ಮೋದಿ ಮತ್ತೆ ಪ್ರಧಾನಿ ಆಗೋದು ಖಚಿತ

ಬೀಳಗಿ: ದೇಶ ವಿದೇಶದಲ್ಲಿನ ಜನರು ಪ್ರಧಾನಿ ನರೇಂದ್ರ ಮೋದಿಯವರ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಅವೇ ಮತ್ತೆ ಪ್ರಧಾನಿಯಾಗಲಿ ಎಂದು ಸಂಕಲ್ಪ ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶವೇ ಇಂದು ಮೋದಿ ಮೋದಿ ಎಂದು ಹೇಳುತ್ತಿದೆ. ಕಾಶ್ಮೀರದಲ್ಲಿ 370 ಕಲಂ ತೆರವುಗೊಳಿಸಿ ಒಂದೇ ಕಾನೂನು ಜಾರಿಗೆ ತರಲಾಗುತ್ತದೆ. ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲ ಒಂದೇ ತಾಯಿ ಮಕ್ಕಳಂತೆ ಇರುವಾಗ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷದವರು ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ನಾವು ಮುಸ್ಲಿಂ ವಿರೋಧಿಯಲ್ಲ. ಮುಸ್ಲಿಮರಲ್ಲಿಯೂ ಬಹಳಷ್ಟು ಜನ ರಾಷ್ಟ್ರಪ್ರೇಮಿಗಳಿದ್ದಾರೆ. ಅವರನ್ನು ಗೌರವದಿಂದ ಕಾಣುತ್ತೇವೆ ಎಂದರು.

ಶಾಸಕ ಮುರುಗೇಶ ಆರ್. ನಿರಾಣಿ ಮಾತನಾಡಿ, ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ಪಿ.ಸಿ. ಗದ್ದಿಗೌಡರ ಅವರು ಅಧಿಕ ಮತಗಳಿಂದ ಆಯ್ಕೆಯಾಗಲಿದ್ದಾರೆ ಎಂದರು.

ಅಭ್ಯರ್ಥಿ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಪಿ.ಎಚ್. ಪೂಜಾರ, ಮಾಜಿ ಎಂಎಲ್‌ಸಿ ನಾರಾಯಣಸಾ ಭಾಂಡಗೆ ಮಾತನಾಡಿದರು. ಎಪಿಎಂಸಿ ಸದಸ್ಯ ರಾಮಣ್ಣ ಕಾಳಪ್ಪಗೋಳ, ಡಿ.ಬಿ. ನಾಗನೂರ, ವೀರಣ್ಣ ಹಿರೇಗೌಡರ, ಎಂ.ಎಂ. ಶಂಭೋಜಿ, ಮಲ್ಲಪ್ಪ ಮುತ್ತಲದಿನ್ನಿ, ಭೀಮಸಿ ಮೇಲ್ನಾಡ, ನಾಗಪ್ಪ ದಿವಟಗಿ, ಸಂಗಪ್ಪ ಭಮ್ಮಣ್ಣವರ, ನಿಂಗನಗೌಡ ಪಾಟೀಲ ಇತರರಿದ್ದರು.