ್ಳೆಗಳ ಕಾಟ ತಡೆಗಟ್ಟಬೇಕಿದೆ. ಇಂತಹ ಅವ್ಯವಸ್ಥೆಯಲ್ಲೇ ಮಕ್ಕಳು, ವೃದ್ಧರು ಮತ್ತು ವಾಹನ ಸವಾರರು ಸಂಚರಿಸುತ್ತಿದ್ದಾರೆ. ಆಯತಪ್ಪಿ ಬಿದ್ದು ಅನಾಹುತ ಸಂಭವಿಸುವ ಮೊದಲು ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕಿದೆ.
ಗಾಂಧಿ ನಗರದ ಎಸ್.ಕೆ.ಪತ್ರಿಯವರ ಮನೆ ಹತ್ತಿರದ ರಸ್ತೆಯನ್ನು ಪರಿಶೀಲನೆ ಮಾಡಲು ಇಂಜಿನಿಯರ್ ಅವರಿಗೆ ಸೂಚನೆ ನೀಡಲಾಗುವುದು. ಅವರಿಂದ ಮಾಹಿತಿ ಪಡೆದ ನಂತರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
ಸುನೀಲ ಬಬಲಾದಿ, ಪಪಂ ಮುಖ್ಯಾಧಿಕಾರಿ