ಆಹಾರ ಸೇವಿಸಿ 16 ಮಕ್ಕಳು ಅಸ್ವಸ್ಥ

ಬೀಳಗಿ: ಪಟ್ಟಣದ ಎಕ್ಸ್‌ಲೆನ್ಸ್ ಕೋಚಿಂಗ್ ಸೆಂಟರ್ ವಸತಿ ಶಾಲೆಯಲ್ಲಿ ಶುಕ್ರವಾರ ಬೆಳಗಿನ ಉಪಾಹಾರ ಸೇವಿಸಿ 16 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಎಲ್ಲ ಮಕ್ಕಳು ಗುಣಮುಖರಾಗಿದ್ದಾರೆ ಎಂದು ಮಕ್ಕಳಿಗೆ ಚಿಕಿತ್ಸೆ ನೀಡಿರುವ ಡಾ.ಆರ್.ಎಸ್. ಮಂಟೂರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೋಚಿಂಗ್ ಸೆಂಟರ್‌ನ ಮುಖ್ಯಸ್ಥ ರೇವಣಯ್ಯ ಹಿರೇಮಠ, ಸೆಂಟರ್‌ನಲ್ಲಿ 60 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅಸ್ವಸ್ಥಗೊಂಡ ಮಕ್ಕಳಲ್ಲಿ ಐವರಿಗೆ ವಾಂತಿಭೇದಿ ಉಂಟಾಗಿತ್ತು. ಮೂರು ದಿನಗಳ ಹಿಂದೆ ಮೂವರು ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನೀರು ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರಾಗಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎಂದು ರೇವಣಯ್ಯ ಹೇಳಿದರು.

ಬಿಇಒ ಎಚ್.ಜಿ. ಮಿರ್ಜ ಮಾತನಾಡಿ, ಕೋಚಿಂಗ್ ಸೆಂಟರ್ ನಡೆಸಲು ಹಕವರು ಪರವಾನಗಿ ಕೇಳಿದ್ದಾರೆ. ಪರವಾನಗಿ ಇಲ್ಲದ ಕೋಚಿಂಗ್ ಸೇಂಟರ್‌ಗಳ ಮೇಲೆ ನಿಗಾವಹಿಸಲು ಆಯಾ ಭಾಗದ ಸಿಆರ್‌ಸಿ ಮತ್ತು ಅಧಿಕಾರಿಗಳ ಸಭೆ ಕರೆದು ಈ ಮೊದಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕೋಚಿಂಗ್ ಸೆಂಟರ್‌ಗೆ ಪರವಾನಗಿ ದೊರೆಯುವವರೆಗೂ ಮಕ್ಕಳನ್ನು ಮನೆಗೆ ಕಳುಹಿಸಬೇಕು. ಪರವಾನಗಿ ದೊರೆಯುವವರೆಗೆ ಇಂತಹ ಸೆಂಟರ್‌ಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದರು.

ಸುದ್ದಿ ತಿಳಿದು ತಾಲೂಕಾಸ್ಪತ್ರೆಗೆ ಭೇಟಿ ನೀಡಿದ ಡಿಎಚ್‌ಒ ಅನಂತ ದೇಸಾಯಿ ಮಕ್ಕಳ ಆರೋಗ್ಯ ಕುರಿತು ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ಆಹಾರ ಹಾಗೂ ನೀರಿನಲ್ಲಿ ಬದಲಾವಣೆಯಾಗಿದ್ದರಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಯಾವುದೇ ತೊಂದರೆ ಇಲ್ಲ. ಸೇವನೆ ಮಾಡಿದ ಆಹಾರವನ್ನು ಪ್ರಯೋಗಾಲಯಕ್ಕೆ ಕಳಿಸಲಾಗುವುದು. ಘಟನೆ ಕುರಿತು ತನಿಖೆ ನಡೆಸಿ ವರದಿ ಬಂದ ನಂತರ ತರಬೇತಿ ಕೆಂದ್ರದ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಆಹಾರ ಇಲಾಖೆ ಅಧಿಕಾರಿ ಮಾತನಾಡಿ, ಆಹಾರ ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಹೇಳಿದರು. ತಹಸೀಲ್ದಾರ್ ಉದಯ ಕುಂಬಾರ, ಬಿಇಒ ಹನುಮಂತಗೌಡ ಮಿರ್ಜಿ, ಸಿಪಿಐ ರವಿಚಂದ್ರ ಡಿ.ಬಿ, ಟಿಎಚ್‌ಒ ಡಾ. ದಯಾನಂದ ಕರೆಣ್ಣವರ, ಡಾ. ಸಂಜಯ ಯಡಹಳ್ಳಿ ಮಕ್ಕಳ ಆರೋಗ್ಯ ವಿಚಾರಿಸಿದರು.

 

Leave a Reply

Your email address will not be published. Required fields are marked *